ಉಪ್ಪಿನಂಗಡಿ : ಹಳ್ಳಿ ಜನ ಜೀವನವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯಕ್ರಮನ್ನು ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯ ಹಮ್ಮಿಕೊಂಡಿತ್ತು. ‘ಹಳ್ಳಿ ಸೊಬಗು’ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಮಗೆ ದೊರೆತ ಸ್ತಳದಲ್ಲಿ ಹಳ್ಳಿಯ ಜೀವನವನ್ನು ಅನಾವರಣ ಮಾಡಿದರು. ಬಾವಿ, ಕೆರೆ, ಗದ್ದೆ, ಊರಿನ ಪಟೇಲನ ಮನೆ, ಹಳ್ಳಿ ಅಂಗಡಿ, ಬುಟ್ಟಿ- ತಟ್ಟಿ ಹೆಣೆ ಯುವ ಕಾಯಕ, ಮನೆಯಂಗಳದಲ್ಲಿ ಕೋಳಿ, ಉಳುಮೆಯ ಪರಿಕರ, ಭತ್ತ ಕುಟ್ಟುವ ಕಾಯಕ, ಹಳ್ಳಿ ಮೇಷ್ಟ್ರು , ಹಳ್ಳಿ ಆಟೋಟಗಳು, ಹಳ್ಳಿಯ ಮನೆಯಲ್ಲಿ ಸ್ವಾಗತದ ರೀತಿ- ನೀತಿಗಳು, ಹಳ್ಳಿ ಶೈಲಿಯ ಖಾದ್ಯಗಳು, ಹಳ್ಳಿ ಮನೆ, ತುಳಸೀ ಕಟ್ಟೆ, ಚೆನ್ನೆಮಣೆ ಆಟ, ನೇಜಿ ನೆಡುವ ಮತ್ತು ತೆನೆ ಕೊಯ್ಯುವ ಕಾಯಕ, ಓಲೆ ಬೆಲ್ಲ, ಪುಂಡಿ ಗಸಿ ಮೊದಲಾದ ವ್ಯವಸ್ಥೆಗಳೊಂದಿಗೆ ಪ್ರೇಕ್ಷಕರ ಮನಗೆದ್ದರು.
ಸ್ಪರ್ಧೆಯಿಂದ ಬಹಳಷ್ಟು ಕಲಿತೆವು
ಹಳ್ಳಿ ಸೊಬಗು ವಿಷಯದಲ್ಲಿ ಸ್ಪರ್ಧೆ ಏರ್ಪಡಿಸಿದಾಗ, ಸಾದರಪಡಿಸುವುದು ಹೇಗೆ ಎಂಬ ಪ್ರಶ್ನೆ ಮೂಡಿತು. ಆದರೆ, ಈ ಮೂಲಕ ಹಳ್ಳಿಯ ಬದುಕಿನ ಕುರಿತು ಸಾಕಷ್ಟು ಕಲಿಯಲು ಸಾಧ್ಯವಾಯಿತು ಎಂದು ವಿದ್ಯಾರ್ಥಿನಿ ರಾಜೇಶ್ವರಿ ಪ್ರತಿಕ್ರಿಯಿಸಿದರು. 1 ದಿನದ ಕಾಲಾವಕಾಶದಲ್ಲಿ ಹಳ್ಳಿ ಜೀವನವನ್ನು ಸಾಕ್ಷೀಕರಿ ಸಬೇಕಿತ್ತು. ಇಂದು ಬಳಕೆಯಲ್ಲಿ ಇಲ್ಲದ ವಸ್ತುಗಳನ್ನು ಕಂಡು ಅತೀವ ಸಂತಸವಾಯಿತು ಎಂದು ವಿದ್ಯಾರ್ಥಿ ಅಂಕುಶ್ ಅಭಿಪ್ರಾಯಿಸಿದರು.
ವಿದ್ಯಾರ್ಥಿಗಳು ಹಳ್ಳಿ ಜೀವನವನ್ನು ಅನಾವರಣಗೊಳಿಸಿದ್ದು ಬೆರಗು ಮೂಡಿಸಿತು ಎಂದು ಬಹುಮಾನ ವಿತರಿಸಿ ವಿದ್ಯಾಲಯದ ಸಂಚಾಲಕ ಯು.ಎಸ್.ಎ. ನಾಯಕ್ ಶ್ಲಾಘಿಸಿದರು. ಕಾಲೇಜಿನ ಪ್ರಾಂಶುಪಾಲ ರವೀಂದ್ರ ದರ್ಬೆ, ಶಿಕ್ಷಕರಾದ ವಿಗ್ನೇಶ್, ವಿಜೇತ್, ಚಲನಚಿತ್ರ ನಿರ್ಮಾಪಕ ಸಚಿನ್, ಎಂಜಿನಿಯರ್ ಸುಧಾಕರ ಶೆಟ್ಟಿ , ಡಾ| ರಮ್ಯಾ ರಾಜಾರಾಮ್ ಉಪಸ್ಥಿತರಿದ್ದರು.