ಅದೊಂದು ನಿಗೂಢ ಊರು, ಕ್ಷಣ ಕ್ಷಣಕ್ಕೂ ಅಲ್ಲಿ ನಡೆಯುವ ವಿಚಿತ್ರ ಘಟನೆಗಳು… ಕುತೂಹಲದ ಕಣಜವನ್ನೇ ತನ್ನೊಳಗೆ ಅವಿತಿಟ್ಟುಕೊಂಡಿರುವ ಆ ಊರಿಗೆ ಎಂಟ್ರಿಕೊಡುವ ಒಬ್ಬ ಗಟ್ಟಿಗ… ಅಲ್ಲಿಂದ ಅಸಲಿ ಆಟ ಶುರು… ಒಂದು ಥ್ರಿಲ್ಲರ್ ಸಿನಿಮಾ ಪ್ರೇಕ್ಷಕನ ಕುತೂಹಲ ಹೆಚ್ಚಿಸುತ್ತಾ, ಸೀಟಿನಂಚಿಗೆ ತರಲು ಏನೇನು ಅಂಶಗಳು ಬೇಕೋ, ಆ ಎಲ್ಲಾ ಅಂಶಗಳನ್ನು ಹೊತ್ತುತಂದಿರುವ ಚಿತ್ರ “ವಿಕ್ರಾಂತ್ ರೋಣ’.
“ವಿಕ್ರಾಂತ್ ರೋಣ’ ಸಿನಿಮಾದೊಳಗೆ ಏನಿದೆ ಎಂದು ಕೇಳಿದರೆ, ಮೈ ಜುಮ್ಮೆನ್ನಿಸುವ ಒಂದು ಹೊಸ ಲೋಕವಿದೆ, ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸಿಕೊಂಡು ಹೋಗುವ ಘಟನೆಗಳಿವೆ, ಆ ಘಟನೆಗಳ ಹಿಂದೆ ಬೀಳುವ ಒಬ್ಬ ಖಡಕ್ ವ್ಯಕ್ತಿ ಇದ್ದಾನೆ, ಇದರ ನಡುವೆಯೇ ರಿಲ್ಯಾಕ್ಸ್ ಮೂಡ್‌ಗಾಗಿ “ಗಡಂಗ್ ರಕ್ಕಮ್ಮ’ ಇದ್ದಾಳೆ.. ಹೀಗೆ ಒಂದು ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಬೇಕಾದ ಎಲ್ಲಾ ಅಂಶಗಳನ್ನು ನಿರ್ದೇಶಕ ಅನೂಪ್ ಭಂಡಾರಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ಮುಖ್ಯವಾಗಿ ಈ ಸಿನಿಮಾ ಇಷ್ಟವಾಗಲು ಪ್ರಮುಖ ಕಾರಣ ಚಿತ್ರದ ಪರಿಸರ, ವಾತಾವರಣ… ಇಡೀ ಸಿನಿಮಾ ಒಂದು ನಿಗೂಢವಾದ ಕಾಡು ಹಾಗೂ ಅಲ್ಲಿನ ಒಂದೆರಡು ಮನೆಗಳ ಸುತ್ತವೇ ಸಾಗುತ್ತದೆ. ಈ ಪರಿಸರವನ್ನು ಕಥೆಗೆ ಪೂರಕವಾಗುವಂತೆ ಸೃಷ್ಟಿಸಲಾಗಿದೆ ಮತ್ತು ಪ್ರೇಕ್ಷಕರಿಗೆ ಹೊಸ ಫೀಲ್ ಕೊಡುತ್ತದೆ ಕೂಡಾ. ಆ ಮಟ್ಟಿಗೆ ಒಂದು ಅದ್ಭುತವಾದ ಜಗತ್ತನೇ ಇಲ್ಲಿ ಸೃಷ್ಟಿಸಲಾಗಿದೆ. ಆ ಮಟ್ಟಿಗೆ ನಿರ್ದೇಶಕ ಅನೂಪ್ ಸಾಕಷ್ಟು ಪೂರ್ವ ತಯಾರಿ ಮಾಡಿದ್ದು, ಚಿತ್ರದಲ್ಲಿನ ಸೂಕ್ಷ್ಮ ಅಂಶಗಳ ಮೇಲೂ ಗಮನ ಹರಿಸಲಾಗಿದೆ.
ಇದು ಥ್ರಿಲ್ಲರ್ ಚಿತ್ರವಾದರೂ ಅಲ್ಲಲ್ಲಿ ಸೆಂಟಿಮೆಂಟ್ ಅಂಶಗಳನ್ನು ಕೂಡಾ ಸೇರಿಸಿ, ಫ್ಯಾಮಿಲಿ ಟಚ್ ನೀಡಿದ್ದಾರೆ. ಪ್ರೇಕ್ಷಕರ ಕುತೂಹಲವನ್ನು ಕ್ಷಣ ಕ್ಷಣವೂ ಹೆಚ್ಚಿಸಬೇಕು ಎಂಬ ಪರಮ ಉದ್ದೇಶ ನಿರ್ದೇಶಕರದ್ದು. ಹಾಗಾಗಿ, ಅದಕ್ಕೆ ಏನೇನು ಟ್ವಿಸ್ಟ್-ಟರ್ನ್ಗಳು ಬೇಕೋ, ಅವೆಲ್ಲವನ್ನು ಇಲ್ಲಿ ಕೊಟ್ಟಿದ್ದಾರೆ. ಅದೇ ಕಾರಣದಿಂದ “ವಿಕ್ರಾಂತ್ ರೋಣ’ನ ಫ್ಯಾಂಟಸಿ ಲೋಕ ಥ್ರಿಲ್ಲಿಂಗ್ ಅನುಭವ ನೀಡುತ್ತದೆ. ಈ ಥ್ರಿಲ್‌ಗೆ ಚಿತ್ರದ 3ಡಿ ಮತ್ತಷ್ಟು ಸಾಥ್ ನೀಡುತ್ತದೆ.
Related Articles
ಇದನ್ನೂ ಓದಿ:ಏಕದಿನದ ಬಳಿಕ ಟಿ20 ಕದನ: ಇಂದಿನಿಂದ 5 ಪಂದ್ಯಗಳ ಸರಣಿ
ಸುದೀಪ್ ಅವರ ಕೆರಿಯರ್‌ನಲ್ಲಿ “ವಿಕ್ರಾಂತ್ ರೋಣ’ ಹೊಸ ಜಾನರ್ ಸಿನಿಮಾ. ಮಾಸ್‌ಗಿಂತ ಇಲ್ಲಿ ಕ್ಲಾಸ್ ಅಂಶಗಳಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಚಿತ್ರದಲ್ಲಿ ಹಾಡು, ಫೈಟ್ ಎಲ್ಲವೂ ಇದೆ. ಅವೆಲ್ಲವೂ “ಸಿದ್ಧಸೂತ್ರ’ಗಳಿಂದ ಮುಕ್ತವಾಗಿದೆ. ಈ ಸಿನಿಮಾದ ಮತ್ತೂಂದು ಹೈಲೈಟ್ ಎಂದರೆ ಅದು ಚಿತ್ರದ ರೀರೆಕಾರ್ಡಿಂಗ್. ಚಿತ್ರದ ಕಥೆ, ಪರಿಸರವನ್ನು ಪ್ರೇಕ್ಷಕರಿಗೆ ಮತ್ತಷ್ಟು ಆಪ್ತವಾಗಿಸುವಲ್ಲಿ ಚಿತ್ರದ ಹಿನ್ನೆಲೆ ಸಂಗೀತ ಪ್ರಮುಖ ಪಾತ್ರ ವಹಿಸಿದೆ. ಜೊತೆಗೆ ಚಿತ್ರದ ಛಾಯಾಗ್ರಹಣ “ರೋಣ’ನಿಗೆ ಪ್ಲಸ್.
ಮೊದಲೇ ಹೇಳಿದಂತೆ ನಟ ಸುದೀಪ್ ಅವರಿಗೂ “ವಿಕ್ರಾಂತ್ ರೋಣ’ ಪಾತ್ರ, ಜಾನರ್ ಹೊಸದು. ಆದರೆ, ಇಡೀ ಕಥೆಯನ್ನು ಮುನ್ನಡೆಸುವಲ್ಲಿ ಸುದೀಪ್ ಯಶಸ್ವಿಯಾಗಿದ್ದಾರೆ. ತಮ್ಮ ಮ್ಯಾನರಿಸಂ, ಡೈಲಾಗ್ ಡೆಲಿವರಿ ಶೈಲಿ… ಎಲ್ಲವೂ ಇಲ್ಲಿ ಭಿನ್ನವಾಗಿದೆ. ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿರುವ ನಿರೂಪ್ ಭಂಡಾರಿ ಈ ಸಿನಿಮಾದ ಮತ್ತೂಂದು ಅಚ್ಚರಿ. ಉಳಿದಂತೆ ನೀತಾ ಅಶೋಕ್, ರವಿಶಂಕರ್ ಸೇರಿದಂತೆ ಇತರರು ತಮ್ಮ ಪಾತ್ರಗಳಲ್ಲಿ ಮಿಂಚಿದ್ದಾರೆ. ಥ್ರಿಲ್ಲರ್ ಸಿನಿಮಾವನ್ನು ಕುಟುಂಬ ಸಮೇತ ಕಣ್ತುಂಬಿಕೊಳ್ಳಬೇಕೆಂದುಕೊಂಡವರು ವಿಕ್ರಾಂತ್ ರೋಣನ ಬಾಗಿಲು ಬಡಿಯಬಹುದು.
ರವಿಪ್ರಕಾಶ್ ರೈ