Advertisement

ಕೋವಿಡ್‌ ಮುಕ್ತ ಗ್ರಾಮಗಳಿಗೆ ಪಣ ತೊಡಿ

02:14 PM May 20, 2021 | Team Udayavani |

ಧಾರವಾಡ: ಜಿಲ್ಲೆಯ ಗ್ರಾಮೀಣ ಭಾಗದ ಗ್ರಾಮಗಳಲ್ಲಿ ಕೋವಿಡ್‌ ಬರದಂತೆ ಹಾಗೂ ಬಂದಿರುವ ಕೋವಿಡ್‌ ಪ್ರಕರಣಗಳನ್ನು ವ್ಯವಸ್ಥಿತವಾಗಿ ನಿಭಾಯಿಸಿ ಕೋವಿಡ್‌ ಶೂನ್ಯ ಮಟ್ಟಕ್ಕೆ ತರಲು ಗ್ರಾಮಮಟ್ಟದ ಲಾಕ್‌ಡೌನ್‌, ಸೀಲ್‌ಡೌನ್‌, ಕಂಟೇನ್ಮೆಂಟ್‌ ಝೋನ್‌ ಮಾಡಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಡಿಸಿ ನಿತೇಶ ಪಾಟೀಲ ಹೇಳಿದರು.

Advertisement

ನಗರದಲ್ಲಿ ಬುಧವಾರ ಸಂಜೆ ಜಿಪಂ ಸಿಇಒ ಡಾ|ಬಿ.ಸುಶೀಲಾ ನೇತೃತ್ವದಲ್ಲಿ ಎಲ್ಲ ತಹಶೀಲ್ದಾರ್‌, ತಾಪಂ ಇಒ, ಪಿಡಿಒ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳೊಂದಿಗೆ ನಡೆಸಿದ ವೀಡಿಯೋ ಸಂವಾದದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಅವಳಿನಗರದಲ್ಲಿ ಸುಮಾರು 126 ಸ್ಥಳಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿ ಜನ ಹಾಗೂ ವಾಹನ ಸಂಚಾರ ನಿಯಂತ್ರಿಸಲಾಗಿದೆ. ಅದೇ ರೀತಿ ಗ್ರಾಮಗಳಲ್ಲಿ ಸೀಲ್‌ಡೌನ್‌, ಲಾಕ್‌ಡೌನ್‌ ಮಾಡಲು ಬ್ಯಾರಿಕೆಡಿಂಗ್‌ ಮಾಡಲು ಅಗತ್ಯವಿದ್ದಲ್ಲಿ ಎಸ್‌ಡಿಆರ್‌ಎಫ್‌ ನಿಧಿಯಲ್ಲಿ ಆರ್ಥಿಕ ನೆರವು ನೀಡಲಾಗುವುದು ಎಂದರು.

ಈಗಾಗಲೇ ಗ್ರಾಮ ಮಟ್ಟದಲ್ಲಿ ಕೋವಿಡ್‌ ಸೋಂಕಿತ ಮೃತರ ಶವಸಂಸ್ಕಾರವನ್ನು ಉಚಿತವಾಗಿ ಮಾಡಲು ಸೂಚಿಸಲಾಗಿದೆ. ಗ್ರಾಮಗಳ ವ್ಯಾಪ್ತಿಯಲ್ಲಿ ಕೋವಿಡ್‌ ನಿಯಂತ್ರಿಸಲು ಈಗಾಗಲೇ ಜಾರಿ ಇರುವ ನಿಯಮಗಳೊಂದಿಗೆ ಇನ್ನು ಕಠಿಣವಾದ ನಿರ್ಣಯಗಳನ್ನು ಕೈಗೊಳ್ಳಲು ಅಧಿ ಕಾರ ನೀಡುವ ಮತ್ತು ಕೋವಿಡ್‌ ಕಾರ್ಯಪಡೆಗಳು ಇನ್ನಷ್ಟು ಕ್ರಿಯಾಶೀಲವಾಗಿ ತೊಡಗಲು ಅನುವಾಗುವಂತೆ ನಿಯಮಗಳನ್ನು ಜಾರಿ ಮಾಡಿ, ಕೊರೊನಾ ಮುಕ್ತ ಗ್ರಾಮ ಅಭಿಯಾನ ಹಮ್ಮಿಕೊಳಲಾಗಿದೆ.

ಗ್ರಾಮಮಟ್ಟದ ಜನಪ್ರತಿನಿಧಿ ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರಿಗಳು ಈ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ಸೂಚಿಸಿದರು. ಗ್ರಾಪಂ ಮಟ್ಟದಲ್ಲಿ ಕೋವಿಡ್‌ ನಿಯಂತ್ರಿಸಲು ಗ್ರಾಮ ಪಂಚಾಯಿತಿಗಳು ಗ್ರಾಮಸಭೆ ಜರುಗಿಸಿ, ಠರಾವು ಪಾಸ್‌ ಮಾಡುವ ಮೂಲಕ ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ನಿರ್ಣಯಗಳನ್ನು ಜಾರಿ ಮಾಡಬಹುದು. ಗ್ರಾಮಮಟ್ಟದಲ್ಲಿ ಅಗತ್ಯವಿರುವ ಔಷ ಧ, ಆರೋಗ್ಯ ಸಿಬ್ಬಂದಿ, ಪೊಲೀಸ್‌ ನೆರವು, ಗ್ರಾಮಸ್ಥರಿಗೆ ಕೋವಿಡ್‌ ಕಾಳಜಿ ಕೇಂದ್ರ ಅಥವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಗತ್ಯವಿದ್ದಲ್ಲಿ ಜಿಪಂ ಸಹಕಾರದಲ್ಲಿ ಜಿಲ್ಲಾಡಳಿತ ಎಲ್ಲ ನೆರವು ನೀಡಲಿದೆ ಎಂದರು.

ಕೊರೊನಾ ಮುಕ್ತ ಗ್ರಾಮಗಳನ್ನು ರೂಪಿಸಲು ಆರಂಭಿಸಿರುವ ಅಭಿಯಾನವನ್ನು ಗ್ರಾಮದಲ್ಲಿರುವ ಪಂಚಾಯಿತಿ ಸದಸ್ಯರು, ಗ್ರಾಮಸ್ಥರ ಸಹಕಾರದಲ್ಲಿ ಯಶಸ್ವಿಗೊಳಿಸುವುದು ಕೋವಿಡ್‌ ಕಾರ್ಯಪಡೆ ಸದಸ್ಯರ ಜವಾಬ್ದಾರಿ. ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಗ್ರಾಪಂ ಮತ್ತು ಗ್ರಾಮಸ್ಥರ ಸಹಕಾರದಿಂದ ಗ್ರಾಮಗಳನ್ನು ಕೊರೊನಾದಿಂದ ಕಾಪಾಡಬೇಕಿದೆ ಎಂದರು. ಕೆಲ ಮದ್ಯದಂಗಡಿಗಳ ಮುಂದೆ ಜನಜಂಗುಳಿ ಸೇರುತ್ತಿರುವ ಕುರಿತು ದೂರುಗಳು ಬಂದಿದ್ದು, ಇಂತಹ ಘಟನೆಗಳ ಕುರಿತು ಫೋಟೋ ಅಥವಾ ವೀಡಿಯೋ ಸಮೇತ ದೂರು ನೀಡಿದರೆ ಲಿಕ್ಕರ್‌ ಅಂಗಡಿಯನ್ನು ಸೀಜ್‌ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Advertisement

ಜಿಪಂ ಸಿಇಒ ಡಾ| ಸುಶೀಲಾ ಮಾತನಾಡಿ, ಪಂಚಾಯಿತಿ ಸಿಬ್ಬಂದಿ ಪಂಚಾಯಿತಿ ಸದಸ್ಯರೊಂದಿಗೆ ಪ್ರತಿ ಓಣಿಗಳಿಗೆ ಸಂಚರಿಸಿ ಜನಜಾಗೃತಿ ಮೂಡಿಸುತ್ತಿದ್ದಾರೆ. ಗ್ರಾಮದಲ್ಲಿ ಉಚಿತವಾಗಿ ಮಾಸ್ಕ್, ಸ್ಯಾನಿಟೈಜರ್‌ ವಿತರಣೆ ಹಾಗೂ ಓಣಿಗಳಲ್ಲಿ ರೋಗ ನಿರೋಧಕ ದ್ರಾವಣ ಸಿಂಪಡಿಸಲಾಗುತ್ತಿದೆ. ಗ್ರಾಮ ಪಂಚಾಯಿತಿಗಳಲ್ಲಿ ಸಹಾಯವಾಣಿಗಳನ್ನು ಆರಂಭಿಸಿ, ಕೋವಿಡ್‌ ಚಿಕಿತ್ಸೆ ಹಾಗೂ ಅಗತ್ಯವಿರುವ ಮಾಹಿತಿ ನೀಡಲಾಗುತ್ತಿದೆ. ಸರ್ಕಾರದ ನಿರ್ದೇಶನದಂತೆ ನರೇಗಾ ಕಾಮಗಾರಿ ಆರಂಭಿಸಿ ಜನರಿಗೆ ಉದ್ಯೋಗ ನೀಡಲಾಗುತ್ತಿದೆ ಎಂದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ರುದ್ರೇಶ ಮಾತನಾಡಿ, ಕೊರೊನಾ ಮುಕ್ತ ಗ್ರಾಮ ಅಭಿಯಾನದಂತೆ ಜಿಲ್ಲೆಯ ಪಟ್ಟಣ-ನಗರ ಪ್ರದೇಶಗಳಲ್ಲಿ ಕೋವಿಡ್‌ ಮುಕ್ತ ವಾರ್ಡ್‌ ಮತ್ತು ಕೋವಿಡ್‌ ಮುಕ್ತ ನಗರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕುರಿತು ನಗರಸಭೆ ಹಾಗೂ ಪಪಂ ಮುಖ್ಯಾಧಿ ಕಾರಿಗಳು ಸ್ಥಳೀಯ ವಾರ್ಡ್‌ ಸದಸ್ಯರೊಂದಿಗೆ ಸಭೆ ಜರುಗಿಸಿ, ಠರಾವು ಪಾಸ್‌ ಮಾಡುತ್ತಾರೆ. ಅದರನ್ವಯ ನಗರ ಪ್ರದೇಶದ ಜನಪ್ರತಿನಿಧಿಗಳ, ವಾರ್ಡ್‌ ಸದಸ್ಯರ ಮತ್ತು ನಗರ ವಾಸಿಗಳ ಸಹಕಾರದಲ್ಲಿ ಕೋವಿಡ್‌ ಮುಕ್ತ ನಗರಗಳನ್ನಾಗಿ ರೂಪಿಸಲಾಗುವುದು ಎಂದರು. ಎಸಿ ಡಾ|ಗೋಪಾಲಕೃಷ್ಣ.ಬಿ, ಜಿಲ್ಲಾ ಆರೋಗ್ಯ ಅ ಧಿಕಾರಿ ಡಾ|ಯಶವಂತ ಮದಿನಕರ, ತಹಶೀಲ್ದಾರ್‌ರಾದ ಸಂತೋಷ ಬಿರಾದಾರ, ಅಮರೇಶ ಪಮ್ಮಾರ, ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ಅಶೋಕ ಶಿಗ್ಗಾಂವಿ, ಕೋಟ್ರೇಶ್‌ ಗಾಳಿ, ನವೀನ ಹುಲ್ಲೂರ ಸೇರಿದಂತೆ ವಿವಿಧ ತಾಲೂಕುಗಳ ಕಾರ್ಯ ನಿರ್ವಾಹಕ ಅ ಧಿಕಾರಿಗಳು, ನಗರಸಭೆ, ಪಪಂ ಮುಖ್ಯಾ ಧಿಕಾರಿಗಳು, ಪಿಡಿಒಗಳು, ಗ್ರಾಮ ಲೆಕ್ಕಾಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next