Advertisement

ವಿಜಯಪುರ ಪಾಲಿಕೆ : ಘೋಷಿತ ಮೇಯರ್ ಮೀಸಲು ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯೇ ಇಲ್ಲ!

03:32 PM Oct 17, 2022 | Vishnudas Patil |

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಅಂತಿಮ ಕ್ಷಣದಲ್ಲಿ ಬಿಜೆಪಿ ತನ್ನ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಮೇಯರ್ ಸ್ಥಾನದ ಮೀಸಲು ಘೋಷಿತ ವಾರ್ಡ್ ಸೇರಿದಂತೆ 7 ವಾರ್ಡ್ ಗಳಿಗೆ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ರಾಷ್ಟ್ರೀಯ ಪಕ್ಷ ಬಿಜೆಪಿ ಅಭ್ಯರ್ಥಿಗಳನ್ನೇ ಹಾಕದೇ ಅಚ್ಚರಿ ಮೂಡಿಸಿದೆ.

Advertisement

ನಾಮಪತ್ರ ಸಲ್ಲಿಕೆಗೆ ಅರ್ಧ ಗಂಟೆಗೆ ಮೊದಲು ಅಂತಿಮ ಕ್ಷಣದಲ್ಲಿ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ, ಪಾಲಿಕೆಯ 35 ವಾರ್ಡಗಳಲ್ಲಿ 28 ಸ್ಥಾನಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ ಮೇಯರ್ ಸ್ಥಾನಕ್ಕೆ ಚುನಾವಣೆ ಪೂರ್ವದಲ್ಲೇ ಮೀಸಲು ಘೋಷಣೆ ಆಗಿರುವ, ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಏಕೈಕ ವಾರ್ಡ್ ಸಂಖ್ಯೆ 18ಕ್ಕೆ ಬಿಜೆಪಿ ಅಭ್ಯರ್ಥಿಯನ್ನೇ ಹಾಕುವಲ್ಲಿ ವಿಫಲವಾಗಿದೆ. ಇದು ರಾಜಕೀಯ ಅಚ್ಚರಿ ಹಾಗೂ ಬಿಜೆಪಿ ಸ್ಥಳೀಯ ನಾಯಕರ ಬಣ ರಾಜಕೀಯದ ಬಹಿರಂಗ ತಿಕ್ಕಾಟಕ್ಕೆ ಹಿಡಿದ ಕೈಗನ್ನಡಿ ಎಂಬಂತಾಗಿದೆ.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಪ್ರಕಟಿಸಿರುವ ಪಾಲಿಕೆ ಚುನಾವಣೆ ಅಧಿಕೃತ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಳೆಯ ಹುಲಿಗಳಾದ ಗೂಳಪ್ಪ ಶಟಗಾರ, ಪರಶುರಾಮ ರಜಪೂತ, ರಾಜು ಮಗಿಮಠ, ಪ್ರೇಮಾನಂದ ಬಿರಾದಾರ, ರಾಹುಲ್ ಜಾಧವ, ಮಡಿವಾಳಪ್ಪ ಕರಡಿ, ಮಾಜಿ ಉಪ ಮೇಯರ್ ರಾಜೇಶ ದೇವಗಿರಿ ಕುಟುಂಬ ಸವಿತಾ ದೇವಗಿರಿ ಇವರಿಗೆ ಕಮಲ ಪಾಳೆಯ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ.

ಹಿಂದೂ ಹುಲಿ ಎಂದೇ ಖ್ಯಾತರಾದ ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ , ಕೇಂದ್ರದ ಮಾಜಿ ಸಚಿವರೂ ಆಗಿರುವ ಹಾಲಿ ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರಂಥ ಘಟಾನುಘಟಿ ನಾಯಕರಿದ್ದರೂ ಪಾಲಿಕೆಯ ಎಲ್ಲಾ 35 ವಾರ್ಡಗಳಿಗೆ ಅಭ್ಯರ್ಥಿಗಳನ್ನು ಹಾಕಲು ಸಾಧ್ಯವಾಗಿಲ್ಲ. ಪರಿಣಾಮ 7 ವಾರ್ಡ್ ಗಳಲ್ಲಿ ಕೇಂದ್ರ- ರಾಜ್ಯದಲ್ಲಿ ಅಧಿಕಾರದಲ್ಲಿರುವ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಅಧಿಕೃತ ಅಭ್ಯರ್ಥಿ ರಹಿತ ಚುನಾವಣೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next