Advertisement

ಪ್ರತಿಭಟನೆಗೆ ಮುಂದಾದ ಯಡಮೊಗೆ ಗ್ರಾಮಸ್ಥರು 

02:20 AM Nov 27, 2018 | Team Udayavani |

ಹೊಸಂಗಡಿ: ಯಡಮೊಗೆಯಿಂದ ಹೊಸಂಗಡಿ, ಸಿದ್ದಾಪುರ, ಶಂಕರನಾರಾಯಣಕ್ಕೆ ಸಂಪರ್ಕ ಕಲ್ಪಿಸುವ ಯಡಮೊಗೆ ಹೊಸಂಗಡಿ ರಸ್ತೆ ಮರು ಡಾಮರೀಕರಣಕ್ಕೆ ಇನ್ನೂ ಮೀನ ಮೇಷ ಎಣಿಸುತ್ತಿರುವುದನ್ನು ವಿರೋಧಿಸಿ, ಈಗ ಯಡಮೊಗೆ ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ಕೂಡ ನಡೆಯಲಿರುವುದರಿಂದ ಅದಕ್ಕೂ ಮೊದಲು ಈ ರಸ್ತೆ ದುರಸ್ತಿಯಾಗಬೇಕು. ಇಲ್ಲದಿದ್ದಲ್ಲಿ ಮತದಾನವನ್ನೇ ಬಹಿಷ್ಕಾರ ಮಾಡಲಾಗುವುದು ಎನ್ನುವ ಇಲ್ಲಿನ ಜನರ ಒಕ್ಕೊರಲ ನಿರ್ಧಾರವಾಗಿದೆ.

Advertisement

ಸುಮಾರು 8 ಕಿ.ಮೀ. ಉದ್ದದ ಯಡಮೊಗೆ – ಹೊಸಂಗಡಿ ರಸ್ತೆಗೆ ಸುಮಾರು 15 ವರ್ಷಗಳ ಹಿಂದೆ ಡಾಮರೀಕರಣ ಆಗಿತ್ತು. ಆ ಬಳಿಕ ಈ ವರೆಗೆ ಮರು ಡಾಮರೀಕರಣ ಆಗಿಲ್ಲ. ಆಗೊಮ್ಮೆ, ಈಗೊಮ್ಮೆ ಅಲ್ಲಲ್ಲಿ ತೇಪೆ ಹಾಕಿದ್ದು, ಬಿಟ್ಟರೆ, ಸಂಪೂರ್ಣ ಹದಗೆಟ್ಟ ಈ ರಸ್ತೆಯ ದುರಸ್ತಿಗೆ ಈವರೆಗೆ ಈ ಭಾಗದ ಜನಪ್ರತಿನಿಧಿಗಳು ಮುಂದಾಗಿಲ್ಲ ಎನ್ನುವುದು ಊರವರ ಆರೋಪ.

ಯಡಮೊಗೆ ಗ್ರಾಮದಲ್ಲಿ 650ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿನ ಜನ ಹೊಸಂಗಡಿ, ಸಿದ್ದಾಪುರ, ಶಂಕರನಾರಾಯಣ, ಕುಂದಾಪುರ ಕಡೆಗೆ ಸಂಚರಿಸಬೇಕಾದರೆ ಇದೇ ಮುಖ್ಯ ರಸ್ತೆಯನ್ನು ಆಶ್ರಯಿಸಿದ್ದಾರೆ. ನಿತ್ಯ ನೂರಾರು ಮಕ್ಕಳು ಶಾಲಾ- ಕಾಲೇಜಿಗೆ ತೆರಳುತ್ತಾರೆ. ದಿನಾ 1 ಖಾಸಗಿ ಬಸ್‌ 2 ಬಾರಿ ಬಂದರೆ, ಕೆಎಸ್‌ಆರ್‌ಟಿ ಬಸ್‌ ದಿನಕ್ಕೆ 5-6 ಟ್ರಿಪ್‌ ಮಾಡುತ್ತದೆ. ಆದರೆ ಈ ಜಲ್ಲಿ ಕಲ್ಲುಗಳು ಎದ್ದ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಹದೆಗೆಟ್ಟ ರಸ್ತೆಯಿಂದಾಗಿ ಇಲ್ಲಿಗೆ ದಿನ ಬರುತ್ತಿದ್ದ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಬಸ್ಸನ್ನು ಇತ್ತೀಚೆಗೆ ಸ್ಥಗಿತಗೊಳಿಸಿದ್ದಾರೆ.


ಸೇತುವೆಯೂ ಇಲ್ಲ

ಹೊಸಂಗಡಿ – ಯಡಮೊಗೆ ಸಂಪರ್ಕ ಕಲ್ಪಿಸುವ ಹೊಸಬಾಳು ಸೇತುವೆ ಶಿಥಿಲಗೊಂಡು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇನ್ನು ಬದಲಿಯಾಗಿ ನಿರ್ಮಿಸಿದ್ದ ಮೋರಿಯೂ ಕೂಡ ಈ ಮಳೆಗಾಲದ ಆರಂಭದಲ್ಲಿಯೇ ಕುಸಿದು ಬಿದ್ದು, ಸಂಪರ್ಕವೇ ಕಡಿತಗೊಂಡಿತ್ತು. ಅದನ್ನು ಈಗ ಊರವರೇ ಸೇರಿ ದುರಸ್ತಿ ಮಾಡಿ ತಾತ್ಕಲಿಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಆದರೆ ಅದು ಕೂಡ ಮುಂದಿನ ಮಳೆಗಾಲಕ್ಕೆ ಮುಂಚಿತವಾಗಿ ದುರಸ್ತಿ ಮಾಡದಿದ್ದರೆ ಮತ್ತೆ ಸಂಪರ್ಕ ಕಡಿತಗೊಳ್ಳುತ್ತದೆ.

ಅನುದಾನ ಮಂಜೂರಾಗಿದೆ
ಹೊಸಂಗಡಿ – ಯಡಮೊಗೆ ರಸ್ತೆ ಅಭಿವೃದ್ಧಿಗೆ ಈಗಾಗಲೇ ಅನುದಾನ ಮಂಜೂರಾಗಿದೆ. ಈ ಬಗ್ಗೆ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಲು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಲಾಗಿದೆ. ನಮ್ಮ ಕಡೆಯಿಂದ ಇಲ್ಲಿನ ರಸ್ತೆ ದುರಸ್ತಿಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. 
– ಬಿ.ಎಂ. ಸುಕುಮಾರ್‌ ಶೆಟ್ಟಿ, ಬೈಂದೂರು ಶಾಸಕರು

Advertisement

ದುರಸ್ತಿ ಮಾಡದಿದ್ದರೆ ಪ್ರತಿಭಟನೆ
ಈ ರಸ್ತೆ ದುರಸ್ತಿಗೆ 10 ಕೋ.ರೂ. ಹಾಗೂ ಸೇತುವೆ ಕಾಮಗಾರಿಗೆ 5 ಕೋ.ರೂ. ಅನುದಾನ ಮಂಜೂರಾಗುತ್ತದೆ ಎಂದು ಜನ ಪ್ರತಿನಿಧಿಗಳು ಹೇಳಿಕೆ ನೀಡಿದ್ದರೂ, ಈವರೆಗೆ ರಸ್ತೆ ಅಭಿವೃದ್ಧಿಯಾಗಿಲ್ಲ. ಇನ್ನು ಕೂಡ ತಡವಾದರೆ ಚುನಾವಣೆ ನೀತಿ ಸಂಹಿತೆ ನೆಪವೊಡ್ಡಿ, ಮತ್ತೆ ಮುಂದಕ್ಕೆ ಹೋಗುತ್ತದೆ. ಆ ಮೇಲೆ ಮಳೆ ಬರುತ್ತದೆ. ಅದಕ್ಕೆ ಈಗಲೇ ದುರಸ್ತಿಗೆ ಮುಂದಾಗಬೇಕು. ಇಲ್ಲದಿದ್ದಲ್ಲಿ  ಪ್ರತಿಭಟನೆ ನಡೆಸಲಾಗುವುದು.
– ಗಣೇಶ್‌ ಯಡಮೊಗೆ, ಸ್ಥಳೀಯರು

— ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next