ಕಾಪು: ಶಿರ್ವ ಪ್ರದೇಶದಲ್ಲಿ ಮೆಸ್ಕಾಂನಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಕೃಷಿಕ ಸಂಘ, ಮಜೂರು ಗ್ರಾಮ ಪಂಚಾಯತ್ ನ ಜನಪ್ರತಿನಿಧಿಗಳು ಮತ್ತು ಶಿರ್ವ ಗ್ರಾಮಸ್ಥರನ್ನೊಳಗೊಂಡ ನಿಯೋಗವು ಶುಕ್ರವಾರ ಕಾಪು ಮೆಸ್ಕಾಂಗೆ ದಿಡೀರ್ ಮುತ್ತಿಗೆ ಹಾಕಿದೆ.
ಶಿರ್ವ ಸೆಕ್ಷನ್ ವ್ಯಾಪ್ತಿಯ ಪಾಲಮೆ, ಶಾಂತಿಗುಡ್ಡೆ, ಜೈನಬಸದಿ, ಹಳೇ ಇಗರ್ಜಿ ಪರಿಸರದಲ್ಲಿ ಟ್ರಾನ್ಸ್‌ಫಾರ್‍ಮರ್‌ಗಳು ನಿರ್ವಹಣೆ ಕೊರತೆಯಿಂದ ಸೊರಗಿದ್ದು ಸಿಬಂದಿಗಳ ನಿರ್ಲಕ್ಷ್ಯದಿಂದಾಗಿ ಪಾಲಮೆಯಲ್ಲಿ ಕೃಷಿಕರಿಗೆ ಮತ್ತು ವಿದ್ಯುತ್ ಬಳಕೆದಾರರಿಗೆ ಸಂಕಷ್ಟ ಮತ್ತು ತೊಂದರೆ ಉಂಟಾಗುತ್ತಿದೆ. ಪದೇ ಪದೇ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಟ್ರಾನ್ಸ್‌ಫಾರ್ಮರ್ ಫ್ಯೂಸ್ ಸುಟ್ಟು ಹೋಗುತ್ತಿದೆ. ಹಳೆಯದಾದ ತಂತಿಗಳು ಜೋತಾಡುತ್ತಿವೆ. ತಂತಿ ಪಕ್ಕದಲ್ಲಿರುವ ಮರಗಳ ಗೆಲ್ಲುಗಳನ್ನು ಕಡಿಯದೆ ಇರುವುದರಿಂದ ಪದೇ ಪದೇ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ ಎಂದು ದೂರಿದರು.
ಮೆಸ್ಕಾಂ ಶಾಖಾಧಿಕಾರಿ, ಸಿಬಂದಿಗಳು ಗ್ರಾಹಕರ ಕರೆಯನ್ನು ನಿರ್ಲಕ್ಷಿಸುತ್ತಾರೆ. ಸಮಸ್ಯೆ ಹೇಳಿದರೆ ಲೈನ್‌ಮ್ಯಾನುಗಳು ಉಡಾಫೆಯಿಂದ ಉತ್ತರಿಸುತ್ತಾರೆ. ಟ್ರಾನ್ಸ್‌ಫಾರ್ಮರ್ ಫ್ಯೂಸ್ ಸುಟ್ಟ ಬಗ್ಗೆ ದೂರು ನೀಡಿದರೆ, ಅದನ್ನು ಬದಲಿಸಲು ಎರಡರಿಂದ ನಾಲ್ಕು ದಿನಗಳನ್ನು ತೆಗೆದುಕೊಳ್ಳುತ್ತಾರೆ. ಬಳಕೆದಾರರ ದೂರುಗಳಿಗೆ ಸೌಜನ್ಯವಾಗಿ ಮತ್ತು ತುರ್ತಾಗಿ ಸ್ಪಂದಿಸುವ ಸಿಬಂದಿಗಳನ್ನು ನೇಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಕಾಪು ಮೆಸ್ಕಾಂ ಎಇಇ ಸುಶಾನ್ ಪಿ.ಸಿ. ಮಾತನಾಡಿ, ಗ್ರಾಹಕರ ಸಮಸ್ಯೆಗಳಿಗೆ ತುರ್ತು ಸ್ಪಂದಿಸುವ ಮತ್ತು ಟ್ರೀ ಕಟ್ಟಿಂಗ್ ನಡೆಸಿ ಶಾರ್ಟ್ ಸರ್ಕ್ಯೂಟ್ ತಪ್ಪಿಸಲು ಮೊದಲ ಆದ್ಯತೆ ನೀಡುತ್ತೇವೆ. ಟಿಸಿ ರಿಪೇರಿ ಮತ್ತು ವಯರ್‌ಗಳನ್ನು ದುರಸ್ತಿ ಪಡಿಸುತ್ತೇವೆ. ಮುಂದೆ ಟ್ರಾನ್ಸ್‌ಫಾರ್‍ಮರ್‌ಗಳ ಬದಲಾವಣೆ, ಹೊಸ ಟ್ರಾನ್ಸ್‌ಫಾರ್‍ಮರಗಳ ಅಳವಡಿಕೆ ಬಗ್ಗೆ ಯೋಜನೆ ಹಾಕಿಕೊಳ್ಳಲಾಗುವುದು ಎಂದರು.
ಮೆಸ್ಕಾಂ ಕಾಪು ವಿಭಾಗದ ತಾಂತ್ರಿಕ ಅಧಿಕಾರಿ ಆನಂದ್, ಶಿರ್ವ ಎಸ್‌ಒ ಮಂಜಪ್ಪ ಅಗಸಿಮಂಡಲ್, ಕಾಪು ಎಸ್‌ಒ ಅಜಯ್ ಶೆಟ್ಟಿ, ಮಜೂರು ಗ್ರಾ. ಪಂ. ಅಧ್ಯಕ್ಷೆ ಶರ್ಮಿಳಾ ಆಚಾರ್ಯ, ಗ್ರಾ. ಪಂ. ಉಪಾಧ್ಯಕ್ಷ ಮಧುಸೂಧನ್ ಸಾಲ್ಯಾನ್, ಉಡುಪಿ ಜಿಲ್ಲಾ ಕೃಷಿಕರ ಸಂಘದ ಜಿಲ್ಲಾಧ್ಯಕ್ಷ ರಾಮಕೃಷ್ಣ ಶರ್ಮ, ಸ್ಥಳೀಯ ಪ್ರಮುಖರಾದ ನಿತ್ಯಾನಂದ ನಾಯಕ್ ಪಾಲಮೆ, ಸೀತಾರಾಮ ಪಾಟ್ಕರ್ ಪಾಲಮೆ, ಆಂಡ್ರೂ ಮೊನಿಸ್, ಮ್ಯಾಕ್ಸಿಂ ಫೆರ್ನಾಂಡಿಸ್ ಮೊದಲಾದವರು ಪಾಲ್ಗೊಂಡಿದ್ದರು.