Advertisement

ಚಂದ್ರಯಾನ ಲ್ಯಾಂಡರ್‌ಗೆ ವಿಕ್ರಂ ಹೆಸರು

12:40 PM Aug 13, 2018 | Team Udayavani |

ಬೆಂಗಳೂರು: ಬಹುನಿರೀಕ್ಷಿತ “ಚಂದ್ರಯಾನ-2′ ಉಪಗ್ರಹ ಉಡಾವಣೆಗೆ ಮುಹೂರ್ತ ನಿಗದಿಯಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2019ರ ಜನವರಿ-ಮಾರ್ಚ್‌ ಅವಧಿಯಲ್ಲಿ ಉಡಾವಣೆ ಮಾಡಲು ನಿರ್ಧರಿಸಿದೆ.  

Advertisement

ಜನವರಿ 3ರಂದು “ಚಂದ್ರಯಾನ’ ಉಡಾವಣೆ ಗುರಿ ಇದೆ. ಇದರಲ್ಲಿ ಸ್ವಲ್ಪ ವ್ಯತ್ಯಾಸವಾದರೆ, ಮಾರ್ಚ್‌ವರೆಗಿನ ಯಾವುದೇ ಅವಧಿಯಲ್ಲಿ ನೂತನ ಉಪಗ್ರಹ ನಭಕ್ಕೆ ಹಾರಲಿದೆ. ಇದರ ತೂಕ 500ರಿಂದ 600 ಕೆಜಿ ಇರಲಿದ್ದು, ಭೂಕಕ್ಷೆಯ ಒಳ ಆವರಣಕ್ಕೆ ಉಡಾವಣೆ ಮಾಡಿ, ಉಪಗ್ರಹಗಳನ್ನು ನೆಲೆಗೊಳಿಸಬಹುದು. ಹೊಸ ತಲೆಮಾರಿನ ಉಡಾವಣಾ ವಾಹನ ಇದಾಗಿದ್ದು, ವಿನ್ಯಾಸ ರೂಪಿಸುವ ಪ್ರಕ್ರಿಯೆ ನಡೆದಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್‌ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ವಿವಿಧ ಉದ್ದೇಶಗಳಿಗಾಗಿ ಮುಂದಿನ ಮೂರು ವರ್ಷಗಳಲ್ಲಿ ಒಟ್ಟಾರೆ 50 ಉಪಗ್ರಹಗಳನ್ನು ಉಡಾವಣೆ ಮಾಡಲು ಯೋಜಿಸಿದ್ದು, ಈ ಪೈಕಿ 2019ರಲ್ಲೇ 22 ಉಪಗ್ರಹಗಳನ್ನು ಸಿದ್ಧಪಡಿಸಿ, ಉಡಾವಣೆ ಮಾಡುವ ಗುರಿ ಇದೆ. ಈಗಾಗಲೇ ಕಕ್ಷೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಲವು ಉಪಗ್ರಹಗಳ ಕಾರ್ಯಾಚರಣೆ ಅವಧಿ ಪೂರ್ಣಗೊಂಡಿದ್ದು, ಅವುಗಳನ್ನು ಬದಲಿಸಲು ಹೊಸ ಉಪಗ್ರಹಗಳನ್ನು ಉಡಾವಣೆ ಮಾಡಬೇಕಿದೆ. ಕಾಟೋìಸ್ಯಾಟ್‌ ಮತ್ತು ಭೂವೀಕ್ಷಣಾ ಸರಣಿಯ ಉಪಗ್ರಹಗಳು ಇದರಲ್ಲಿ ಪ್ರಮುಖವಾಗಿವೆ ಎಂದು ಹೇಳಿದರು. 

ಚಂದ್ರಯಾನ-2 ಇದೇ ಆಗಸ್ಟ್‌ನಲ್ಲಿ ಉಡಾವಣೆ ಆಗಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಮುಂದೂಡಲಾಗಿತ್ತು. ಚಂದ್ರನ ಅಂಗಳದಲ್ಲಿ ಲ್ಯಾಂಡರ್‌ ಇಳಿಸುವಾಗ ಎದುರಾಗಬಹುದಾದ ತಾಂತ್ರಿಕ ಸಮಸ್ಯೆಗಳು ಮತ್ತು ಇಂಧನ ಕ್ಷಮತೆಯ ಬಗ್ಗೆ ಕೆಲವು ಸಮಸ್ಯೆಗಳಿದ್ದವು. ಇದಕ್ಕಾಗಿ ಲ್ಯಾಂಡಿಂಗ್‌ಗೆ ಸಂಬಂಧಿಸಿದ ಸಂಪೂರ್ಣ ಯೋಜನೆಯನ್ನು ಹೊಸದಾಗಿ ರೂಪಿಸಲಾಗಿದ್ದು, ಲ್ಯಾಂಡರ್‌ನ್ನು ಮರುವಿನ್ಯಾಸಗೊಳಿಸಲಾಗಿದೆ.

ಬಾಹ್ಯಾಕಾಶ ನೌಕೆ ಉಡಾವಣೆಯಾದ ನಂತರದ 30-35 ದಿನಗಳಲ್ಲಿ ಕಕ್ಷೆ ತಲುಪಲಿದೆ. ಲ್ಯಾಂಡರ್‌ಗೆ ಭಾರತದ ಬಾಹ್ಯಾಕಾಶ ಯೋಜನೆಯ ಪಿತಾಮಹ ವಿಕ್ರಂ ಸಾರಾಭಾಯ್‌ ಅವರ ಹೆಸರು ಇಡಲು ಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. 

Advertisement

ಸೂರ್ಯನ ಹೊರ ಪದರದಲ್ಲಿ ನೆಲೆ ನಿಂತು ಅಧ್ಯಯನ ನಡೆಸುವ “ಆದಿತ್ಯ-1′ ಬಾಹ್ಯಾಕಾಶ ನೌಕೆಯನ್ನು 2019ರ ಡಿಸೆಂಬರ್‌ನಲ್ಲಿ ಉಡಾವಣೆ ಮಾಡಲು ಉದ್ದೇಶಿಸಲಾಗಿದೆ. ಇದು ಸೂರ್ಯ ಮಂಡಲ, ಅದರ ಒಡಲು, ಸೌರ ಮಾರುತ ಮತ್ತು ಅದರಿಂದ ಭೂಮಿಯ ಮೇಲಿನ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲಿದೆ ಎಂದರು. 

ವಿದ್ಯಾರ್ಥಿಗಳಿಗೆ ತರಬೇತಿ: ಪ್ರಾದೇಶಿಕ ಭಾಷೆಗಳಲ್ಲಿಯೂ ವಿಜ್ಞಾನ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಟಿವಿ ಚಾನೆಲ್‌ ಕೂಡ ಶೀಘ್ರ ಆರಂಭವಾಗಲಿದೆ. ಅಲ್ಲದೆ, ಬಾಹ್ಯಾಕಾಶ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಿ, ತರಬೇತಿ ನೀಡಲು ಉದ್ದೇಶಿಸಲಾಗಿದೆ. ವಿವಿಧ ರಾಜ್ಯಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಅವರಿಗೆ 25ರಿಂದ 30 ದಿನ ತರಬೇತಿ ನೀಡಲಾಗುವುದು.

ಆ ವಿದ್ಯಾರ್ಥಿಗಳಿಗೆ ಎಲ್ಲ ಪ್ರಯೋಗಾಲಯಗಳನ್ನೂ ಪರಿಚಯಿಸಲಾಗುವುದು. ಇಸ್ರೋದಿಂದ ಹೊರಗಿದ್ದು, ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದ ಬಗ್ಗೆ ಕೆಲಸ ಮಾಡ ಬಯಸುವವರಿಗೆ ದೇಶದ ಆರು ಕಡೆಗಳಲ್ಲಿ ನವೋದ್ಯಮ ಆರಂಭಿಸಲು ಇನ್‌ಕುಬೇಷನ್‌ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next