Advertisement

ಬೇಕಾಬಿಟ್ಟಿ ಪೈಪ್‌ಲೈನ್‌ ಕಾಮಗಾರಿಗೆ ವ್ಯಾಪಕ ಆಕ್ರೋಶ

03:11 PM Oct 24, 2021 | Team Udayavani |

ಸಿಂಧನೂರು: ಜಲಜೀವನ್‌ ಮಿಷನ್‌ ಯೋಜನೆಯಡಿ ಮನೆ-ಮನೆಗೆ ಕುಡಿವ ನೀರು ಕಲ್ಪಿಸುವ ಪೈಪ್‌ಲೈನ್‌ ಕಾಮಗಾರಿ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Advertisement

ಸಿಸಿ ರಸ್ತೆಗಳನ್ನು ಒಡೆದು ಪೈಪ್‌ಲೈನ್‌ ಹಾಕಲಾಗುತ್ತಿದ್ದು, ಕೆಲವು ಕಡೆ ನೆಲಕ್ಕೆ ಹೊಂದಿಕೊಂಡಂತೆ ಮಣ್ಣು ಹಾಕಿ ಪೈಪ್‌ ಗಳನ್ನು ಬೇಕಾಬಿಟ್ಟಿಯಾಗಿ ಮುಚ್ಚುತ್ತಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಕುಡಿವ ನೀರಿನ ಅಭಾವ ತಪ್ಪಿಸಲು ಪೂರಕವಾಗಿರುವ ಯೋಜನೆ ಅನುಷ್ಠಾನ ವಿಷಯದಲ್ಲಿ ಗ್ರಾಮಸ್ಥರಿಂದಲೇ ಬೇಸರ ವ್ಯಕ್ತವಾಗುತ್ತಿದೆ.

ಬೇಕಾಬಿಟ್ಟಿ ಕೆಲಸ

ತಾಲೂಕಿನ ಬೆಳಗುರ್ಕಿ ಗ್ರಾಮದಲ್ಲಿ 439 ಮನೆಗಳಿಗೆ ಕುಡಿವ ನೀರು ಪೂರೈಸಲು ಹಾಗೂ ಮನೆಮನೆಗೆ ನಳದ ಸಂಪರ್ಕ ಕಲ್ಪಿಸಲು 1.23 ಕೋಟಿ ರೂ. ವೆಚ್ಚದಲ್ಲಿ ಜಲಜೀವನ ಮಿಷನ್‌ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಗ್ರಾಮದ ಹೊರಭಾಗದಲ್ಲಿ ಯೋಜನೆಯಡಿ ಕೆರೆ ನಿರ್ಮಿಸಲಾಗುತ್ತಿದೆ. ನೀರಿನ ಟ್ಯಾಂಕ್‌ ನಿರ್ಮಿಸಿ ಅಲ್ಲಿಂದ ಪೈಪ್‌ ಲೈನ್‌ ಮೂಲಕ ಮನೆ-ಮನೆಗೆ ಶುದ್ಧ ನೀರು ಒದಗಿಸುವುದು ಈ ಯೋಜನೆ ಉದ್ದೇಶ. ಪೈಪ್‌ಲೈನ್‌ ಹಾಕಿರುವುದು ಸಮರ್ಪಕವಾಗಿಲ್ಲ ಎಂಬ ದೂರು ವ್ಯಕ್ತವಾಗಿದೆ. ಕನಿಷ್ಠ ಎರಡು ಅಡಿಯಷ್ಟು ಅಗೆದು ಪೈಪ್‌ಗ್ಳನ್ನು ಒಳಗೆ ಹಾಕಿದರೆ, ವಾಹನಗಳು ಸಂಚರಿಸಿದಾಗ ಪೈಪ್‌ ಗಳು ಒಡೆಯುವುದಿಲ್ಲ. ನೆಲಕ್ಕೆ ಹೊಂದಿಕೊಂಡ ರೀತಿಯಲ್ಲಿ ಪೈಪ್‌ ಹಾಕುತ್ತಿರುವುದರಿಂದ ಸಮಸ್ಯೆಯಾಗುತ್ತದೆ ಎಂದು ಗ್ರಾಮಸ್ಥರು ಆಕ್ಷೇಪಿಸಿದ್ದಾರೆ.

ಇದನ್ನೂ ಓದಿ: ಕಲುಷಿತ ನೀರು ಸೇವನೆ: ಇಬ್ಬರು ಸಾವು

Advertisement

ಅಧಿಕಾರಿಗಳ ಮೇಲೆ ಒತ್ತಡ

ಗ್ರಾಮೀಣ ನೀರು ಪೂರೈಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ, ಈ ಬಗ್ಗೆ ಸಮಸ್ಯೆ ಹೇಳಿದಾಗಲೂ ಸರಿಪಡಿಸಿಲ್ಲ ಎಂದು ಇಲ್ಲಿನ ಗ್ರಾಪಂ ಸದಸ್ಯರು ದೂರಿದ್ದಾರೆ. ಕುಡಿವ ನೀರಿನ ಕೆರೆ ನಿರ್ಮಾಣ ಸ್ಥಳಕ್ಕೆ ಎಇಇ ಮತ್ತು ಜೆಇ ಭೇಟಿ ನೀಡಿ ಹೋಗಿದ್ದು, ಗ್ರಾಮದಲ್ಲಿ ಪೈಪ್‌ಲೈನ್‌ ಗಳನ್ನು ನೋಡಲು ಬಂದಿಲ್ಲ. ನಿರಂತರವಾಗಿ ದೂರು ಸಲ್ಲಿಸಿದಾಗಲೂ ಸ್ಪಂದಿಸಿಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೇ.50 ಕೆರೆ ಕಾಮಗಾರಿ ಮುಗಿದಿದ್ದರೆ, ನೀರಿನ ಟ್ಯಾಂಕ್‌ ನಿರ್ಮಾಣಕ್ಕೆ ಪಿಲ್ಲರ್‌ ಹಾಕಲಾಗಿದೆ. ನೀರು ಬಿಟ್ಟಾಗ ಅರೆಬರೆ ನೆಲ ಅಗೆದು ಹಾಕಿರುವ ಪೈಪ್‌ಲೈನ್‌ ಕೈ ಕೊಡುವ ಸಾಧ್ಯತೆ ಕಾಣಿಸಿದೆ. ಎಲ್ಲೆಂದರಲ್ಲಿ ಸಿಸಿ ರಸ್ತೆಗಳನ್ನು ಅಗೆದಿರುವುದರಿಂದ ಅವುಗಳನ್ನು ಮರು ನಿರ್ಮಾಣ ಮಾಡಿಕೊಡಬೇಕೆಂಬ ಬೇಡಿಕೆಯೂ ವ್ಯಕ್ತವಾಗಿದೆ. ಇತ್ತೀಚೆಗೆ ಹೊಸಳ್ಳಿ ಕ್ಯಾಂಪಿನಲ್ಲಿ ಕೆರೆ ನಿರ್ಮಿಸುತ್ತಿದ್ದಾಗ ಅಲ್ಲಿ ನೀರಿಗೆ ಸುತ್ತಲಿನ ಗದ್ದೆಯ ಬಸಿ ಸೇರುವ ಬಗ್ಗೆ ಆಕ್ಷೇಪಿಸಿದ್ದರು. ಇಲ್ಲಿ ಪೈಪ್‌ ಲೈನ್‌ ಬಗ್ಗೆ ಅಪಸ್ವರ ಕೇಳಿ ಬಂದಿದ್ದು, ಜೆಜೆಎಂ ಯೋಜನೆ ಆರಂಭದಲ್ಲೇ ಜನರ ಆಕ್ರೋಶಕ್ಕೆ ಗುರಿಯಾಗುತ್ತಿದೆ.

ಕೆರೆ ಹಸ್ತಾಂತರ ಬಾಕಿ

ಬೆಳಗುರ್ಕಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಂದ ಖರೀದಿ ಮಾಡಿದ ಭೂಮಿಯಲ್ಲಿ ಕೆರೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇಲ್ಲಿನ ಕೆರೆ ಜಾಗ ಇದುವರೆಗೂ ಗ್ರಾಪಂನವರಿಗೆ ಹಸ್ತಾಂತರ ಆಗಿಲ್ಲ. ತಾತ್ಕಾಲಿಕವಾಗಿ ಜನಪ್ರತಿನಿಧಿಗಳು ಮಧ್ಯಸ್ಥಿಕೆ ವಹಿಸಿ ಕಾಮಗಾರಿ ಆರಂಭಿಸಿದ್ದಾರೆ. ಜಮೀನು ಹಸ್ತಾಂತರ ಆಗದ ಸ್ಥಳದಲ್ಲಿ ಕೆರೆ ನಿರ್ಮಾಣವಾಗುತ್ತಿದ್ದು, ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂಬ ಒತ್ತಾಯವೂ ಕೇಳಿ ಬಂದಿದೆ.

ನೀರಿನ ಪೈಪ್‌ಗ್ಳನ್ನು ಎರಡು ಫೀಟ್‌ ಒಳಗೆ ಹಾಕಬೇಕು. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಮೇಲ್ಗಡೆ ಹಾಕಿದ ಪೈಪ್‌ ತೆಗೆದು, ಒಳಗೆ ಹಾಕುವಂತೆ ಸೂಚಿಸಲಾಗಿದೆ. ಎಲ್ಲೆಲ್ಲಿ ಸಮಸ್ಯೆ ಇದೆ ಎಂಬುದನ್ನು ಪರಿಶೀಲಿಸಿ, ಸರಿಪಡಿಸಲಾಗುವುದು. -ಧನರಾಜ್‌, ಜೆಇ, ಗ್ರಾಮೀಣ ನೀರು ಸರಬರಾಜು ಇಲಾಖೆ, ಸಿಂಧನೂರು

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next