ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಇದೀಗ ವರುಣಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸ್ವತಃ ವಿಜಯೇಂದ್ರ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ನಾನು ಪಕ್ಷದ ಉಪಾಧ್ಯಕ್ಷನಾಗಿ ಇಡೀ ರಾಜ್ಯ ಸುತ್ತಬೇಕಿದೆ. ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಸುತ್ತಬೇಕು. ಇದನ್ನು ರಾಷ್ಟ್ರೀಯ ಅಧ್ಯಕ್ಷರೇ ಹೇಳಿದ್ದಾರೆ. ನನ್ನನ್ನು ಗುರುತಿಸಿರುವ ಕ್ಷೇತ್ರ ವರುಣಾ, ನಾನು ಅಲ್ಲಿಗೆ ಹೆಚ್ಚು ಒತ್ತು ಕೊಡುತ್ತೇನೆ. ಆದರೆ ಟಿಕೆಟ್ ಕೊಡೋದು ಬಿಡೋದು ವರಿಷ್ಠರಿಗೆ ಬಿಟ್ಟಿದ್ದು ಎಂದು ವಿಜಯೇಂದ್ರ ಹೇಳಿದ್ದಾರೆ.
ಹಾನಗಲ್ ಉಪಚುನಾವಣೆಯಲ್ಲಿ ಸ್ಪರ್ಧಿಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನ ಪಕ್ಷ ನಿರ್ಧಾರ ಮಾಡಬೇಕೆಂದರು.
ಇದನ್ನೂ ಓದಿ:17 ವರ್ಷ ಬಳಿಕ ಜಾರಕಿಹೊಳಿ ಕುಟುಂಬಕ್ಕಿಲ್ಲ ಸಚಿವ ಸ್ಥಾನ
ಸಚಿವ ಸ್ಥಾನ ತಪ್ಪಿದ ವಿಚಾರವಾಗಿ ಮಾತನಾಡಿದ ವಿಜಯೇಂದ್ರ, ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲವೆಂಬ ನೋವಿಲ್ಲ. ನನಗೆ ಸಚಿವ ಸ್ಥಾನ ಕೊಡಿ ಎಂದು ಯಡಿಯೂರಪ್ಪ ಒತ್ತಡ ಹೇರಿಲ್ಲ. ಪುತ್ರನಿಗೆ ಡಿಸಿಎಂ ಕೊಡಬೇಕೆಂದು ಯಡಿಯೂರಪ್ಪ ಶರತ್ತು ಹಾಕಿದ್ದರು ಎನ್ನುವುದು ಸುಳ್ಳು. ನಮ್ಮದು ರಾಷ್ಟ್ರೀಯ ಪಕ್ಷ, ಪಕ್ಷದಲ್ಲಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಅವರು ಪಕ್ಷವನ್ನ ಈ ಹಂತಕ್ಕೆ ತಂದಿದ್ದಾರೆ. ವಿಜಯೇಂದ್ರ ಪರಿಗಣಿಸುವಂತೆ ಯಡಿಯೂರಪ್ಪ ಒತ್ತಡ ಹೇರಿಲ್ಲ. ನನಗೆ ಸಂಪುಟದಲ್ಲಿ ಅವಕಾಶ ಸಿಗಲಿಲ್ಲವೆಂಬ ಅಸಮಾಧಾನವಿಲ್ಲ. ಪಕ್ಷ ಸಂಘಟನೆಗೆ ಅವಕಾಶ ಕೊಟ್ಟಿದೆ. ನಾನು ಮುಂದುವರಿಸುತ್ತೇನೆ ಎಂದರು.
ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಿ ವಿಚಾರವಾಗಿ ಮಾತನಾಡಿದ ಅವರು, ಇದು ರಾಜ್ಯದ ಜನರ ಹಕ್ಕು ಎಂದು ಬಿಎಸ್ ವೈ ಸ್ಪಷ್ಟವಾಗಿ ಹೇಳಿದ್ದರು. ಯಾರೇ ಉಪವಾಸ ಸತ್ಯಾಗ್ರಹ ಮಾಡಲಿ ನಾವು ಯೋಜನೆ ಮಾಡುತ್ತೇವೆಂದು ಬೊಮ್ಮಾಯಿ ಹೇಳಿದ್ದಾರೆ. ಅಣ್ಣಾಮಲೈ ಯಾಕೆ ಪ್ರತಿಭಟನೆ ಮಾಡ್ತಾರೆ ಗೊತ್ತಿಲ್ಲ. ಇದಕ್ಕೆ ಅಡೆ ತಡೆಯಾವುದೂ ಇಲ್ಲ. ಈ ಯೋಜನೆಯನ್ನ ಮಾಡಿಯೇ ತೀರಲಾಗುವುದು ಎಂದರು.