ಭಟ್ಕಳ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ತಾಲೂಕಿನ ಮಾವಳ್ಳಿ-2 ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡ್ಸೂಳ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಗ್ರಾಮಗಳಲ್ಲಿನ ಜನರಿಗೆ ಸರಕಾರದ ಸೌಲಭ್ಯಗಳನ್ನು, ಅಲ್ಲಿನ ಕುಂದು ಕೊರತೆಗಳನ್ನು ಗ್ರಾಮಕ್ಕೆ ಅಧಿಕಾರಿಗಳು ಬಂದಲ್ಲಿ ಪರಿಹರಿಸಬಹುದು ಎನ್ನುವ ಉದ್ದೇಶದಿಂದ ಸರಕಾರ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕೆಲವೊಂದು ತಾಂತ್ರಿಕ ದೋಷದಿಂದ ಗ್ರಾಮಸ್ಥರ ಕಾರ್ಯ ಆಗಿರುವುದಿಲ್ಲ, ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯ, ರಸ್ತೆ, ಸ್ವಚ್ಚತೆ, ಸೇತುವೆ, ಕುಡಿಯುವ ನೀರು, ಸ್ಮಶಾನ ಇತ್ಯಾದಿಗಳ ಕುರಿತು ಕೂಡಾ ಸ್ಥಳದಲ್ಲಿಯೇ ಕ್ರಮ ಕೈಗೊಳ್ಳಲು ಸಂಬಂಧ ಪಟ್ಟ ತಾಲೂಕಾ ಮಟ್ಟದ ಅಧಿಕಾರಿಗಳು ಹಾಜರಿರುತ್ತಾರೆ. ಸರಕಾರದ ಯೋಜನೆಗಳ ಮಾಹಿತಿ ಜನಸಾಮಾನ್ಯರಿಗೆ ತಿಳಿಸಲು ಸಂಬಂಧ ಪಟ್ಟ ಎಲ್ಲಾ ಇಲಾಖೆಯ ತಾಲೂಕಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದಾರೆ. ವಿಶೇಷವಾಗಿ ಸರ್ವೆ ಇಲಾಖೆ, ಪಡಿತರ ಚೀಟಿ, ಮಾಶಾಸನ, ವಿಧಾವಾ ವೇತನ, ಸಂಧ್ಯಾ ಸುರಕ್ಷಾ ಇತ್ಯಾದಿಗಳನ್ನು ಸ್ಥಳದಲ್ಲಿಯೇ ಮಂಜೂರು ಮಾಡಲಾಗುವುದು ಎಂದರು.
ತಹಸೀಲ್ದಾರ್ ರವಿಚಂದ್ರ ಎಸ್. ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ಮಾವಳ್ಳಿ-2 ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ ನಾಯ್ಕ ಮುಂತಾದವರು ವೇದಿಕೆಯಲ್ಲಿದ್ದರು. ಶಿಕ್ಷಕ ಪರಮೇಶ್ವರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
ನಂತರ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿದರು. ಕೊಡ್ಸೂಳ್ ಶಾಲೆಯಲ್ಲಿ 125ಕ್ಕೂ ಹೆಚ್ಚು ಮಕ್ಕಳಿದ್ದು ಶಾಲೆಗೊಂದು ಹೈಟೆಕ್ ಶೌಚಾಲಯ ಕೊಡಿ ಎನ್ನುವ ಬೇಡಿಗೆ ತಾತ್ಕಾಲಿಕ ಒಪ್ಪಿಗೆ ನೀಡಿದ್ದು ಶಿಫಾರಸು ಮಾಡುವ ಭರವಸೆ ಕ್ಷೇತ್ರ ಶಿಕ್ಷಣಾದಿಕಾರಿ ನೀಡಿದರು. ಶಾಲೆಗೆ ಕಂಪೌಂಡ್ ಕಟ್ಟಲು ಎನ್.ಆರ್.ಇ.ಜಿ. ಅಡಿಯಲ್ಲಿ ಕೂಲಿಯಾಳುಗಳೇ ದೊರೆತ್ತಿಲ್ಲ ಎಂದು ರಾಘವೇಂದ್ರ ಅವರು ಸಹಾಯಕ ಆಯುಕ್ತರಲ್ಲಿ ಮನವಿ ಮಾಡಿದರು. ಬೇರೆ ರೀತಿಯಲ್ಲಿ ಮಾಡಿ ಎನ್.ಆರ್.ಇ.ಜಿ.ಯಲ್ಲಿ ಖರ್ಚು ಹಾಕಲು ಅವಕಾಶ ಕೋರಿದರು. ಶ್ರೀಧರ ನಾಯ್ಕ ಅವರು ಧ್ವನಿಗೂಡಿಸಿದರು. ಇದಕ್ಕೆ ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು.
ಕೊಡ್ಸೂಳ್ ರಸ್ತೆ ಸಂಪೂರ್ಣ ಹಾಳಾಗಿದೆ, ಬ್ರಿಡ್ಜ ಕೂಡಾ ಶಿಥಿಲವಾಗಿದ್ದು ಹೊಸದಾಗಿ ಕಟ್ಟಬೇಕು. ಈ ಭಾಗದಲ್ಲಿ ಯಾವುದೇ ಮೊಬೈಲ್ ನೆಟ್‍ವರ್ಕ ಇಲ್ಲದೇ ಕೆಲವು ಮಕ್ಕಳಿಗೆ ಆನ್‍ಲೈನ್ ಕ್ಲಾಸಿಗೆ ತೊಂದರೆಯಾಗಿದೆ ಎಂದು ದೂರಿದರು. ಸಭೆಯಲ್ಲಿ ಮಾವಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದರೂ ಸಹ ಅದು ಜನತೆಗೆ ಉಪಯೋಗವಾಗುತ್ತಿಲ್ಲ, ಜನ ತಿರುಗಾಡದ ಸ್ಥಳದಲ್ಲಿ ಹಾಕಿದ್ದರಿಂದ ಸರಕಾರದ ಹಣ ಪೋಲಾಗಿದೆ ಅದನ್ನು ಮಧ್ಯವರ್ತಿ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಜಯಂತ ನಾಯ್ಕ ಅವರು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಸಹಾಯಕ ಆಯುಕ್ತೆ ಮಮತಾದೇವಿ ಒಂದು ವಾರದೊಳಗೆ ಸ್ಥಳ ಗುರುತಿಸಿಕೊಡುವಂತೆ ಲೋಕೋಪಯೋಗಿ ಇಲಾಖೆಗೆ ತಿಳಿಸುವಂತೆ ಪಂಚಾಯತಕ್ಕೆ ತಿಳಿಸಿದರು. ಹಲವರು ಮಾಶಾಸನ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಇತ್ಯಾದಿಗಳಿಗೆ ಅರ್ಜಿ ಸಲ್ಲಿಸಿದರು. ಸರ್ವೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿ ಸುಮಾರು 7 ತಿಂಗಳುಗಳೇ ಕಳೆದಿದೆ, ಇನ್ನೂ ತನಕ ನನ್ನ ಸ್ಥಳದ ಗಡಿನಿಡಿ ಮಾಡಿಕೊಟ್ಟಿಲ್ಲ, ಕಚೇರಿಗೆ ಹೋದರೆ ಸರಿಯಾದ ಸ್ಪಂಧನೆ ಇಲ್ಲ ಎಂದು ವ್ಯಕ್ತಿಯೋರ್ವರು ದೂರಿದರು. ತಕ್ಷಣ ಕ್ರಮ ಕೈಗೊಳ್ಳುವಂತೆ ಎ.ಡಿ.ಎಲ್.ಆರ್. ಅವರಿಗೆ ಸೂಚಿಸಲಾಯಿತು. ವಿವಿಧ ಇಲಾಖೆಗೆ ಸಂಬಂಧ ಪಟ್ಟಂತೆ ಬಂದ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಸ್ಥಳದಲ್ಲಿಯೇ ಹಂಚಿಕೆ ಮಾಡಿ ಸೂಕ್ತ ಆದೇಶ ಮಾಡುವಂತೆ ಕೋರಿದರು.
ಮಾವಳ್ಳಿ ಕಂದಾಯ ನಿರೀಕ್ಷಕ ಶ್ರೀನಿವಾಸ ಮಾಸ್ತಿ, ಗ್ರಾಮ ಲೆಕ್ಕಾಧಿಕಾಗಿಳು ಮುಂತಾದವರು ಉಪಸ್ಥಿತರಿದ್ದರು.