ವಿಜಯಪುರ: ನಗರದ ಬೆಂಗಳೂರು ರಸ್ತೆಯ ಹೊರವಲಯದಲ್ಲಿರುವ ಟೋಲ್‍ನಾಕಾ ಸಿಬಂದಿ 8 ತಿಂಗಳಿಂದ ಪಾವತಿಯಾಗದ ವೇತನ ನೀಡಲು ಆಗ್ರಹಿಸಿ ಶುಕ್ರವಾರ ಟೋಲ್ ನಾಕಾ ಆಡಳಿತ ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ಸದ್ಭವ ಗ್ರೂಪ್ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಕಾಮಗಾರಿ ಗುತ್ತಿಗೆ ಪಡೆದಿದ್ದು, ದೇಶದಾದ್ಯಂತ ಸದರಿ ಸಂಸ್ಥೆಯಲ್ಲಿ ಸಾವಿರಾರು ಕಾರ್ಮಿಕರು ಟೋಲ್‍ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಸದರಿ ಸಂಸ್ಥೆ ತನ್ನ ಸಿಬದಿಗೆ ಕಳೆದ 8 ತಿಂಗಳಿಂದ ವೇತನ ನೀಡಿಲ್ಲ ಎಂದು ದೂರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಟೋಲ್ ನಾಕಾ ನೌಕರ ಮನೋಜ, ವಿಜಯಪುರ ನಗರದ ಬೆಂಗಳೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿ-50 ರಲ್ಲಿರುವ ಟೋಲ್‍ಗೇಟ್ ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಳೆದ 8 ತಿಂಗಳಿಂದ ವೇತನ ಪಾವತಿಸಿಲ್ಲ. ಗುತ್ತಿಗೆ ಆಧಾರದ ಮೇಲೆ ಸದ್ಭವ ಗ್ರೂಪ್ ಆಡಳಿತ ವ್ಯವಸ್ಥೆ ಕಾರ್ಮಿಕರಿಗೆ ವೇತನ ನೀಡದೇ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಸದ್ಯ ಈ ಟೋಲ್ ಗೆ ಸಂಬಂಧಿಸಿದಂತೆ 1500 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕಳೆದ 8 ತಿಂಗಳಿಂದ ಸಂಸ್ಥೆಯ ಯಾವೊಬ್ಬ ಸಿಬ್ಬಂದಿಗೂ ವೇತನ ಪಾವತಿಯಾಗಿಲ್ಲ. ವೇತನ ಕೇಳಿದರೆ ಸದ್ಭವ ಗ್ರೂಪ್ ನವರು ಸರ್ಕಾರದಿಂದ ಇನ್ನೂ ಹಣ ಬಿಡುಗಡೆಯಾಗಿಲ್ಲ. ತಾವು ಸಹ ವೇತನ ಪಡೆದಿಲ್ಲ ಎನ್ನುವ ಮೂಲಕ ಸಬೂಬು ಹೇಳುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ನಾವು ದುಡಿಯುವ ಮಾಸಿಕ ವೇತನದಲ್ಲೇ ನಮ್ಮ ಕುಟುಂಬಳ ನಿರ್ವಹಣೆ ಆಧಾರವಾಗಿದ್ದು, ವೇತನ ಬಿಡುಗಡೆ ಆಗದ ಕಾರಣ ನಮ್ಮ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಕೂಡಲೇ ವೇತನ ಬಿಡುಗಡೆ ಮಾಡಿ ನಮ್ಮನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಿ ಎಂದು ಆಗ್ರಹಿಸಿದರು.
ಒಂದೊಮ್ಮೆ ನಮ್ಮ ವೇತನ ವಿತರಣೆ ಇನ್ನೂ ವಿಳಂಬವಾದಲ್ಲಿ ಟೋಲ್ ನಾಕಾ ಆಡಳಿತ ಮಂಡಳಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರು.