ಗುಜರಾತ್: ಕ್ರಿಕೆಟ್ ಪಂದ್ಯದ ವೇಳೆ ಬಾಲ್ ಮುಟ್ಟಿದ ವಿಚಾರಕ್ಕೆ ದಲಿತ ವ್ಯಕ್ತಿಯೊಬ್ಬನ ಹೆಬ್ಬೆರಳು ಕತ್ತರಿಸಿದ ಘಟನೆ ಗುಜರಾತ್‌ನ ಪಟಾನ್ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.
ಜಿಲ್ಲೆಯ ಕಾಕೋಶಿ ಗ್ರಾಮದ ಶಾಲಾ ವಠಾರದಲ್ಲಿ ಕೆಲವೊಂದಿಷ್ಟು ಮಂದಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಕ್ರಿಕೆಟ್ ಬಾಲ್ ಅಲ್ಲೇ ಕೂತಿದ್ದ ಬಾಲಕನ ಬಳಿ ಬಂದಿದೆ. ಬಾಲಕ ಬಾಲ್ ನ್ನು ಅವರ ಬಳಿ ಎಸೆದಿದ್ದಾನೆ. ಇಷ್ಟು ಆದದ್ದೇ ತಡ, ಬಾಲ್ ಮುಟ್ಟಿದ್ದು ದಲಿತ ವ್ಯಕ್ತಿಯೆಂದು ಆಡುತ್ತಿದ್ದವರು ಆತನ ಬಳಿ ಬಂದು ಆತನಿಗೆ ಹೀಯಾಳಿಸಿ, ದಲಿತ ಸಮುದಾಯವನ್ನು ನಿಂದಿಸಿದ್ದಾರೆ. ಇದನ್ನು ನೋಡಿದ ಬಾಲಕನ ಚಿಕ್ಕಪ್ಪ ಧೀರಜ್ ಪರ್ಮಾರ್ ಮಧ್ಯ ಪ್ರವೇಶ ಮಾಡಿ ವಿಷಯವನ್ನು ತಣ್ಣಗೆ ಮಾಡಿದ್ದಾನೆ. ಆ ಬಳಿಕ ಸಮುದಾಯವನ್ನು ನಿಂದಿಸಿದ್ದಕ್ಕೆ ದೂರು ನೀಡಿದ್ದಾನೆ.
ಇದಾದ ಬಳಿಕ ಭಾನುವಾರ (ಜೂ.4 ರಂದು) ಸಂಜೆ 7 ಜನರ ಗುಂಪು ಧೀರಜ್ ಪರ್ಮಾರ್ ಹಾಗೂ ಆತನ ಸಹೋದರ ಕೀರ್ತಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಒಬ್ಬಾತ ಕೀರ್ತಿ ಅವರ ಹೆಬ್ಬೆರಳನ್ನು ಕತ್ತರಿಸಿದ್ದಾರೆ. ಇದರಿಂದ ಕೀರ್ತಿ ಗಂಭೀರ ಗಾಯಗೊಂಡಿದ್ದಾರೆ.
ಎಫ್ ಐಆರ್ ಸೆಕ್ಷನ್ 326 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಆಯುಧಗಳಿಂದ ಗಂಭೀರವಾದ ಗಾಯವನ್ನು ಉಂಟು ಮಾಡುವುದು), 506 (ಕ್ರಿಮಿನಲ್ ಬೆದರಿಕೆ) ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ ಕಾಯ್ದೆ) ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಅಧಿಕಾರಿ ಹೇಳಿದರು.
ಸದ್ಯ ಆರೋಪಿಗಳ ಹುಡುಕಾಟ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.