Advertisement

ISRO: ವಿಕ್ರಮ್‌, ಪ್ರಜ್ಞಾನ್‌ ಎದ್ದೇಳದಿದ್ದರೆ?

10:22 PM Sep 23, 2023 | Team Udayavani |

ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸೂರ್ಯೋದಯವಾಗಿದ್ದರೂ, ಇನ್ನೂ ವಿಕ್ರಮ್‌ ಲ್ಯಾಂಡರ್‌ ಮತ್ತು ಪ್ರಜ್ಞಾನ್‌ ರೋವರ್‌ ಸುಷುಪ್ತ ಸ್ಥಿತಿಯಿಂದ ಮೇಲೆದ್ದಿಲ್ಲ. ಅವುಗಳೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಇಸ್ರೋ ಪ್ರಯತ್ನ ನಡೆಸುತ್ತಿದೆ. ಒಂದು ವೇಳೆ, ಇವೆರಡೂ ಎಚ್ಚರವಾಗದೇ ಇದ್ದರೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

Advertisement

ಇನ್ನೂ ಸಿಗದ ಸಂಪರ್ಕ
ಸೆ.2ರಂದೇ ಲ್ಯಾಂಡರ್‌ ಮತ್ತು ರೋವರ್‌ ನಿದ್ರಾಸ್ಥಿತಿಗೆ ಜಾರಿವೆ. ಸೆ.22ರಂದು ಸೂರ್ಯೋದಯ ಆಗುತ್ತಿದ್ದಂತೆ, ಇವುಗಳಲ್ಲಿರುವ ಸೌರ ಫ‌ಲಕಗಳು ಬೆಳಕನ್ನು ಹೀರಿಕೊಂಡು ಮತ್ತೆ ಸಕ್ರಿಯಗೊಳ್ಳಬಹುದು ಎಂಬ ನಿರೀಕ್ಷೆ ಇಸ್ರೋ ವಿಜ್ಞಾನಿಗಳದ್ದು. ಹೀಗಾಗಿ, ಅವುಗಳೊಂದಿಗೆ ಸಂಪರ್ಕ ಬೆಳೆಸುವ ಎಲ್ಲ ಪ್ರಯತ್ನಗಳನ್ನೂ ಇಸ್ರೋ ಮಾಡುತ್ತಿದೆ. ಆದರೆ, ಇನ್ನೂ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ಒಂದು ವೇಳೆ, ವಿಕ್ರಮ್‌ ಮತ್ತು ಪ್ರಜ್ಞಾನ್‌ ಎಚ್ಚರಗೊಳ್ಳದೇ ಇದ್ದರೆ, ಚಂದ್ರನಲ್ಲೇ “ಭಾರತದ ಶಾಶ್ವತ ರಾಯಭಾರಿ”ಗಳಾಗಿ ಉಳಿಯಲಿವೆ.

ಆಶಾಭಾವ ಏಕೆ?
2019ರಲ್ಲಿ ಚಂದ್ರನಲ್ಲಿನ ಸೂರ್ಯಾಸ್ತದ ವೇಳೆ ಸುಷುಪ್ತ ಸ್ಥಿತಿಗೆ ಹೋಗಿದ್ದ ಚೀನಾದ ಚೇಂಜ್‌-4 ಲ್ಯಾಂಡರ್‌ ಮತ್ತು ಯುಟು-2 ರೋವರ್‌ 14 ದಿನಗಳ ಬಳಿಕ ಸೂರ್ಯೋದಯವಾಗುತ್ತಿದ್ದಂತೆ, ಮತ್ತೆ ಪುನಶ್ಚೇತನಗೊಂಡು ಕಾರ್ಯಾರಂಭಿಸಿದ್ದವು. ಹೀಗಾಗಿ, ಭಾರತದ ವಿಕ್ರಮ್‌ ಮತ್ತು ಪ್ರಜ್ಞಾನ್‌ ಕೂಡ ಎಚ್ಚರಗೊಳ್ಳಲಿದೆ ಎಂಬ ಆಶಾಭಾವ ವಿಜ್ಞಾನಿಗಳದ್ದು.

ಎಚ್ಚೆತ್ತರೆ ಏನಾಗುತ್ತದೆ?
ವಿಕ್ರಮ್‌ ಮತ್ತು ಪ್ರಜ್ಞಾನ್‌ ಅನ್ನು ಕೇವಲ 14 ದಿನಗಳ ಕಾರ್ಯಾಚರಣೆಗೆಂದು ವಿನ್ಯಾಸಪಡಿಸಲಾಗಿದೆ. ಈಗಾಗಲೇ ಇವುಗಳು 14 ದಿನಗಳ ಕಾಲ ತಮ್ಮ ಕೆಲಸವನ್ನು ಪೂರ್ಣಗೊಳಿಸಿ, ದತ್ತಾಂಶಗಳನ್ನು ಸಂಗ್ರಹಿಸಿ ಭೂಮಿಗೆ ಕಳುಹಿಸಿವೆ. ಸದ್ಯ ನಿದ್ರಾಸ್ಥಿತಿಯಲ್ಲಿರುವ ಇವುಗಳು ಒಂದು ವೇಳೆ ಎಚ್ಚೆತ್ತುಕೊಂಡರೆ, ಚಂದಿರನ ಮತ್ತಷ್ಟು ರಾತ್ರಿಗಳನ್ನು ತಾಳಿಕೊಳ್ಳುವ ಸಾಮರ್ಥ್ಯ ಇವುಗಳಿಗಿವೆ ಎಂದರ್ಥ. ಇದು ಸಾಧ್ಯವಾದರೆ, ಲ್ಯಾಂಡರ್‌ ಮತ್ತು ರೋವರ್‌ ಸುಮಾರು 6 ತಿಂಗಳಿಂದ 1 ವರ್ಷ ಕಾಲ ಕೆಲಸ ಮಾಡಬಹುದು.

ಚಂದ್ರ, ಮಂಗಳನಲ್ಲಿ ವಾಸಿಸುವಂತಾಗಬೇಕು
ಮನುಷ್ಯರು ಭೂಮಿಯಾಚೆಗೆ ಪ್ರಯಾಣ ಬೆಳೆಸಬೇಕೆಂದರೆ, ಚಂದ್ರ, ಮಂಗಳ ಮತ್ತು ಇತರೆ ಬಾಹ್ಯ ಗ್ರಹಗಳನ್ನು ವಾಸಯೋಗ್ಯ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲಿ ಭಾರತೀಯರು ಇರಬೇಕು ಎನ್ನುವುದೇ ನಮ್ಮ ಉದ್ದೇಶ ಎಂದು ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಹೇಳಿದ್ದಾರೆ. ಚಂದ್ರಯಾನ-3ರ ಕುರಿತು ಶನಿವಾರ ಎನ್‌ಡಿಟಿವಿ ಜತೆ ಮಾತನಾಡಿದ ಸೋಮನಾಥ್‌ ಅವರು, ಅಮೆರಿಕ, ಯುಎಸ್‌ಎಸ್‌ಆರ್‌ನಂಥ ದೇಶಗಳು ವಿಶ್ವಶಕ್ತಿಯಾಗುವ ಕನಸು ಕಾಣುತ್ತವೆ. ನಾನೂ ಭಾರತವನ್ನು ವಿಶ್ವಶಕ್ತಿಯನ್ನಾಗಲು ಬಯಸುತ್ತೇನೆ. ಆದರೆ, ನಾನು ಬಯಸುವುದು ಸೇನಾ ಶಕ್ತಿ, ಇತರೆ ದೇಶವನ್ನು ವಶಪಡಿಸಿಕೊಳ್ಳುವಂಥ ಶಕ್ತಿಯನ್ನಲ್ಲ. ಭಾರತವು ಭವಿಷ್ಯದಲ್ಲಿ ತಂತ್ರಜ್ಞಾನದ ನಾಯಕನಾಗಬೇಕು ಎಂದು ನಾನು ಇಚ್ಛಿಸುತ್ತೇನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next