ಶಿರ್ವ: ಸುಮಾರು 1.6 ಕೋ.ರೂ.ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಇತಿಹಾಸ ಪ್ರಸಿದ್ಧ ಶಿರ್ವ ಮಹಮ್ಮಾಯಿ ಮಾರಿಗುಡಿಯ ನಿಧಿ ಕುಂಭ ಸಮರ್ಪಣೆ ಕಾರ್ಯಕ್ರಮವು ಎಲ್ಲೂರು ಸೀಮೆಯ ಆಗಮ ವಿದ್ವಾಂಸ ವೇ|ಮೂ|ಕುತ್ಯಾರು ಕೇಂಜ ಶ್ರೀಧರ ತಂತ್ರಿಯವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಶಿರ್ವ ವೆಂಕಟರಮಣ ಭಟ್ ಮತ್ತು ಶಿರ್ವ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶಿರ್ವ ಶ್ರೀನಿವಾಸ ಭಟ್ ಹಾಗೂ ರಘುಪತಿ ಗುಂಡು ಭಟ್ ಅವರ ಸಹಕಾರದೊಂದಿಗೆ ಅ. 24 ರಂದು ನಡೆಯಿತು.
ವೇ|ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ ಹಾಗು ಕೇಂಜ ಭಾರ್ಗವ ತಂತ್ರಿ ನಿಧಿ ಕುಂಭ ಸಮರ್ಪಣೆಯ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಬಳಿಕ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಶಿರ್ವದ ಅಪ್ಪೆನ ಜೋಕುಲು 9 ಮಹಿಳಾ ಸಮಿತಿಗೆ ನಳಿನಿ ಶೆಟ್ಟಿ ನೇತೃತ್ವದಲ್ಲಿ 9 ಜನ ಮಹಿಳೆಯರು ದೀಪ ಬೆಳಗಿಸಿ ಚಾಲನೆ ನೀಡಿದರು. ಶಿರ್ವ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ರಘುಪತಿ ಗುಂಡು ಭಟ್ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶಿರ್ವ ನಡಿಬೆಟ್ಟು ನಿತ್ಯಾನಂದ ಹೆಗ್ಡೆ ಮಾತನಾಡಿ, ದೈವ ದೇವರುಗಳ ನೆಲೆವೀಡಾಗಿರುವ ಶಿರ್ವ ಗ್ರಾಮದಲ್ಲಿ ಮಹಮ್ಮಾಯಿ ಮಾರಿಗುಡಿಯ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಶಿರ್ವದಪ್ಪೆನ ಸೇವೆಯ ಪುಣ್ಯ ಕಾರ್ಯದಲ್ಲಿ ಸರ್ವ ಭಕ್ತರೂ ಭಕ್ತಿ ಶ್ರದ್ಧೆಯಿಂದ ಪಾಲ್ಗೊಂಡು ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿ ನೆರವೇರಲಿ ಎಂದು ಹೇಳಿದರು.
ಶಿರ್ವ ನಡಿಬೆಟ್ಟು ಯಜಮಾನ ದಾಮೋದರ ಚೌಟ, ಮಾಣಿಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಎಂ.ಮೋಹನದಾಸ ಹೆಗ್ಡೆ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ವಿ.ಸುಬ್ಬಯ್ಯ ಹೆಗ್ಡೆ, ಪ್ರಕಾಶ್ ಶೆಟ್ಟಿ ಶಿರ್ವ, ಅರ್ಚಕ ಶಿರ್ವ ವೆಂಕಟರಮಣ ಭಟ್, ದೇವಿಯ ಪಾತ್ರಿ ಸಚಿನ್ ಶೆಟ್ಟಿ, ಸಮಿತಿಯ ಕೋಶಾಧಿಕಾರಿ ಹರೀಶ್ ಪೂಜಾರಿ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ರತನ್ ಶೆಟ್ಟಿ ಕಲ್ಲೊಟ್ಟು, ಶಿರ್ವ ನಡಿಬೆಟ್ಟು ರತ್ನವರ್ಮ ಹೆಗ್ಡೆ, ಪ್ರೊ|ವೈ. ಭಾಸ್ಕರ ಶೆಟ್ಟಿ, ಕುತ್ಯಾರು ಪ್ರಸಾದ್ ಶೆಟ್ಟಿ, ರವೀಂದ್ರ ಶೆಟ್ಟಿ ಸಾನದ ಮನೆ, ವಿಟ್ಠಲ ಅಂಚನ್, ಸುಂದರ ಶೆಟ್ಟಿ, ಶೇಖರ ಶೆಟ್ಟಿ, ನವೀನ್ ಶೆಟ್ಟಿ, ತಮ್ಮಣ್ಣ ಪೂಜಾರಿ, ಉಚ್ಛಂಗಿ ದೇವಿಯ ಅರ್ಚಕ ಕೃಷ್ಣ ನಾಯ್ಕ, ಸದಾಶಿವ ನಾಯ್ಕ, ಶಿರ್ವ ನಡಿಬೆಟ್ಟು ಕುಟುಂಬಸ್ಥರು, ಗ್ರಾಮಸ್ಥರು, ಭಕ್ತರು ಉಪಸ್ಥಿತರಿದ್ದರು.
ಸಮಿತಿಯ ಕಾರ್ಯದರ್ಶಿ ಸಚ್ಚಿದಾನಂದ ಹೆಗ್ಡೆ ಸ್ವಾಗತಿಸಿದರು. ಅಜಿತ್ ಶೆಟ್ಟಿ ಕೊಡಿಬೆಟ್ಟು ನಿರೂಪಿಸಿ, ವಂದಿಸಿದರು.