Advertisement

Karnataka: ವಿಕ್ರಂ ಸಿಂಹ, ಕರಸೇವಕರ ಬಂಧನ ಸೇಡಿನ ರಾಜಕಾರಣ- ಜೆಡಿಎಸ್‌ ನಾಯಕರ ಆಕ್ರೋಶ

11:56 PM Jan 05, 2024 | Team Udayavani |

ಬೆಂಗಳೂರು: ಹುಬ್ಬಳ್ಳಿಯಲ್ಲಿ ಕರಸೇವಕನ ಬಂಧನ ಹಾಗೂ ಸಂಸದ ಪ್ರತಾಪಸಿಂಹ ಅವರ ಸಹೋದರ ವಿಕ್ರ ಸಿಂಹ ಪ್ರಕರಣದಲ್ಲಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ದಳಪತಿಗಳು (ಜೆಡಿಎಸ್‌) ಸಿದ್ದರಾಮಯ್ಯ ಸರಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಈ ಎರಡೂ ಪ್ರಕರಣಗಳು ಸೇಡಿನ ರಾಜಕಾರಣ ಭಾಗವಾಗಿದೆ ಎಂದು ಕಿಡಿ ಕಾರಿದ್ದಾರೆ. ಶುಕ್ರವಾರ ಜೆಡಿಎಸ್‌ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯವೈಖರಿ ವಿರುದ್ಧ ಗುಡುಗಿದರು. ಆಡಳಿತ ದುರ್ಬಳಕೆ ಮಾಡಿಕೊಂಡು ವಿಪಕ್ಷಗಳನ್ನು ತುಳಿಯಲು ಹೊರಟಿದ್ದಾರೆ ಎಂದು ಟೀಕಿಸಿದರು.

Advertisement

ಕರಸೇವಕರ ಮೇಲೆ ದಬ್ಟಾಳಿಕೆ
ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಬಗ್ಗೆ ದೇಶದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಇಲ್ಲಿ ಕಾಂಗ್ರೆಸ್‌ ಸರಕಾರ ಶ್ರೀಕಾಂತ್‌ ಪೂಜಾರಿ ಪ್ರಕರಣವನ್ನು ದೊಡ್ಡದು ಮಾಡಿದೆ. ಅವರ ಬಹುತೇಕ ಎಲ್ಲ ಪ್ರಕರಣಗಳು ಖುಲಾಸೆ ಆಗಿವೆ. ಆದರೆ ಬಾಕಿ ಇದ್ದ ಒಂದು ಹಳೆ ಕೇಸ್‌ ಅನ್ನು ಮತ್ತೆ ಮುನ್ನೆಲೆಗೆ ತಂದಿದೆ. ಕರಸೇವಕರ ಮೇಲಿನ ದೌರ್ಜನ್ಯ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಕ್ರಂ ಸಿಂಹ ಪ್ರಕರಣದಲ್ಲಿ ಸಿಎಂ ಕೈವಾಡ
ಹಾಸನದ ವಿಕ್ರಂ ಸಿಂಹ ಪ್ರಕರಣದಲ್ಲಿ ಸಿಎಂ ಅವರ ನೇರ ಕೈವಾಡವಿದೆ. ಸಂಸದ ಪ್ರತಾಪಸಿಂಹ ಅವರ ಬಾಯಿ ಮುಚ್ಚಿಸಲು ಗೆಂಡೆಕೆರೆ ಅರಣ್ಯ ಪ್ರದೇಶದಿಂದ ಬೀಟೆ ಮರ ತಂದು ಸುಳ್ಳು ಕೇಸ್‌ ಹಾಕಿ ವಿಕ್ರಂ ಸಿಂಹ ಅವರನ್ನು ಜೈಲಿಗೆ ಹೋಗುವಂತೆ ಮಾಡಲಾಯಿತು. ಸಿದ್ದರಾಮಯ್ಯ ಅವರು ವಕೀಲರಾಗಿರುವ ಹಿನ್ನೆಲೆಯಲ್ಲಿ ಅವರೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕುತಂತ್ರ ಸಲಹೆ ಕೊಟ್ಟಿದ್ದಾರೆ. ಡಿಎಫ್ಒ ಜತೆಗೆ ಮುಖ್ಯಮಂತ್ರಿಗಳು ದೂರವಾಣಿಯಲ್ಲಿ ಮಾತನಾಡಿದ್ದು, ಕಾಲ್‌ ರೆಕಾರ್ಡ್‌ ತೆಗೆದರೆ ಅದೆಲ್ಲವೂ ಗೊತ್ತಾಗಲಿವೆ ಎಂದರು. ಶಾಸಕ ಜಿ.ಟಿ.ದೇವೇಗೌಡ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್‌, ಪರಿಷತ್‌ ಸದಸ್ಯ ಟಿ.ಎ.ಶರವಣ ಸೇರಿ ಮತ್ತಿತರರು ಇದ್ದರು.

ನಾನೆಂದೂ ಸೇಡಿನ ರಾಜಕಾರಣ ಮಾಡಿಲ್ಲ: ದೇವೇಗೌಡ
ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮಾತನಾಡಿ, ನಾನು ಸಿಎಂ ಆಗಿದ್ದಾಗಲೇ ಹುಬ್ಬಳ್ಳಿಯ ಈದ್ಗಾ ಮೈದಾನ ಘಟನೆ ನಡೆದಿತ್ತು. ನಾನು ಎಲ್ಲ ಸಮುದಾಯದವರ ಹಿತಕಾಯುವ ಕೆಲಸ ಮಾಡಿದ್ದೆ. ಎಂದೂ ಸೇಡಿನ ರಾಜಕಾರಣ ಮಾಡಲಿಲ್ಲ. ಆದರೆ ಈಗಿನ ಸರಕಾರ ವಿಪಕ್ಷಗಳ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದ್ದು, ಅದು ಯಾವತ್ತೂ ಒಳ್ಳೆಯದಲ್ಲ ಎಂದರು.

ದೇವೇಗೌಡರ ನಿವಾಸಕ್ಕೆ ಸೋಮಣ್ಣ ಭೇಟಿ
ಬೆಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ನಿವಾಸ ಶುಕ್ರವಾರ ಕುತೂಹಲಕರ ರಾಜಕೀಯ ವಿದ್ಯಮಾನಕ್ಕೆ ಸಾಕ್ಷಿಯಾಯಿತು. ಮೈಸೂರಿನ ವರುಣಾ ಮತ್ತು ಚಾಮರಾಜನಗರ ವಿಧಾನ ಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸೋಲುಂಡ ಬಳಿಕ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಪದೇಪದೆ ಆಕ್ರೋಶ ಹೊರ ಹಾಕುತ್ತಿದ್ದ ಮಾಜಿ ಸಚಿವ ವಿ.ಸೋಮಣ್ಣ ಅವರು ದಿಢೀರ್‌ ಪದ್ಮನಾಭ ನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ತೆರಳಿ ಸಮಾಲೋಚಿಸಿದ್ದಾರೆ. ಈ ಭೇಟಿ ವೇಳೆ ಜೆಡಿಎಸ್‌ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಎಚ್‌.ಡಿ.ಕುಮಾರ ಸ್ವಾಮಿ ಕೂಡ ಇದ್ದರು.

Advertisement

ಜೆಡಿಎಸ್‌ ಈಗಾಗಲೇ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸೇರಿದ್ದು, ಈ ಮೈತ್ರಿ ಬಳಿಕ ಇದೇ ಮೊದಲ ಬಾರಿಗೆ ಸೋಮಣ್ಣ ಅವರು ದಳಪತಿಗಳನ್ನು ಭೇಟಿ ಮಾಡಿದ್ದು ರಾಜ್ಯ ರಾಜಕೀಯ ವಲಯದಲ್ಲಿ ಹಲವು ರೀತಿಯ ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿ ವರಿಷ್ಠರ ವಿರುದ್ಧ ಮುನಿಸಿಕೊಂಡಿರುವ ಸೋಮಣ್ಣ ಅವರಿಗೆ ಬಿಜೆಪಿ ವರಿಷ್ಠರು ದಿಲ್ಲಿಗೆ ಬರುವಂತೆ ಸೂಚನೆ ನೀಡಿದ್ದು, ಈ ಬೆಳವಣಿಗೆ ಮಧ್ಯೆ ನಡೆದಿರುವ ಭೇಟಿ ಕೌತುಕ ಹುಟ್ಟಿಹಾಕಿದೆ. ಈ ಹಿಂದೆ ಸೋಮಣ್ಣ ಅವರು ಬಿಜೆಪಿಗೆ ಗುಡ್‌ಬೈ ಹೇಳಿ ಕಾಂಗ್ರೆಸ್‌ ಪಕ್ಷ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಇತ್ತೀಚೆಗಷ್ಟೇ ಸೋಮಣ್ಣ ತಾವು ಬಿಜೆಪಿಯಲ್ಲೇ ಇರುತ್ತೇನೆಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next