ಬಸ್ರೂರು: ಕಳೆದ ಎರಡು ವರ್ಷಗಳಿಂದ ಬಸ್ರೂರು ಬಸ್ ನಿಲ್ದಾಣ ಪ್ರದೇಶದಲ್ಲಿ ನೀರು ಸಮರ್ಪಕವಾಗಿ ಹರಿಯದೆ ಒಂದೆಡೆ ಸಂಗ್ರಹವಾಗಿದೆ. ಇದರಿಂದಾಗಿ ಪರಿಸರದ ಜನ ಸಾಂಕ್ರಾಮಿಕ ರೋಗ ಭೀತಿಯನ್ನು ಎದುರಿಸುವಂತಾಗಿದೆ.
ಬಸ್ರೂರು ಸಿಂಡಿಕೇಟ್ ಬ್ಯಾಂಕ್ ಎದುರಿನ ರಸ್ತೆಯ ನೀರು ಸೇರಿದಂತೆ ಎಲ್ಲೆಡೆಯಿಂದ ಹರಿದು ಬರುವ ಕೊಳಚೆ ನೀರು ಚರಂಡಿಯಲ್ಲಿ ಸಮರ್ಪಕವಾಗಿ ಹರಿಯದೆ ಇರುವುದೇ ಇದಕ್ಕೆ ಕಾರಣ.
ಬಸ್ರೂರು ಬಸ್ ನಿಲ್ದಾಣದಿಂದ ಕೆಳಪೇಟೆಗೆ ಹೋಗುವ ರಸ್ತೆಯ ಆರಂಭದಲ್ಲಿ ಇತ್ತೀಚೆಗೆ ಹೊಸ ಮೋರಿಯೊಂದನ್ನು ರಚಿಸಲಾಗಿದೆ. ಆದರೆ ಇಲ್ಲಿ ಸಂಗ್ರಹವಾಗಿರುವ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇನ್ನೂ ಪೂರ್ತಿಯಾಗಿಲ್ಲ. ಸ್ವಲ್ಪ ದೂರ ಮಾತ್ರ ಹೊಸ ಮೋರಿಯಿಂದ ಚರಂಡಿಯನ್ನು ಅಗೆಯಲಾಗಿದೆ. ವಿಪರ್ಯಾಸವೆಂದರೆ ಮೋರಿ ಕೆಳಗಿನ ನೀರು ಅಲ್ಲಿಯವರೆಗಷ್ಟೇ ಹರಿದು ಬಳಿಕ ಅಲ್ಲೇ ಸಂಗ್ರಹಗೊಳ್ಳುತ್ತದೆ. ಈ ನಿಂತ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ತಾಣವಾಗುವ ಭೀತಿ ಸೃಷ್ಟಿಯಾಗಿದೆ.
ಹೊಸ ಮೋರಿಯ ಸ್ಥಳದಲ್ಲಿ ಮಾತ್ರವಲ್ಲದೆ ಬಸ್ ನಿಲ್ದಾಣದ ಸುತ್ತಲ ಪ್ರದೇಶದಲ್ಲೂ ಹಲವೆಡೆ ಮುಚ್ಚಿ ಹೋದ ಚರಂಡಿ ಕಂಡು ಬರುತ್ತದೆ. ಅಂಗಡಿಯ ಎದುರು ಚರಂಡಿ ಇರಬೇಕಾದ ಸ್ಥಳದಲ್ಲಿ ಸೀಯಾಳದ ಸಿಪ್ಪೆಗಳ ರಾಶಿ ಕಂಡು ಬರುತ್ತದೆ. ಈ ಎಲ್ಲ ಸಮಸ್ಯೆಗಳು ಸರಿಯಾಗಬೇಕಾದರೆ ಬಸ್ ನಿಲ್ದಾಣದ ಸುತ್ತಮುತ್ತಲ ಚರಂಡಿಯನ್ನು ಅಗೆದು-ಹೂಳೆತ್ತಿ ನೀರು ಹರಿಯುವಂತೆ ಮಾಡಬೇಕಾಗಿದೆ. ಇದಕ್ಕೊಂದು ಯೋಜನೆ ರೂಪಿಸಿ ಶೀಘ್ರ ಕಾಮಗಾರಿ ನಡೆಸಿ ಸಂಭನೀಯ ಅಪಾಯವನ್ನು ತಪ್ಪಿಸಬೇಕಾಗಿದೆ.
ಸರಿಪಡಿಸಲಾಗುವುದು: ಬಸ್ ನಿಲ್ದಾಣದ ಸಮೀಪ ನೂತನವಾಗಿ ನಿರ್ಮಿಸಿದ ಮೋರಿಯ ನೀರು ಪ್ರಸ್ತುತ ಸ್ವಲ್ಪ ದೂರ ಮಾತ್ರ ಹರಿದು ಹೋಗುತ್ತಿದೆ. ಈ ಬಗ್ಗೆ ಈಗಾಗಲೇ ಯೋಜನೆ ಹಾಕಿಕೊಂಡಿದ್ದು ಅಗೆಯಲಾದ ಚರಂಡಿಯನ್ನು ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ಯನ್ನು ಪೂರ್ಣಗೊಳಿಸಿ ನೀರು ಹರಿದು ಹೋಗುವಂತೆ ಮಾಡಲಾಗುವುದು. ಈ ಪರಿಸರದ ಇತರ ಚರಂಡಿಗಳ ಹೂಳನ್ನೂ ಎತ್ತಿ ಸ್ವಚ್ಛಗೊಳಿಸಲಾಗುವುದು. –
ಇಂದಿರಾ ಪೂಜಾರಿ, ಅಧ್ಯಕ್ಷೆ, ಗ್ರಾ.ಪಂ. ಬಸ್ರೂರು