Advertisement

ಗಡಿನಾಡ ಶಾಲೆ: ದಾಖಲಾತಿ ಇದ್ದರೂ ಮೂಲಸೌಕರ್ಯ ಕೊರತೆ

02:50 AM Dec 21, 2018 | Team Udayavani |

ನಿಮ್ಮೂರಿನ ಪ್ರಮುಖ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಅವುಗಳ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿ ಹೊಸ ಸರಣಿ ಗ್ರಾಮ ನೋಟ ಇಂದಿನಿಂದ ಆರಂಭ. ಗ್ರಾಮದ ಪ್ರಮುಖ ಸಮಸ್ಯೆಗಳನ್ನು ಇಲ್ಲಿ ಬಿತ್ತರಿಸಲಾಗುವುದು.

Advertisement

ಈಶ್ವರಮಂಗಲ: ಕೇರಳ ಕರ್ನಾಟಕ ಗಡಿಭಾಗದಲ್ಲಿರುವ ನೆಟ್ಟಣಿಗೆಮುಟ್ನೂರು ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಕೆಲವೇ ಕಿ.ಮೀ. ಅಂತರದಲ್ಲಿ ಕೇರಳದ ಶಾಲೆಗಳು ಇದ್ದರೂ ಕನ್ನಡ ಅಭಿಮಾನದ ಹೆತ್ತವರು ಇರುವುದರಿಂದ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ವೃದ್ಧಿಸುತ್ತಿದೆ. ಆದರೆ ಇಲ್ಲಿ ಮೂಲಸೌಕರ್ಯದ ಕೊರತೆ ಮಾತ್ರ ಎದ್ದು ಕಾಣುತ್ತದೆ.

ಬೇಡಿಕೆಗಳು ಹಲವಾರು
ಕೇರಳ ಕರ್ನಾಟಕ ಗಡಿಭಾಗದಲ್ಲಿ ಪ್ರಾಥಮಿಕ ಶಾಲೆ ಇದೆ. ಸುಮಾರು 170 ಮಕ್ಕಳು ದಾಖಲಾತಿ ಹೊಂದಿದ್ದಾರೆ. ಕಳೆದ ವರ್ಷ ಛಾವಣಿಯ ದುರಸ್ತಿ ಕಾರ್ಯ ಮುಗಿದಿದೆ. ಸುಮಾರು 70ಕ್ಕಿಂತಲೂ ಹೆಚ್ಚು ಹೆಣ್ಣು ಮಕ್ಕಳು ಇರುವ ಶಾಲೆಯಲ್ಲಿ ಶೌಚಾಲಯದ ಸಮಸ್ಯೆ ಇದೆ. ಇದ್ದ ಶೌಚಾಲಯ ಬಂದ್‌ ಆಗಿದ್ದರೆ ಕೆಲವು ಶೌಚಾಲಯಗಳ ಬಾಗಿಲು, ಬೇಸಿನ್‌ ಕಿತ್ತು ಹೋಗಿದ್ದು, ಬಯಲು ಶೌಚಕ್ಕೆ ಮಕ್ಕಳು ಹೋಗಬೇಕಾಗಿದೆ. ಸಮರ್ಪಕವಾದ ಶೌಚಾಲಯ ವ್ಯವಸ್ಥೆ ಆಗಬೇಕಾಗಿದೆ. ಅಕ್ಷರ ದಾಸೋಹ ಕೊಠಡಿ ಚಿಕ್ಕದಾಗಿದೆ. ಶಾಲೆಯ ಸುತ್ತ ಆವರಣ ಗೋಡೆ ಇಲ್ಲ. ಮೈದಾನ ರಚನೆಯಾಗಬೇಕು. ಸಭಾಭವನ, ರಂಗಮಂದಿರದ ಬೇಡಿಕೆಯೂ ಇದೆ. ಶಿಕ್ಷಕರ ಕೊಠಡಿ ಮಳೆಗಾಲದಲ್ಲಿ ಸೋರುತ್ತದೆ. ಇದರಿಂದ ಮಕ್ಕಳಿಗೆ ವಿದ್ಯುತ್‌ ಶಾಕ್‌ ಅನುಭವವಾಗಿದೆ. ಕಳೆದ ವರ್ಷ ದಾನಿಗಳ ಮೂಲಕ ಸರಿಪಡಿಸಿದ್ದರೂ ಮತ್ತೆ ಸೋರುತ್ತಲೇ ಇದೆ. ಮಕ್ಕಳ ಗ್ರಾಮಸಭೆಯಲ್ಲಿ ಈ ಶಾಲೆಯ ಎಲ್ಲ ಸಮಸ್ಯೆಗಳು ಪ್ರಸ್ತಾವಗೊಂಡಿದ್ದವು. ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.


ಮುಖ್ಯ ಶಿಕ್ಷಕರೇ ಇಲ್ಲಿಲ್ಲ!

ನೆಟ್ಟಣಿಗೆಮುಟ್ನೂರು ಗ್ರಾಮದಲ್ಲಿರುವುದು ಏಕೈಕ ಸರಕಾರಿ ಪ್ರೌಢಶಾಲೆ ಇದಾಗಿದೆ. ವಿದ್ಯಾರ್ಥಿಗಳ ಸಂಖ್ಯೆ 150ಕ್ಕಿಂತಲೂ ಹೆಚ್ಚು ಇದೆ. ಹೀಗಿದ್ದರೂ ಮುಖ್ಯ ಶಿಕ್ಷಕರ ಹುದ್ದೆಯೇ ಇಲ್ಲಿ ಖಾಲಿ ಇದೆ. ಪಿಸಿಎಂ, ಹಿಂದಿ, ವೃತ್ತಿ ಶಿಕ್ಷಕರ ಹುದ್ದೆ ಮತ್ತು ಗ್ರೂಪ್‌ ಡಿ ಹುದ್ದೆ ಖಾಲಿ ಇದೆ. ದ್ವಿ. ದರ್ಜೆ ಸಹಾಯಕ ಹುದ್ದೆ ಇದ್ದರೂ ಶಾಲೆಯಲ್ಲಿ ಮೂರು ದಿನ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಬೇಡಿಕೆಗೆ ಸ್ಪಂದಿಸಿ: ಆಗ್ರಹ 
ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲಸೌಕರ್ಯದ ಕೊರತೆ ಇದೆ. ಬಾಲಕಿಯರು ಶೌಚಾಲಯ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ರಂಗಮಂದಿರ, ಅಕ್ಷರ ದಾಸೋಹದ ನೂತನ ಕೊಠಡಿ, ಆವರಣ ಗೋಡೆ, ಆಟದ ಮೈದಾನ ಮೊದಲಾದ ಬೇಡಿಕೆ ಇದೆ. ಜನಪ್ರತಿನಿಧಿಗಳು, ಅಧಿಕಾರಿಗಳು ತುರ್ತಾಗಿ ಸ್ಪಂದಿಸಬೇಕು ಎಂದು ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಬಿ.ಎಚ್‌. ಸೂಫಿ ಹೇಳಿದ್ದಾರೆ.

Advertisement

ಅಪೂರ್ಣ ರಂಗಮಂದಿರ
ಶಾಲೆಯ ಕೊಠಡಿಯ ಮೇಲ್ಭಾಗದಲ್ಲಿ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಅವರ ಅನುದಾನದಿಂದ ತಲಾ 2 ಲಕ್ಷ ರೂ, ತಾ.ಪಂ. ಸದಸ್ಯೆ ಫೌಝೀಯಾ ಇಬ್ರಾಹಿಂ ಅವರ ತಾ.ಪಂ. ಅನುದಾನದಿಂದ 1ಲಕ್ಷ ರೂ. ಮೊತ್ತದ ಕಾಮಗಾರಿ ನಡೆದಿದೆ. ಆದರೆ ಹತ್ತಿ ಹೋಗಲು ಮೆಟ್ಟಿಲಿನ ವ್ಯವಸ್ಥೆ ಇಲ್ಲದೇ ಇರುವುದರಿಂದ ಕಾಮಗಾರಿ ಅಪೂರ್ಣವಾಗಿದೆ.

ಸಾಮಾನ್ಯ ಸಭೆಯಲ್ಲಿ ಪ್ರಸ್ತಾವ
ಅಪೂರ್ಣ ಕಾಮಗಾರಿಯ ಬಗ್ಗೆ ಮಕ್ಕಳ ಗ್ರಾಮಸಭೆ ಮಾತ್ರವಲ್ಲದೆ ನೆಟ್ಟಣಿಗೆಮುಟ್ನೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಪ್ರಸ್ತಾವಗೊಂಡು ಚರ್ಚೆಯಾಗಿತ್ತು. ಮೆಟ್ಟಿಲು ರಚನೆ ಬಗ್ಗೆ ಶಾಸಕ ಸಂಜೀವ ಮಠಂದೂರು ಅವರು ಅನುದಾನ ಕಾಯ್ದಿರಿಸುವ ಭರವಸೆ ನೀಡಿದ್ದಾರೆ ಎಂದು ಸದಸ್ಯ ಅಬ್ದುಲ್‌ ಖಾದರ್‌ ಅವರು ಸಭೆಯಲ್ಲಿ ಹೇಳಿದ್ದಾರೆ.

ಬೇಡಿಕೆ ಸಲ್ಲಿಸಲಾಗಿದೆ
ನೆಟ್ಟಣಿಗೆಮುಟ್ನೂರು (ಕರ್ನೂರು) ಹಿರಿಯ ಪ್ರಾಥಮಿಕ ಶಾಲೆಗೆ ಶೌಚಾಲಯಕ್ಕೆ ಜಿ.ಪಂಗೆ ಬೇಡಿಕೆ ಸಲ್ಲಿಸಲಾಗಿದೆ. ಅನುಮೋದನೆ ಸಿಕ್ಕಿದ ತತ್‌ಕ್ಷಣ ಕಾಮಗಾರಿ ಪ್ರಾರಂಭಿಸುತ್ತೇವೆ.
-ಎಚ್‌.ಟಿ. ಸುನೀಲ್‌,  ಪಿಡಿಒ ನೆಟ್ಟಣಿಗೆಮುಟ್ನೂರು ಗ್ರಾ.ಪಂ.

ಗಮನಕ್ಕೆ ಬಂದಿದೆ
ಪ್ರೌಢಶಾಲೆಯ ರಂಗಮಂದಿರದ ವಿಷಯ ನನ್ನ ಗಮನಕ್ಕೆ ಬಂದಿದೆ. ಶಾಸಕರ ನಿಧಿಯ ಅನುದಾನದಿಂದ ಕಾಮಗಾರಿ ಮುಗಿಸಲಾಗುವುದು.
-ಸಂಜೀವ ಮಠಂದೂರು, ಶಾಸಕರು

— ಮಾಧವ ನಾಯಕ್‌

ನಮ್ಮೂರ ಅಭಿವೃದ್ಧಿ ನಮ್ಮ ಜವಾಬ್ದಾರಿ

ಓದುಗರೂ ತಮ್ಮೂರಿನ ಗಂಭೀರ ಸಾರ್ವಜನಿಕ ಸಮಸ್ಯೆಯನ್ನು ನಮ್ಮಲ್ಲಿ ಹೇಳಿಕೊಳ್ಳಬಹುದು. ಸಮಸ್ಯೆಯ ಚಿತ್ರ – ಮಾಹಿತಿಯನ್ನು ನಮ್ಮ ವಾಟ್ಸ್‌ ಆ್ಯಪ್‌ ಸಂಖ್ಯೆ 9108051452ಗೆ ಕಳುಹಿಸಿದರೆ, ಉದಯವಾಣಿ ‘ಸುದಿನ’ ವರದಿಗಾರರು ಸ್ಥಳಕ್ಕೆ ಭೇಟಿ ನೀಡುವರು. ವಿಶೇಷ ವರದಿ ಮೂಲಕ ಸಮಸ್ಯೆಯನ್ನು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರಲಾಗುವುದು. ‘ನಮ್ಮೂರ ಅಭಿವೃದ್ಧಿ ನಮ್ಮ ಜವಾಬ್ದಾರಿ’ ಎಂಬ ಪರಿಕಲ್ಪನೆಯ ಈ ಸರಣಿಯಲ್ಲಿ ನೀವೂ ಪಾಲ್ಗೊಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next