Advertisement

ವಿದ್ಯಾರ್ಥಿಗಳಿಗೆ “ವಿಜಯೀಭವ’ಚಾನೆಲ್‌

10:59 AM Mar 08, 2020 | Lakshmi GovindaRaj |

ಬೆಂಗಳೂರು: ಶಿಕ್ಷಣ ಕ್ಷೇತ್ರಕ್ಕೆ ಇನ್ನಷ್ಟು ಉತ್ತಮ ಯೋಜನೆಗಳನ್ನು ರೂಪಿಸುವ ಮೂಲಕ ಸುಶಿಕ್ಷಿತ, ಸುಭಿಕ್ಷ ಸಮಾಜ ನಿರ್ಮಾಣಕ್ಕೆ ಶ್ರಮಿಸಲಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

Advertisement

ಉನ್ನತ ಶಿಕ್ಷಣ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಕೇಂದ್ರ ಕಚೇರಿಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಹಾಗೂ “ವಿಜಯೀಭವ’ ಯೂಟ್ಯೂಬ್‌ ಚಾನಲ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದಿನ ವಿದ್ಯಾರ್ಥಿಗಳಿಗೆ ಚಾರಿತ್ರ್ಯ ನಿರ್ಮಾಣದ ಜತೆಗೆ ಉದ್ಯೋಗಾವಕಾಶಕ್ಕೆ ಅವಶ್ಯವಿರುವ ಶಿಕ್ಷಣ ನೀಡಲು ಸರ್ಕಾರ ಬದ್ಧವಾಗಿದೆ ಎಂದರು.

ರಾಜ್ಯದ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಆಡಳಿತ ವ್ಯವಸ್ಥೆಯನ್ನು ತಂತ್ರಜ್ಞಾನದ ನೆರವಿನಿಂದ ಸಮರ್ಥವಾಗಿ ನಿರ್ವಹಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ರಾಜ್ಯದ ಉನ್ನತ ಶಿಕ್ಷಣದ ನಿವ್ವಳ ನೋಂದಣಿ ಅನುಪಾತವನ್ನು ಹೆಚ್ಚಿಸಲು ಇಂಟರ್‌ ಆ್ಯಕ್ಟೀವ್‌ ಆನ್‌ಲೈನ್‌ ಕೋರ್ಸ್‌ಗಳನ್ನು ಪ್ರಾರಂಭಿಸಲಾಗುವುದು. ಇದಕ್ಕೆ ಅವಶ್ಯವಿರುವ ಗುಣಾತ್ಮಕ ಇ-ಕಂಟೆಂಟ್‌ ಸಿದ್ಧಪಡಿಸಲಾಗುವುದು ಎಂದು ಅವರು ಹೇಳಿದರು.

“ಮೈತ್ರಿ’ ಸಹಾಯವಾಣಿ: ವಿದ್ಯಾರ್ಥಿಗಳ ಸಮಸ್ಯೆ ಗಳ ನ್ನು ಆಲಿಸಲು “ಮೈತ್ರಿ’ ಸಹಾಯವಾಣಿ ಪ್ರಾರಂಭಿಸ ಲಾಗಿದೆ. ಆ ಮೂಲಕ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಮತ್ತು ವೈಯಕ್ತಿಕ ಸಮಸ್ಯೆಗಳ ಕುರಿತು ಮಾರ್ಗದರ್ಶನ ಪಡೆಯಬಹುದಾಗಿದೆ. ವಿದ್ಯಾರ್ಥಿಗಳಿಗಾಗಿ “ವಿಜಯೀಭವ’ ಎಂಬ ಯೂಟ್ಯೂಬ್‌ ಚಾನೆಲ್‌ ಪ್ರಾರಂಭಿಸಲಾಗುತ್ತಿದೆ. ಇದರ ಮೂಲಕ ಯುವಜನರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸ್ಫೂರ್ತಿ ನೀಡಲು ಉತ್ತಮ ವೇದಿಕೆ ಸೃಷ್ಟಿಸಿದಂತಾಗಿದೆ. ಈ ಎಲ್ಲ ಪ್ರಯತ್ನಗಳನ್ನೂ ಶಿಕ್ಷಣ ಇಲಾಖೆ ನಿರಂತರವಾಗಿ ಮುಂದುವರಿಸಿಕೊಂಡು ಹೋಗಬೇಕು.

ಆ ಮೂಲಕ ವಿದ್ಯಾರ್ಥಿಗಳ ಬದುಕಿನಲ್ಲಿ ಪರಿವರ್ತನೆ ತರಬೇಕು ಎಂದು ಯಡಿಯೂರಪ್ಪ ಸಲಹೆ ನೀಡಿದರು. ಶಿಕ್ಷಣಕ್ಕೆ ಹಿಂದಿನಿಂದಲೂ ಆದ್ಯತೆ ನೀಡುವ ಪ್ರವೃತ್ತಿ ನಮ್ಮದು. ಶಿಕ್ಷಣ, ಆರೋಗ್ಯ ಮೊದಲಾದವುಗಳು ಸರ್ಕಾರದ ಆದ್ಯತಾ ಕ್ಷೇತ್ರಗಳಾಗಿವೆ. 29 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ನಿಗದಿಪಡಿಸಿದ್ದೇವೆ. ಉನ್ನತ ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ ಎಂದು ಅವರು ಹೇಳಿದರು.

Advertisement

ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜು ಮೇಲ್ದರ್ಜೆಗೆ: ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಬೋಧಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆನ್‌ಲೈನ್‌ ಮೂಲಕ ಪಾರದರ್ಶಕವಾಗಿ ಮಾಡಲಾಗುತ್ತಿದೆ. ಅರ್ಹ ಅಭ್ಯರ್ಥಿಗಳಿಗೆ ಅವಕಾಶ ದೊರೆಯುವುದಲ್ಲದೆ, ಶಿಕ್ಷಣದ ಗುಣಮಟ್ಟ ಹೆಚ್ಚಲೂ ಸಾಧ್ಯವಾಗುತ್ತದೆ. ಬೆಂಗಳೂರಿನಲ್ಲಿರುವ ಐತಿಹಾಸಿಕ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜನ್ನು ಐಐಟಿ ಮಾದರಿಯಲ್ಲಿ ಸ್ವಾಯತ್ತಗೊಳಿಸಿ ಅಭಿವೃದ್ಧಿಪಡಿಸಲು 10 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೇವೆ ಎಂಬ ಮಾಹಿತಿ ನೀಡಿದರು.

ಪಾಲಿಟೆಕ್ನಿಕ್‌ ಮತ್ತು ಇಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಡಿಯಲ್ಲಿ ಜಿಯೋ ಸ್ಪೇಶಿಯಲ್‌ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾ ಗುವುದು ಎಂದು ಯಡಿಯೂರಪ್ಪ ಹೇಳಿದರು. ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

ಶಿಕ್ಷಣಕ್ಕೆ ಹಿಂದಿನಿಂದಲೂ ಆದ್ಯತೆ ನೀಡುವ ಪ್ರವೃತ್ತಿ ನಮ್ಮದು. ಶಿಕ್ಷಣ, ಆರೋಗ್ಯ ಮೊದಲಾದವುಗಳು ನಮ್ಮ ಸರ್ಕಾರದ ಆದ್ಯತಾ ಕ್ಷೇತ್ರಗಳಾಗಿವೆ. 29 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ನಿಗದಿಪಡಿಸಿದ್ದೇವೆ. ಉನ್ನತ ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ.
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next