ಬೆಂಗಳೂರು: ಸಂಸದ ಅನಂತಕುಮಾರ್ ಹೆಗಡೆಯವರ ವಿವಾದಿತ ಹೇಳಿಕೆಯಿಂದ ಅಂತರ ಕಾಯ್ದುಕೊಳ್ಳಲು ಬಿಜೆಪಿ ನಿರ್ಧರಿಸಿದ್ದು, “ಇದು ಅವರ ವೈಯಕ್ತಿಕ ಅಭಿಪ್ರಾಯ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಘೋಷಿಸಿದ್ದಾರೆ.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, “ಅನಂತಕುಮಾರ ಹೆಗಡೆಯವರ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ. ಇದಕ್ಕೆ ಸಂಬಂಧಪಟ್ಟಂತೆ ನಾನು ಹೆಗಡೆಯವರ ಜತೆ ಮಾತನಾಡುತ್ತೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಅವರ ಹೇಳಿಕೆಗಳನ್ನು ನಾನು ಗಮನಿಸಿದ್ದೇನೆ. ಯಾರೇ ಆಗಿರಲಿ ರಾಜಕಾರಣಿಯಾದವರ ಮಾತುಗಳು ಗಂಭೀರವಾಗಿರಬೇಕು. ರಾಜಕಾರಣಿಗಳು ಅಂದರೆ ಮೊದಲೇ ಜನ ನಂಬುತ್ತಿಲ್ಲ. ಹೀಗಾಗಿ ಎಲ್ಲರೂ ಸಮಾಜ ಒಪ್ಪುವಂಥ ಮಾತನಾಡಬೇಕು. ಅನಂತಕುಮಾರ್ ಹೆಗಡೆಯವರು ನಮ್ಮ ಪಕ್ಷದ ಹಿರಿಯರು. ಅವರ ಜತೆ ನಾನು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಈ ಮೂಲಕ ವಿವಾದದಿಂದ ದೂರ ಉಳಿಯುವುದಕ್ಕೆ ಎಲ್ಲರೂ ಪ್ರಯತ್ನಿಸುತ್ತಿದ್ದಾರೆ.ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತ್ರ ಅನಂತಕುಮಾರ್ ಹೆಗಡೆ ಮಾತಿಗೆ ಇದುವರೆಗೆ ಧ್ವನಿಗೂಡಿಸಿದ್ದು, ವಿಪಕ್ಷ ನಾಯಕ ಆರ್.ಅಶೋಕ, ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸೇರಿದಂತೆ ಘಟಾನುಘಟಿಗಳೆಲ್ಲರೂ ದೂರ ಉಳಿದಿದ್ದಾರೆ.
ಮಾನಸಿಕ ಸ್ಥಿಮಿತ ಇಲ್ಲ
ಮಾನಸಿಕ ಸ್ಥಿಮಿತ ಇರುವವರು ಈ ರೀತಿ ಮಾತನಾಡುವುದಿಲ್ಲ. ಅವರ ಮಾತು ತಪ್ಪು ಎಂದು ಅವರ ನಾಯಕರಿಗೆ ಅರ್ಥವಾಗಿರುವುದು ಉತ್ತಮ ಬೆಳವಣಿಗೆ. ಅನಂತ ಕುಮಾರ್ ಹೆಗಡೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿ.
-ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ