ಕಿಚ್ಚ ಸುದೀಪ್ ನಟನೆಯ “ವಿಕ್ರಾಂತ್ ರೋಣ’ ಚಿತ್ರದ ಹವಾ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ 3ಡಿಯಲ್ಲೂ ಮೂಡಿ ಬರುತ್ತಿದ್ದು, ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ “ವಿಕ್ರಾಂತ್ ರೋಣ’ ಕೂಡಾ ಸೇರಿಕೊಂಡಿದೆ. ಚಿತ್ರ ಜುಲೈ 28ರಂದು ತೆರೆಕಾಣಲಿದೆ. ಈಗ ಚಿತ್ರತಂಡದಿಂದ ಸುದ್ದಿಯೊಂದು ಹೊರಬಿದ್ದಿದ್ದು, ಚಿತ್ರದ ಮೊದಲ ಹಾಡು ಬಿಡುಗಡೆಯಾಗಲಿದೆ. ಅದು ಜಾಕ್ವೆಲಿನ್ ಫರ್ನಾಂಡೀಸ್ ಕಾಣಿಸಿಕೊಂಡಿರುವ ಹಾಡು.
ಹೌದು, ಚಿತ್ರದ “ಗಡಂಗ್ ರಕ್ಕಮ್ಮ’ ಹಾಡಿನಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಸಖತ್ ಹಾಟ್ ಸ್ಟೆಪ್ ಹಾಕಿದ್ದು, ಆ ಹಾಡು ಲಿರಿಕಲ್ ವಿಡಿಯೋ ಮೂಲಕ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಇಂದು (ಮೇ 23) ಮಧ್ಯಾಹ್ನ 3.05 ನಿಮಿಷಕ್ಕೆ ಬಿಡುಗಡೆಯಾಗಲಿದ್ದು, ಆ ನಂತರ ಇತರ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಹಿಂದಿಯಲ್ಲಿ ಮೇ 24, ತೆಲುಗಿನಲ್ಲಿ ಮೇ 25, ತಮಿಳಿನಲ್ಲಿ ಮೇ 26 ಹಾಗೂ ಮಲಯಾಳಂನಲ್ಲಿ ಮೇ 27ಕ್ಕೆ ಬಿಡುಗಡೆಯಾಗಲಿದೆ. ಈ ಮೂಲಕ ಕಿಚ್ಚನ ಅಭಿಮಾನಿಗಳು ಖುಷಿಯಾಗಿದ್ದಾರೆ.
ಇನ್ನು, ಈ ಚಿತ್ರಕ್ಕೆ ಶಾಲಿನಿ ಜಾಕ್ ಮಂಜು ಹಾಗೂ ಅಲಂಕಾರ್ ಪಾಂಡಿಯನ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ, ಮಧುಸೂಧನ್ ರಾವ್ ಹೀಗೆ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ. ಅನೂಪ್ ಭಂಡಾರಿ ನಿರ್ದೇಶನ, ಬಿ. ಅಜನೀಶ್ ಲೋಕ್‌ನಾಥ್ ಸಂಗೀತ ಸಂಯೋಜನೆ, ವಿಲಿಯಂ ಡೇವಿಡ್ ಛಾಯಾಗ್ರಹಣ, ಆಶಿಕ್ ಕುಸುಗೊಳ್ಳಿ ಸಂಕಲನ ಚಿತ್ರಕ್ಕಿದೆ.
ಇದನ್ನೂ ಓದಿ:ಇನ್ನು ಕ್ವಾಲಿಫೈಯರ್, ಎಲಿಮಿನೇಟರ್ ಕಾತರ
ನಿರ್ದೇಶಕ ಅನೂಪ್ ಭಂಡಾರಿ ಪ್ರಕಾರ, “ವಿಕ್ರಾಂತ್ ರೋಣ’ದಲ್ಲಿ ನಟ ಸುದೀಪ್ ಅವರ ಸ್ಟಾರ್‌ಡಮ್ ಮತ್ತು ಅವರ ಪರ್ಫಾರ್ಮೆನ್ಸ್ ಎರಡರ ಸಮಾಗಮವಾಗಿದೆಯಂತೆ. “ಸುದೀಪ್ ಅವರಿಗೆ ದೇಶದಾದ್ಯಂತ ಅವರದ್ದೇ ಆದ ಫ್ಯಾನ್ಸ್ ಬಳಗವಿದೆ. ಇಲ್ಲಿಯವರೆಗೆ ಅವರು ಮಾಡಿರುವ ಸಿನಿಮಾಗಳಲ್ಲಿ ತಮ್ಮ ಪರ್ಫಾರ್ಮೆನ್ಸ್ ಏನು ಅನ್ನೋದನ್ನ ತೋರಿಸಿದ್ದಾರೆ. ಅವರಿಗೆ ಅವರದ್ದೇ ಆದ ಸ್ಟಾರ್‌ಡಮ್ ಇದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು “ವಿಕ್ರಾಂತ್ ರೋಣ’ ಸಿನಿಮಾ ಮಾಡಿದ್ದೇವೆ. ಇದರಲ್ಲಿ ಅವರ ಸ್ಟಾರ್ ಡಮ್ ಮತ್ತು ಪರ್ಫಾರ್ಮೆನ್ಸ್ ಎರಡಕ್ಕೂ ಸಾಕಷ್ಟು ಸ್ಪೇಸ್ ಇದೆ’ ಎನ್ನುವುದು ಅನೂಪ್ ಮಾತು.
“ಈ ಸಿನಿಮಾದ ಸಬ್ಜೆಕ್ಟ್ ಮತ್ತು ಸ್ಕ್ರಿಪ್ಟ್ ಎರಡೂ ಕೂಡ ಸುದೀಪ್ ಅವರಿಗಾಗಿಯೇ ಹೇಳಿ ಮಾಡಿಸಿದಂತೆ, ಸಹಜವಾಗಿ ಮೂಡಿಬಂದಿದೆ. ಸುದೀಪ್ ಅವರನ್ನು ಹೊರತುಪಡಿಸಿ ಬೇರೆ ಯಾರಿಗೂ ಮಾಡಲಾಗದು ಎನ್ನುವಷ್ಟರ ಮಟ್ಟಿಗೆ ಈ ಸಬ್ಜೆಕ್ಟ್ ಅವರಿಗೆ ಮ್ಯಾಚ್ ಆಗುತ್ತದೆ. ಸಿನಿಮಾದಲ್ಲಿ ಯಾವುದನ್ನೂ ಅತಿಯಾಗಿ ಸೇರಿಸಲು ಹೋಗಿಲ್ಲ. ಎಲ್ಲವೂ ಆರ್ಗಾನಿಕ್ ಆಗಿದೆ’ ಎನ್ನುತ್ತಾರೆ ಅನೂಪ್.