ಬೆಂಗಳೂರು: ರಾಜ್ಯದಲ್ಲಿ ಅವಧಿ ಮುಗಿದ 5,800 ಗ್ರಾ.ಪಂ.ಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಲು ರಾಜ್ಯ ಚುನಾವಣ ಆಯೋಗ ಸಿದ್ಧತೆ ಚುರುಕುಗೊಳಿಸಿದೆ.
Advertisement
ಕೋವಿಡ್ 19 ಹಿನ್ನೆಲೆಯಲ್ಲಿ ಸುರಕ್ಷೆ, ಮುಂಜಾಗ್ರತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಬಹು ಹಂತಗಳಲ್ಲಿ ಚುನಾವಣೆ ನಡೆಸುವ ಸಾಧ್ಯತೆಯಿದೆ.
ಇದನ್ನು ಕಂದಾಯ ವಲಯವಾರು ವಿಭಜಿಸಲಾಗುತ್ತಿತ್ತು. ಆದರೆ ಕೋವಿಡ್ 19 ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ತಾಲೂಕುವಾರು ವಿವಿಧ ಹಂತಗಳಲ್ಲಿ ಚುನಾವಣೆ ನಡೆಸಬೇಕು ಎಂದು ಜಿಲ್ಲಾಡಳಿತಗಳಿಂದ ಸಲಹೆ ಬಂದಿದೆ ಎನ್ನಲಾಗಿದೆ. ಸಮಾಲೋಚನೆ ವೇಳೆ ಜನದಟ್ಟಣೆ ಕಡಿಮೆ ಮಾಡಲು ಮತ್ತು ಸಿಬಂದಿ ಸಂಚಾರ, ಮತದಾರರ ಪ್ರಯಾಣಕ್ಕೆ ಮಿತಿ ಹಾಕಲು ಜಿಲ್ಲೆಗಳ ಮಟ್ಟದಲ್ಲಿ ಎರಡರಿಂದ ಮೂರು ಹಂತಗಳಲ್ಲಿ ತಾಲೂಕುವಾರು ಆಗಿ ವಿಭಜಿಸಿ ಚುನಾವಣೆ ನಡೆಸಿದರೆ ಸೂಕ್ತ ಎಂಬ ಅಭಿಪ್ರಾಯ ಬಂದಿದೆ ಎನ್ನಲಾಗಿದೆ.
Related Articles
2015ರಲ್ಲಿ 176 ತಾಲೂಕುಗಳ 5,855 ಗ್ರಾ.ಪಂ.ಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಸಲಾಗಿತ್ತು. ಈಗ 226 ತಾಲೂಕುಗಳ 5,800 ಗ್ರಾ.ಪಂ.ಗಳ 93 ಸಾವಿರಕ್ಕೂ ಹೆಚ್ಚು ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಬೇಕಾಗಿದೆ. ಇದಕ್ಕಾಗಿ ಸಾಮಾನ್ಯ ಪರಿಸ್ಥಿತಿಯಲ್ಲಿ 40 ಸಾವಿರ ಮತಗಟ್ಟೆಗಳನ್ನು ಸ್ಥಾಪಿಸಬೇಕಾಗುತ್ತದೆ.
Advertisement
ಕೋವಿಡ್ 19 ಹಿನ್ನೆಲೆಯಲ್ಲಿ 10 ಸಾವಿರ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಬೇಕಿದೆ. ಅದಕ್ಕೆ ತಕ್ಕಂತೆ 50 ಸಾವಿರ ಹೆಚ್ಚುವರಿ ಚುನಾವಣ ಸಿಬಂದಿ, 10 ಸಾವಿರ ಪೊಲೀಸ್ ಸಿಬಂದಿ, 50 ಸಾವಿರ ಆರೋಗ್ಯ ಕಾರ್ಯಕರ್ತೆಯರು ಬೇಕು. ಹೆಚ್ಚುವರಿ ಮತಗಟ್ಟೆಗಳ ಸ್ಥಾಪನೆಗೆ 35 ಕೋಟಿ ರೂ., ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ ವ್ಯವಸ್ಥೆಗೆ 20 ಕೋಟಿ ರೂ. ಮತ್ತು ಸಾರಿಗೆ ವ್ಯವಸ್ಥೆಗೆ 10 ಕೋಟಿ ರೂ. ಸೇರಿ ಹೆಚ್ಚುವರಿಯಾಗಿ 65 ಕೋಟಿ ರೂ. ಬೇಕಾಗುತ್ತದೆ ಎಂದು ಆಯೋಗ ಲೆಕ್ಕಾಚಾರ ಹಾಕಿದೆ.