ಕೆ.ಆರ್.ಪೇಟೆ: ತಾಲೂಕಿನ ಶೀಳನೆರೆ ಹೋಬಳಿ ನವಿಲುಮಾರನಹಳ್ಳಿ ಗ್ರಾಮದಲ್ಲಿ 2006 ನೇ ಸಾಲಿನ ನವೆಂಬರ್ 11ರಂದು ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಗ್ರಾಮವಾಸ್ತವ್ಯ ಮಾಡಿದ್ದರು. ಆದರೆ ಗ್ರಾಮದಲ್ಲಿ ಮಾತ್ರ ಹೇಳಿಕೊಳ್ಳವಂತಹ ಅಭಿವೃದ್ಧಿ ಕೆಲಸಗಳು ಕಂಡು ಬರುತ್ತಿಲ್ಲ, ಗ್ರಾಮಸ್ಥರೇ ಹೇಳುವಂತೆ ಗ್ರಾಮವಾಸ್ತವ್ಯದಿಂದ ನವಿಲುಮಾರನಹಳ್ಳಿ ಗ್ರಾಮಕ್ಕೆ ಯಾವುದೇ ನಲಿವುಕಂಡಿಲ್ಲ. ಬದಲಿಗೆ ಮುಖ್ಯಮಂತ್ರಿಗಳು ವಾಸ್ತವ್ಯಇರಲು ಮನೆ ನೀಡಿದ್ದ ವ್ಯಕ್ತಿ ಒಂದು ಲಕ್ಷದ ಇಪ್ಪತ್ತು ಸಾವಿರ ನಷ್ಟವಾಗಿದೆ.
ನಾಡಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಗ್ರಾಮ ವಾಸ್ತವ್ಯಮಾಡುವುದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಹಿಂದೆ ಗ್ರಾಮ ವಾಸ್ತವ್ಯ ಮಾಡಿದ್ದ ಗ್ರಾಮಗಳು ಅಭಿವೃದ್ಧಿ ಕಂಡಿವೆಯಾ ಎಂಬ ಪ್ರಶ್ನೆ ರಾಜ್ಯದ ಜನತೆಯನ್ನು ಕಾಡುತ್ತಿದ್ದು, ಈ ಪ್ರಶ್ನೆಗೆ ಉತ್ತರವನ್ನು ಹುಡಕಲು ನವಿಲುಮಾರನಹಳ್ಳಿ ಗ್ರಾಮಕ್ಕೆ ತೆರಳಿದಾಗಿ ಅಲ್ಲಿ ನೆನಪಿನಲ್ಲಿ ಉಳಿಯುವಂತಹ ಯಾವುದೇ ಅಭಿವೃದ್ಧಿ ಕಂಡು ಬರಲಿಲ್ಲ. ಆದರೆ ಜೆಡಿಎಸ್ ಕಾರ್ಯಕರ್ತರು ಮಾತ್ರ ನಮ್ಮ ಗ್ರಾಮ ಸಾಕಷ್ಟು ಅಭಿವೃದ್ಧಿಯಾಗಿತ್ತು ಎಂದು ಮಾತಿನಲ್ಲಿ ಮಾತ್ರ ಹೇಳಿತ್ತಿರುವುದು ಕಂಡುಬಂತು.
ಗ್ರಾಮಕ್ಕೆ ಭೇಟಿ: ಕುಮಾರಸ್ವಾಮಿಯವರು ನವಿಲುಮಾರನಹಳ್ಳಿ ಗ್ರಾಮದಲ್ಲಿ ಹೆಚ್ಚು ಸಮಯ ಗ್ರಾಮವಾಸ್ತವ್ಯ ಮಾಡಿರಲಿಲ್ಲ. ಗ್ರಾಮಕ್ಕೆ ಭೇಟಿ ನೀಡಿದ ನಂತರ ತಮ್ಮಪಕ್ಷದ ಮುಖಂಡರನ್ನು ಬೇಟಿಮಾಡಿದ ನಂತರ ಜ್ವರ ಕಾಣಿಸಿಕೊಂಡಿತು ಎಂದು ರಾತ್ರೋರಾತ್ರಿ ಅಲ್ಲಿಂದ ತೆರಳಿದ್ದಾರೆ. ಆದರೂ ಇದ್ದ ಕೆಲವು ಗಂಟೆಗಳಲ್ಲಿ ಗ್ರಾಮವನ್ನು ಅಭಿವೃದ್ಧಿ ಪಡಿಸುವ ಭರವಸೆಯನ್ನು ನೀಡಿದ್ದರು. ಆದರೆ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಇತರೆ ಅನುದಾನವನ್ನು ಬಳಸಿಕೊಂಡು ಗ್ರಾಮಕ್ಕೆ ಚರಂಡಿ, ರಸ್ತೆ ನಿರ್ಮಾಣ ಮಾಡಲಾಗಿದೆ. ಗ್ರಾಮದಲ್ಲಿ ನಿರ್ಮಾಣ ಮಾಡಿರುವ ಚರಂಡಿಗಳು ಸಂಪೂರ್ಣ ಕಿತ್ತುಬಂದಿದ್ದು ಅಸ್ತಿಪಂಜರದಂತೆ ನಿಂತಿವೆ. ಕುಡಿವ ನೀರಿಗೆ ಕೊಳವೆ ಬಾವಿಗಳನ್ನು ಕೊರೆಸಿದ್ದು ನೀರಿಗೆ ಯಾವುದೇ ಸಮಸ್ಯೆಗಳಲ್ಲಿ ಎಂಬುದು ಗ್ರಾಮಸ್ಥರ ಮಾತಾಗಿದೆ.
ವಾಸ್ತವ್ಯ ಇದ್ದ ಮನೆ ಮಾಲೀಕನಿಗೆ ನಷ್ಟ: ಕುಮಾರಸ್ವಾಮಿಯವರು ವಾಸ್ತವ್ಯ ಇರಲು ವ್ಯವಸ್ಥೆಮಾಡಿದ್ದ ಮಾಯಿಗೌಡ ರವರ ಮನೆಯನ್ನು ಅಧಿಕಾರಿಗಳು ದುರಸ್ತಿ ಮಾಡಿಸದೆ ಮನೆಯ ಮಾಲೀಕರಿಗೆ ನೀವು ದುರಸ್ತಿ ಮಾಡಿಸಿಕೊಳ್ಳಿ ನಾವು ಆನಂತರ ನಿಮಗೆ ಹಣ ನೀಡುತ್ತೇವೆ ಎಂದು ತಿಳಿಸಿದ್ದರಂತೆ ಇದರ ಜೊತೆಗೆ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಇದ್ದಂತಹ ಗುಂಡಿಗಳನ್ನು ಮುಚ್ಚಿಸಿ ನಾವು ಹಣ ನೀಡುತ್ತೇವೆ ಎಂದು ಭರವಸೆ ನೀಡಿದ್ದರಂತೆ ಅಧಿಕಾರಿಗಳ ಮಾತನ್ನು ನಂಬಿ ಮನೆಯ ಮಾಲೀಕ ಮಾಯಿಗೌಡ ಕೈ ಸಾಲಮಾಡಿ ಒಂದು ಲಕ್ಷದ ಇಪ್ಪತ್ತು ಸಾವಿರ ಹಣವನ್ನು ಖರ್ಚುಮಾಡಿ ಮನೆಯ ದುರಸ್ತಿ ಮಾಡಿಸುವ ಜೊತೆಗೆ ರಸ್ತೆಯಲ್ಲಿ ಇದ್ದಂತಹ ಗುಂಡಿಗಳನ್ನು ಮುಚ್ಚಿಸಿದ್ದರು. ಆದರೆ, ಮಾಯಿಗೌಡರಿಗೆ ಹಣ ಪಾವತಿಮಾಡದೇ ಇರುವುದರಿಂದ ದೊಡ್ಡಮಟ್ಟದ ಹಣವನ್ನು ಹೊಂದಿಸಿಸಾಲ ತೀರಿಸಲಾಗದೆ ತಮ್ಮ ಜಮೀನಿನಲ್ಲಿ ಬೆಳೆದಿದ್ದ ನಾಲ್ಕು ದೊಡ್ಡದೊಡ್ಡ ಬೇವಿನ ಮರಗಳನ್ನು ಮಾರಾಟಮಾಡಿ ಸಾಲ ತೀರಿಸಿದ್ದಾರೆ.