ಹಳ್ಳಿಯ ದೊಡ್ಡ ಮನೆಯಲ್ಲಿ ಹುಟ್ಟಿ ಬೆಳೆದ ಹುಡುಗಿಯೊಬ್ಬಳು ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬಂದಿದ್ದಾಳೆ. ಊರನ್ನು ಮಿಸ್ ಮಾಡಿಕೊಳ್ಳುತ್ತ ರಸ್ತೆಗಿಳಿದರೆ, ಎದುರಾಗುವ ದೃಶ್ಯಗಳೆಲ್ಲ ಹಳ್ಳಿಯ ನೆನಪು ಮರುಕಳಿಸುವಂತೆ ಮಾಡುತ್ತಿವೆ…
ನೂರಾರು ಕನಸುಗಳನ್ನು ಹೊತ್ತು ಎಲ್ಲೆಲ್ಲಿಂದಲೋ ಜನ ಬರ್ತಾರೆ. ಯಾರನ್ನೂ ಬಿಟ್ಟು ಕೊಡದೆ, ಬಂದವರಿಗೆಲ್ಲಾ ಕೆಲಸಾ ಕೊಟ್ಟು, ಅನ್ನ ನೀಡುತ್ತೆ ಈ ಬೆಂಗಳೂರು. ಹಳ್ಳಿ ಹುಡುಗಿಯಾದ ನಾನು ಈ ಮಾಯಾನಗರಿಗೆ ಮೊದಲ ಬಾರಿ ಬಂದಾಗ ನನಗೆ ಎಲ್ಲವೂ ಹೊಸತು. ಮೊದಲ ಬಾರಿಗೆ ಹತ್ತಿದ ಮೆಟ್ರೋ, ಸುತ್ತಿದ ಮಾಲ್, ದಾರಿಯಲ್ಲಿ ಸಿಗೋ ಬಟ್ಟೆ ಅಂಗಡಿ, ಫುಟ್‌ಪಾತ್‌ನಲ್ಲಿ ಮಾರೋ ಬಗೆಬಗೆಯ ತಿಂಡಿಗಳು.. ಇವೆಲ್ಲವೂ ನನ್ನ ಪುಟ್ಟ ಕಂಗಳಿಗೆ ದೊಡ್ಡದಾಗಿ ಕಂಡವು. ಶಿರಸಿಯ ನಟರಾಜ್ ಥಿಯೇಟರ್‌ನಲ್ಲಿ ನನ್ನಿಷ್ಟದ ಸಿನಿಮಾ ನೋಡೋವಾಗ ಎಷ್ಟು ಉತ್ಸಾಹವಿತ್ತೋ, ಅದರ ನಾಲ್ಕು ಪಟ್ಟು ಉತ್ಸಾಹ ,ಕುತೂಹಲವಿತ್ತು ಮಾಲ…ಗಳಲ್ಲಿ ಸಿನಿಮಾ ನೋಡುವಾಗ!
ರಸ್ತೆಯಲ್ಲಿ ನಡೆದು ಹೋಗುವಾಗ ಆಗಾಗ ಎದುರಾಗ್ತಿದ್ದ ದನಗಳನ್ನು ಕಂಡಾಗ, ನನ್ನ ಮನೆ ದನಗಳು ನೆನಪಾಗಿ ಬಿಡ್ತಿದ್ರು. ತಕ್ಷಣವೇ ಮನೆಗೆ ಫೋನ್ ಮಾಡಿ “ಸೌಮ್ಯಾ ,ಸುಂದ್ರಿ,ದುರ್ಗಿ ಏನ್ ಮಾಡ್ತಾ ಇವೆ?’ ಅಂತಾ ವಿಚಾರಿಸೋತನಕ ಮನಸ್ಸಿಗೆ ನೆಮ್ಮದಿ ಇರ್ತಿರ್ಲಿಲ್ಲ! ಅಯ್ಯೋ, ನಿನ್ನ ಮುದ್ದಿನ ದನಗಳು ಹುಲ್ಲು ತಿಂದು ಆರಾಮಾಗಿವೆ ಅಂತ ಅಮ್ಮ ಹೇಳಾªಗ್ಲೆ ಸಮಾಧಾನ.
ಪ್ರತಿದಿನ ಕೆಲಸಕ್ಕೆ ಹೊರಡುವಾಗ್ಲೂ ಅಪ್ಪ-ಅಮ್ಮ ಹೇಳಿದ ಮಾತುಗಳೇ ಕಿವಿಯಲ್ಲಿ ಗುನುಗುತ್ತಿರುತ್ತಿತ್ತು. “ಮಗಳೇ, ಪ್ರಾಮಾಣಿಕವಾಗಿ ಕೆಲಸ ಮಾಡು. ನಿನ್ನ ಪ್ರಾಮಾಣಿಕತೆಯೇ ನಿನ್ನನ್ನು ಯಶಸ್ಸಿನತ್ತ ಕರೆದೊಯ್ಯುತ್ತೆ’ ಅಂತ. ಆ ಮಾತು ನೆನಪಾದೂಡ್ಲೆ ಅಪ್ಪ-ಅಮ್ಮ, ತಮ್ಮನೊಂದಿಗೆ ಕಳೆದ ಕ್ಷಣಗಳು ನೆನಪಾಗಿ ಭಾವುಕಳಾಗ್ತಿದ್ದೆ. ಮೊದಮೊದಲು ಪಿ.ಜಿ.ಯ ಪುಟ್ಟ ರೂಂನಲ್ಲಿ ಹೇಗಪ್ಪಾ ಇರೋದು ಅಂತ ಅಂದುಕೊಳ್ತಿದ್ದೆ. ಹಳ್ಳಿಯ ವಿಶಾಲ ಮನೆಯಲ್ಲಿ ಬೆಳೊಳಿಗೆ ಇಷ್ಟು ಚಿಕ್ಕ ರೂಂನಲ್ಲಿ ಇರೋಕಾಗುತ್ತಾ? ಅಂತ ಅನ್ನಿಸ್ತಿತ್ತು. ಆದ್ರೆ ಈಗ ಈ ಚಿಕ್ಕ ರೂಂ ನನ್ನ ಪಾಲಿನ ಅರಮನೆಯಾಗಿದೆ.
ಮೊದಲಿನಿಂದಲೂ ಕನಸುಗಳ ಹೊದ್ದು ಬೆಲ್ಡೋಳು ನಾನು. ಹಾಗಾಗಿ ನನ್ನ ಹಳ್ಳಿಯ ಹೆಸರನ್ನು ಇಡೀ ಪ್ರಪಂಚವೇ ಗುರುತಿಸೋ ಹಾಗೆ ಮಾಡ್ಬೇಕು ಅನ್ನೊ ಹುಚ್ಚು ಕಲ್ಪನೆಯೊಂದು ಆಗಾಗ ಸುಳಿದು, ಬೆಂಗಳೂರಿನ ಜನಸಾಗರದ ಮಧ್ಯೆ ನಿನ್ನತನ ಉಳಿಸಿಕೋ, ನಿನ್ನ ಅಸ್ತಿತ್ವ ಉಳಿಸಿಕೋ ಅಂತ ಕೂಗಿ ಕೂಗಿ ಹೇಳಿ ಮಾಯವಾಗಿಬಿಡುತ್ತೆ! ನಾನ್ಯಾರು ಎನ್ನುವ ಪ್ರಶ್ನೆಗೆ ಪ್ರತಿದಿನದ ಘಟನೆಗಳು ಉತ್ತರ ನೀಡುತ್ತಾ ನನ್ನನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿವೆ!
ಮೇಘಾ ಹೆಗಡೆ ಕತ್ರಿಮನೆ