ಪುತ್ತೂರು: ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನು ಮೋದಿ ನೇತೃತ್ವದ ಕೇಂದ್ರ ಸರಕಾರ ಸಾಕಾರಗೊಳಿಸಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಮಂಗಳೂರು, ಲೋಕೋ ಪಯೋಗಿ ಇಲಾಖೆ ಮಂಗಳೂರು, ದ.ಕ. ಜಿ.ಪಂ. ಮಂಗಳೂರು, ತಾ.ಪಂ. ಪುತ್ತೂರು ಹಾಗೂ ಅರಿಯಡ್ಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 3.87 ಕೋಟಿ ರೂ. ಅನುದಾನದಡಿ ಕಾವು ಮಾಣಿಯಡ್ಕದಲ್ಲಿ ಶಿಲಾನ್ಯಾಸ ಹಾಗೂ 2.30 ಕೋಟಿ ರೂ. ಅನುದಾನದಡಿ ಅಂಬಟ ಮೂಲೆ ಮಾಣಿಯಡ್ಕ ಕಾವು ಪಂಚಲಿಂಗೇಶ್ವರ ದೇವಸ್ಥಾನ ಸಂಪರ್ಕ ರಸ್ತೆಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಅರಿಯಡ್ಕ ಗ್ರಾ.ಪಂ. ಅಧ್ಯಕ್ಷೆ ಸೌಮ್ಯಾ ಬಾಲಸುಬ್ರಹ್ಮಣ್ಯ ಮಾತನಾಡಿ, ನಮ್ಮ ಬೇಡಿಕೆಗಳಿಗೆ ಸ್ಪಂದನೆ ಸಿಕ್ಕಿ ಹೆಚ್ಚಿನ ಅನುದಾನ ಬಿಡುಗಡೆಗೊಂಡಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಕಾಣುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗ್ರಾಮಗಳ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ತರುತ್ತಿದೆ. ಜನರ ಬೇಡಿಕೆಗಳನ್ನು ಸರಕಾರ ಈಡೇರಿಸುತ್ತಿದ್ದು ಕ್ಷೇತ್ರದ ಸಮಗ್ರ ಅಭಿವೃದ್ಧಿ ಗುರಿ ಎಂದರು.
ಅರಿಯಡ್ಕ: ಜಲಜೀವನ್ ಮಿಷನ್ ಕಾಮಗಾರಿಗೆ ಚಾಲನೆ
ಗ್ರಾಮ ಕುಡಿಯುವ ನೀರು ನೈರ್ಮಲ್ಯ ಕಾರ್ಯಪಾಲಕ ಎಂಜಿನಿಯರ್ ನರೇಂದ್ರ ಬಾಬು ಜಲಜೀವನ್ ಮಿಷನ್ ಬಗ್ಗೆ ಮಾಹಿತಿ ನೀಡಿದರು. ತಾ.ಪಂ. ಇ.ಒ ನವೀನ್ ಭಂಡಾರಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತ ರಾಜಾರಾಮ್, ಗ್ರಾಮ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕಿ ರೂಪಾ ನಾಯಕ್, ತಾ.ಪಂ. ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಅರಿಯಡ್ಕ ಗ್ರಾ.ಪಂ. ಪಿಡಿಒ ಪದ್ಮಕುಮಾರಿ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಚಾಕೋಟೆ ಸ್ವಾಗತಿಸಿದರು. ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ವಂದಿಸಿದರು. ತಿಲಕ್ ರೈ ಕುತ್ಯಾಡಿ, ದಿವ್ಯಾ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಸಮ್ಮಾನ
ಅರಿಯಡ್ಕ ಗ್ರಾ.ಪಂ ವ್ಯಾಪ್ತಿಗೆ ಹೆಚ್ಚಿನ ಅನುದಾನಗಳನ್ನು ಒದಗಿಸಿಕೊಟ್ಟ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಶಾಸಕ ಸಂಜೀವ ಮಠಂದೂರು ಅವರನ್ನು ಗ್ರಾ.ಪಂ. ಸದಸ್ಯರ ವತಿಯಿಂದ ಸಮ್ಮಾನಿಸಲಾಯಿತು.