ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಇಳಿಯಬೇಕಿದ್ದ ಇಸ್ರೋ ಉಡಾಯಿಸಿದ ಚಂದ್ರಯಾನ-2ರ ವಿಕ್ರಂ ಲ್ಯಾಂಡರ್ ಅಂತಿಮ ಹಂತದಲ್ಲಿ ನಿಯಂತ್ರಣ ಕಳೆದುಕೊಂಡಿತ್ತು.
ಬಳಿಕ ಆದಿತ್ಯವಾರದಂದು ವಿಕ್ರಂ ಚಂದ್ರನ ಅಂಗಳದಲ್ಲೇ ಇರುವುದನ್ನು ಕಕ್ಷೆಯಲ್ಲಿ ಸುತ್ತುತ್ತಿರುವ ಆರ್ಬಿಟರ್ ಪತ್ತೆಹಚ್ಚಿ ಅದರ ಥರ್ಮಲ್ ಇಮೇಜ್ ಅನ್ನು ನಿಯಂತ್ರಣ ಕೇಂದ್ರಕ್ಕೆ ಕಳುಹಿಸಿತ್ತು.
ಇದೀಗ ಆ ಮಾಹಿತಿಗಳನ್ನು ಪರಿಶೀಲಿಸಿರುವ ಇಸ್ರೋ ವಿಜ್ಞಾನಿಗಳು ವಿಕ್ರಂ ಲ್ಯಾಂಡರ್ ಕ್ರ್ಯಾಷ್ ಲ್ಯಾಂಡ್ ಆಗಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ.
‘ಆರ್ಬಿಟರ್ ನಲ್ಲಿರುವ ಕೆಮರಾ ನಮಗೆ ಕಳುಹಿಸಿರುವ ಚಿತ್ರಗಳನ್ನು ಪರಿಶೀಲಿಸಿದಾಗ ನಾವು ನೌಕೆಯನ್ನು ಇಳಿಸಲು ಯೋಜಿಸಿದ್ದ ಜಾಗದಲ್ಲಿಯೇ ವಿಕ್ರಂ ‘ಹಾರ್ಡ್ ಲ್ಯಾಂಡಿಂಗ್’ ಆಗಿದೆ. ಮತ್ತು ಈ ರೀತಿಯಾಗಿ ಹಾರ್ಡ್ ಲ್ಯಾಂಡಿಂಗ್ ಆಗುವ ಸಂದರ್ಭದಲ್ಲಿ ಲ್ಯಾಂಡರ್ ನ ಸಂರಚನೆಗೆ ಯಾವುದೇ ಹಾನಿಯಾಗಿಲ್ಲ ಅಥವಾ ಅದು ಚೂರಾಗಿಲ್ಲ’ ಎಂದು ಈ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ಇಸ್ರೋ ವಿಜ್ಞಾನಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
‘ವಿಕ್ರಂ ನೌಕೆಯೊಂದಿಗೆ ಸಂವಹನ ಸಾಧಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ನಾವು ಮಾಡುತ್ತಿದ್ದೇವೆ’ ಎಂದೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಚಂದ್ರನ ನೆಲದ ಮೇಲೆ ವಿಕ್ರಂ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಗಳ ಸಕ್ರಿಯ ಕಾರ್ಯಾಚರಣೆ ಅವಧಿ ಭೂಮಿಯ ಕಾಲಮಾನದಲ್ಲಿ 14 ದಿನಗಳಾಗಿರುತ್ತವೆ.
ಚಂದ್ರನಲ್ಲಿ ವಿಕ್ರಂ ಇಳಿದು ಈಗಾಗಲೇ 2 ದಿನಗಳು ಕಳೆದಿರುವುದರಿಂದ ಈ ನೌಕೆಯೊಂದಿಗೆ ಸಂಪರ್ಕ ಸಾಧಿಸಲು ವಿಜ್ಞಾನಿಗಳಿಗೆ ಉಳಿದಿರುವುದು ಇನ್ನು ಕೇವಲ 12 ದಿನಗಳಷ್ಟೇ.