ಭುವನೇಶ್ವರ: ಏಷ್ಯನ್ ಅಥ್ಲೆಟಿಕ್ಸ್ ಕೂಟದ ಮೊದಲ ದಿನ ಭಾರತಕ್ಕೆ ಮಹಿಳಾ ಶಾಟ್‌ಪುಟ್‌ನಲ್ಲಿ ಮನ್‌ಪ್ರೀತ್ ಕೌರ್, ಪುರುಷರ 5 ಸಾವಿರ ಮೀ. ಓಟದಲ್ಲಿ ಗೋವಿಂದನ್ ಲಕ್ಷ್ಮಣ್ ಚಿನ್ನದ ಪದಕ ಗೆದ್ದಿದ್ದಾರೆ. ಡಿಸ್ಕಸ್‌ನಲ್ಲಿ ವಿಕಾಸ್ ಗೌಡ ಕಂಚಿನ ಪದಕ ಗೆದ್ದಿದ್ದಾರೆ. ಮಹಿಳಾ ಲಾಂಗ್‌ಜಂಪ್‌ನಲ್ಲಿ ರೀನಾ ಬೆಳ್ಳಿ ಪದಕ ಹಾಗೂ ಅದೇ ವಿಭಾಗದಲ್ಲಿ ನಯನಾ ಕಂಚಿನ ಪದಕ ಗೆದ್ದಿದ್ದಾರೆ. ಒಟ್ಟಾರೆ ಭಾರತ ಮೊದಲ ದಿನ 2 ಚಿನ್ನ, 1 ಬೆಳ್ಳಿ ಹಾಗೂ 2 ಕಂಚು ಸೇರಿದಂತೆ ಒಟ್ಟಾರೆ 5 ಪದಕ ಗೆದ್ದುಕೊಂಡಿದೆ.
ಮನ್‌ಪ್ರೀತ್ ಪ್ರಚಂಡ ಪ್ರದರ್ಶನ: ಹುಟ್ಟು ಹಬ್ಬದ ದಿನವೇ 18.28 ಮೀ. ದೂರ ಎಸೆದು ಸ್ವರ್ಣದ ನಗು ಚೆಲ್ಲಿದರು. ಅಷ್ಟೇ ಅಲ್ಲ ಆಗಸ್ಟ್‌ನಲ್ಲಿ ಲಂಡನ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ನೇರ ಅರ್ಹತೆ ಪಡೆದರು. 27 ವರ್ಷದ ಮನ್‌ಪ್ರೀತ್ ಹಾಲಿ ಚಾಂಪಿಯನ್ ಚೀನಾದ ಗ್ಯೊ ಟಿಯಾನ್ ಕ್ವಿನ್ ಅವರನ್ನು ಮಣಿಸಿದರು. 17.91 ಮೀ. ಎಸೆದ ಚೀನಾ ಅಥ್ಲೀಟ್ ಬೆಳ್ಳಿ ಪದಕ ಪಡೆದರು. 15.45 ಮೀ. ದೂರ ಎಸೆದ ಜಪಾನ್‌ನ ಆಯಾ ಓಟಾ ಕಂಚಿನ ಪದಕ ಪಡೆದುಕೊಂಡರು.
ಪಂಜಾಬ್‌ನ ಪಟಿಯಾಲದ ಮನ್‌ಪ್ರೀತ್‌ಗೆ ಇದು ವೈಯಕ್ತಿಕ ಶ್ರೇಷ್ಠ ಸಾಧನೆ ಅಲ್ಲ. ಚೀನಾದಲ್ಲಿ ನಡೆದಿದ್ದ ಏಷ್ಯನ್ ಗ್ರ್ಯಾನ್ ಪ್ರೀನಲ್ಲಿ ಅವರು 18.86 ಮೀ. ಎಸೆಯುವ ಮೂಲಕ ಚಿನ್ನದ ಪದಕ ಗೆದ್ದಿದ್ದರು. ಇದು ವೃತ್ತಿ ಜೀವನದ ವೈಯಕ್ತಿಕ 2ನೇ ಶ್ರೇಷ್ಠ ಸಾಧನೆ. ಗೆಲುವು ಸಾಧಿಸುತ್ತೇನೆ ಅಂದುಕೊಂಡಿದ್ದೆ. ನಂಬಿಕೆ ಸುಳ್ಳಾಗಲಿಲ್ಲ ಎನ್ನುವ ಖುಷಿ ಇದೆ ಎಂದು ಗೆಲುವಿನ ನಂತರ ಮನ್‌ಪ್ರೀತ್ ಪ್ರತಿಕ್ರಿಯಿಸಿದರು.
ರಾಜ್ಯದ ವಿಕಾಸ್ ಬೆಳ್ಳಿಗೆ ತೃಪ್ತಿ: ಹಾಲಿ ಏಷ್ಯನ್ ಚಾಂಪಿಯನ್ ವಿಕಾಸ್ ಗೌಡ ಈ ಬಾರಿ ಚಿನ್ನದ ಪದಕ ಉಳಿಸಿಕೊಳ್ಳಲಾಗಲಿಲ್ಲ. ಅಮೆರಿಕದಲ್ಲಿದ್ದುಕೊಂಡು ಭಾರತ ಪ್ರತಿನಿಧಿಸುತ್ತಿರುವ ವಿಕಾಸ್‌ಗೌಡ ಕೊನೆ ಹಂತದಲ್ಲಿ ಕೂಟದಲ್ಲಿ ಪಾಲ್ಗೊಂಡರು. 60.81 ಮೀ. ಎಸೆದು ಕಂಚಿನ ಪದಕಕ್ಕೆ ಸಮಾಧಾನ ಪಟ್ಟುಕೊಂಡರು. ಇರಾನ್‌ನ ಇಹ್‌ಸಾನ್ ಹದ್ದಾಡಿ ಚಿನ್ನದ ಪದಕ ಪಡೆದರು. ಅವರು 64.54 ಮೀ. ಎಸೆದರು. ಮಲೇಷ್ಯಾದ ಮೊಹಮ್ಮದ್ ಇರ್ಫಾನ್ 60.96 ಮೀ. ಎಸೆದು ಬೆಳ್ಳಿ ಪದಕ ಪಡೆದರು.
400 ಮೀ.: ಪೂವಮ್ಮ ಫೈನಲ್‌ಗೆ
400 ಮೀ. ಓಟದಲ್ಲಿ ರಾಜ್ಯದ ಎಂಆರ್ ಪೂವಮ್ಮ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ರಾಜ್ಯಕ್ಕೆ ಪದಕ
ವೊಂದರ ಭರವಸೆ ಮೂಡಿಸಿದ್ದಾರೆ. ಇಂದು ಫೈನಲ್ ನಡೆಯಲಿದೆ.