Advertisement
ಹೌದು.., ಕೇವಲ 15 ದಿನಗಳ ಹಿಂದಷ್ಟೇ ತಮ್ಮ ಗ್ರಾಮಗಳಲ್ಲಿ ಸ್ವಯಂ ಬೇಲಿ ಹಾಕಿಕೊಂಡು, ಹೊರಗಿನಿಂದ ಬಂದವರ ಮೇಲೆ ಸ್ವಯಂಸ್ಫೂರ್ತಿಯಿಂದ ನಿಗಾ ವಹಿಸಿ, ಕೋವಿಡ್ ಮಹಾಮಾರಿ ವಿರುದ್ಧ ಜಿಲ್ಲೆಯ ಹಳ್ಳಿಗರು ತೊಡೆ ತಟ್ಟಿದ್ದರು. ಆದರೆ ಇದೀಗ ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆ ಹಳ್ಳಿಗಳು ಏಕಾಏಕಿ ಸಹಜ ಸ್ಥಿತಿಗೆ ಮರಳಿವೆ. ಗ್ರಾಮಸ್ಥರ ಈ ನಡವಳಿಕೆ ಭವಿಷ್ಯದಲ್ಲಿ ಕೋವಿಡ್ ಮಹಾಮಾರಿ ಅಟ್ಟಹಾಸಕ್ಕೆ ವೇದಿಕೆಯಾಗುವ ಆತಂಕ ಕಾಡುತ್ತಿದೆ.
Related Articles
Advertisement
ಗ್ರಾಪಂಗಳ ನಿರ್ಲಕ್ಷ್ಯ: ಜಿಲ್ಲೆಯಲ್ಲಿ 340ಕ್ಕೂ ಅಧಿಕ ಗ್ರಾಪಂಗಳಿದ್ದು, 2015ರಲ್ಲಿ ಆಯ್ಕೆಯಾದ ಸದಸ್ಯರ ಅವಧಿ ಮುಗಿಯುತ್ತ ಬಂದಿದೆ. ಅವರು ಕೂಡ ಹಳ್ಳಿಗರಿಗೆ ನಿಷ್ಠುರವಾಗಿ ನಿಯಮ ಪಾಲನೆಗೆ ಸೂಚನೆ ನೀಡುವುದನ್ನೇ ನಿಲ್ಲಿಸಿದ್ದಾರೆ. ಯಾರು-ಯಾರಿಗೆ ಯಾಕೆ ಕೆಟ್ಟಾಗಬೇಕು? ಎನ್ನುವ ಪ್ರಶ್ನೆ ಮಾಡಿಕೊಂಡು ನಿರ್ಲಕ್ಷ್ಯ ತೋರುತ್ತಿದ್ದಾರೆ. ಹೀಗಾಗಿ ಹಳ್ಳಿಗಳಲ್ಲಿನ ಪುಂಡಪೋಕರಿಗಳ ಹಿಂಡು ಎಲ್ಲೆಂದರಲ್ಲಿ ಮೊದಲಿನಂತೆ ಓಡಾಡಿಕೊಂಡು ನಿಯಮಗಳನ್ನು ಗಾಳಿಗೆ ತೂರುತ್ತಿದೆ.
ಕೆಲವು ಗ್ರಾಪಂಗಳು ಸ್ವಯಂಪ್ರೇರಣೆಯಿಂದ ಜನರಲ್ಲಿ ಜಾಗೃತಿ ಮೂಡಿಸಿ, ಅಭಿಯಾನ ಮಾಡಿ ಕೋವಿಡ್ ವಿರುದ್ಧದ ಹೋರಾಟಕ್ಕೆ ಸಹಕಾರ ನೀಡುವಂತೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದ್ದವು. ಇದಕ್ಕೆ ಆರಂಭದಲ್ಲಿ ಗ್ರಾಮೀಣರು ಉತ್ತಮವಾಗಿ ಸ್ಪಂದಿಸಿದ್ದರು. ಆದರೀಗ ಪೂರ್ಣ ಪ್ರಮಾಣದಲ್ಲಿ ಎಲ್ಲವನ್ನು ಮರೆತಿದ್ದಾರೆ.
ಹಳ್ಳಿಗೆ ಹಳ್ಳಿಯೇ ಸೀಲ್‌ಡೌನ್ ಆದೀತು! ಈವರೆಗೂ ಜಿಲ್ಲೆಯ ಹಳ್ಳಿಗರು ಸುರಕ್ಷಿತವಾಗಿದ್ದಿದ್ದು ನಿಜ. ಆದರೆ ಮಾವು ಮಾರಾಟ ಮಾಡಿದ ವ್ಯಕ್ತಿಯೊಬ್ಬ ಇದೀಗ ಹಳ್ಳಿಗಳ ಜೊತೆಗೆ ನೇರ ಸಂಪರ್ಕ ಹೊಂದಿದ್ದು, ಆತನಲ್ಲಿ ಕೋವಿಡ್-19 ಪತ್ತೆಯಾಗಿದೆ. ಅಲ್ಲದೇ ಪ್ರತಿದಿನಹಳ್ಳಿಗರು ಹುಬ್ಬಳ್ಳಿ-ಧಾರವಾಡಕ್ಕೆ ತಮ್ಮ ಕೃಷಿ ಉತ್ಪನ್ನ ಮಾರಾಟ ಮಾಡಲು ಮತ್ತು ಇತರೆ ಸಂತೆ- ವಹಿವಾಟಿಗಾಗಿ ಬರುತ್ತಿರುತ್ತಾರೆ. ಈ ವೇಳೆ ಅವರು ಸುರಕ್ಷತಾ ಕ್ರಮ ಕೈಗೊಳ್ಳದಿದ್ದರೆ ನಗರದಲ್ಲಿ ವಾರ್ಡ್‌ಗಳ ಸೀಲ್‌ಡೌನ್ ಆದಂತೆಯೇ ಹಳ್ಳಿಗೆ ಹಳ್ಳಿಗಳೂ ಸೀಲ್‌ಡೌನ್ ಆಗುವ ದಿನಗಳು ದೂರವಿಲ್ಲ ಎನ್ನುತ್ತದೆ ಜಿಲ್ಲಾಡಳಿತ.
ಜಿಲ್ಲೆಯಲ್ಲಿ ಕೋವಿಡ್ ತಡೆಗೆ ಈಗಲೂ ಅಭಿಯಾನ ಜಾರಿಯಲ್ಲಿದೆ. ಹಳ್ಳಿಗರು ಕೋವಿಡ್ ತಡೆ ಸುರಕ್ಷತಾ ನಿಯಮಗಳ ಪಾಲನೆ ಕೈ ಬಿಡಬಾರದು. ಮುಂದಿನ ದಿನಗಳಲ್ಲಿ ಇದರಿಂದ ತೊಂದರೆಯಾಗುತ್ತದೆ. ಹಳ್ಳಿಗಳಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲು ಮತ್ತೂಮ್ಮೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. – ದೀಪಾ ಚೋಳನ್, ಜಿಲ್ಲಾಧಿಕಾರಿ
ಲಾಕ್‌ಡೌನ್ ಸಡಿಲಿಕೆ ದುರುಪಯೋಗ ಆಗದಂತೆ ಹಳ್ಳಿಗರು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಮುಂದೆ ಕಷ್ಟ ಅನುಭವಿಸಬೇಕಾಗುತ್ತದೆ. ಕೋವಿಡ್ ಸುರಕ್ಷತಾ ಕ್ರಮಗಳಿಂದ ದೂರ ಸರಿಯಬಾರದು. ಈ ಕುರಿತು ಕಟ್ಟೆಚ್ಚರ ವಹಿಸಲು ಗ್ರಾಪಂಗಳಿಗೆ ಸೂಚಿಸಿದ್ದೇನೆ. – ಡಾ| ಬಿ.ಸಿ. ಸತೀಶ, ಜಿಪಂ ಸಿಇಒ
-ಬಸವರಾಜ ಹೊಂಗಲ್