Advertisement

ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ಗ್ರಾಮ ವಾಸ್ತವ್ಯ

01:29 PM Nov 20, 2017 | |

ದೊಡ್ಡಬಳ್ಳಾಪುರ : ಗ್ರಾಮಗಳ ಏಳಿಗೆ, ಮಹಿಳೆಯರ ಸಬಲೀಕರಣಕ್ಕಾಗಿ ಯೋಜನೆಗಳನ್ನು ರೂಪಿಸುವಲ್ಲಿ ಕಾಂಗ್ರೆಸ್‌ ಪಕ್ಷ ಮುಂಚೂಣಿಯಲ್ಲಿದ್ದು, ಗ್ರಾಮಗಳ ಸ್ಥಿತಿಗತಿ ಸುಧಾರಣೆ ಪರಮೋದ್ದೇಶ ಹೊಂದಿದೆ ಎಂದು ಕೆಪಿಸಿಸಿ ಮಹಿಳಾ ಉಸ್ತುವಾರಿ ಶಾಂಭವಿ ಹೇಳಿದರು.

Advertisement

ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ತಿಪ್ಪೂರು ಹತ್ತಿರದ ಬೈರಾಪುರ ತಾಂಡದ ಶತಾಯುಷಿ ಮಹಿಳೆ ಗೌರಿಬಾಯಿ ಅವರ ಮನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ನೇತೃತ್ವದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಕಾಂಗ್ರೆಸ್‌ ಸಾಮಾಜಿಕ ನ್ಯಾಯಕ್ಕೆ ಆದ್ಯತೆ: ಇಡೀ ವಿಶ್ವದಲ್ಲೆ ಅತ್ಯಂತ ಸಮರ್ಥವಾಗಿ ಪ್ರಜಾಪ್ರಭುತ್ವ ದೇಶದಲ್ಲಿ ಆಡಳಿತ ನಡೆಸಿದ ಕೀರ್ತಿ ಮಾಜಿ ಪ್ರಧಾನ ಮಂತ್ರಿ ಇಂದಿರಾಗಾಂಧಿ ಅವರಿಗೆ ಸಲ್ಲುತ್ತದೆ. 20 ಅಂಶಗಳ ಕಾರ್ಯಕ್ರಮ ತರುವ ಮೂಲಕ ತುಳಿತಕ್ಕೆ ಒಳಗಾದವರು, ಬಡವರ ಏಳಿಗೆಗಾಗಿ ಶ್ರಮಿಸಿದ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿಯೂ ದೇಶದಲ್ಲಿನ ಸವಾಲುಗಳನ್ನು ದಿಟ್ಟವಾಗಿ ಎದುರಿಸಿದವರು. ಇಂಥ ದಿಟ್ಟ ಮಹಿಳೆ ನಮಗೆ ಸ್ಫೂರ್ತಿಯಾಗಿದ್ದು, ಇವರ ಆಶಯಗಳನ್ನು ಅನುಷ್ಟಾನಗೊಳಿಸುವಲ್ಲಿ ಶ್ರಮಿಸುತ್ತೇವೆ.

ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿರುವ ಕಾಂಗ್ರೆಸ್‌ ಮಹಿಳಾ ಗ್ರಾಮ ವಾಸ್ತವ್ಯವನ್ನು ಸ್ಥಳೀಯ ವೈಶಿಷ್ಟ್ಯತೆಗಳ ತಾಣಗಳಲ್ಲಿ ಆಯೋಜಿಸಲಾಗುತ್ತಿದೆ. ಈ ಮೂಲಕ ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಬೈರಾಪುರ ತಾಂಡಾದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಕುಡಿತ ಮತ್ತು ಕುಡಿತದಿಂದ ಬಾಧಿತ ಕುಟುಂಬಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ತುಳಸಿ ಸಸಿ ವಿತರಣೆ: ಕೆಪಿಸಿಸಿ ಮಹಿಳಾ ಘಟಕ ಉಸ್ತುವಾರಿ ಸುಮಾರಾಣಿ ಮಾತನಾಡಿ, ದೇಶ ಕಂಡ ಅಪ್ರತಿಮ ರಾಜಕೀಯ ನಾಯಕಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮ ಶತಮಾನೋತ್ಸವವನ್ನು ವಿಶಿಷ್ಟವಾಗಿ ಆಚರಿಸುವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ನಡೆಯುತ್ತಿದ್ದು, ಸಾಂಕೇತಿಕವಾಗಿ ತುಳಸಿ ಸಸಿಗಳನ್ನು ವಿತಸರಿಸುವ ಮೂಲಕ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

Advertisement

ಗ್ರಾಮ ವಾಸ್ತವ್ಯ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕ ಅಧ್ಯಕ್ಷೆ ಎಚ್‌.ಎಸ್‌. ರೇವತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ನಡೆಯುತ್ತಿರುವ ಗ್ರಾಮ ವಾಸ್ತವ್ಯ ಗ್ರಾಮ ಜೀವನದ ಅರಿವಿಗೆ ಪೂರಕವಾಗಿದೆ ಎಂದರು. 

ಈ ವೇಳೆ ಶತಾಯುಷಿ ಗೌರಿಬಾಯಿ ಮತ್ತು ಕುಟುಂಬದೊಂದಿಗೆ ಮಹಿಳಾ ಕಾಂಗ್ರೆಸ್‌ ಮುಖಂಡರು ಸಂವಾದ ನಡೆಸಿದರು. ಜಿಪಂ ಸದಸ್ಯೆ ಕನ್ಯಾಕುಮಾರಿ, ಕೆಪಿಸಿಸಿ ಸದಸ್ಯೆ ಭಾಗ್ಯ, ವಿನೋದ, ಮಹಿಳಾ ಕಾಂಗ್ರೆಸ್‌ನ ಮುಖಂಡರಾದ ನಾಗರತ್ನ, ಮಮತಾ, ಮಂಜುಳಾ, ಪ್ರಭಾವತಿ, ಪುಷ್ಪಲತಾ, ಜ್ಯೋತಿ, ಹನುಮಂತಮ್ಮ, ರಾಜೇಶ್ವರಿ, ವರಲಕ್ಷ್ಮೀ, ಕಾಂಗ್ರೆಸ್‌ ತಾಲೂಕು ಅಧ್ಯಕ್ಷ ಬೈರೇಗೌಡ, ರಾಮಕೃಷ್ಣಯ್ಯ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next