ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಅಧಿಕಾರ ಸ್ವೀಕಾರ ವೇಳೆ ಬಿಜೆಪಿಯೊಳಗಿನ ಅಸಮಾಧಾನ ಬಹಿರಂಗವಾಗಿದೆ. ಸಿ.ಟಿ. ರವಿ, ಯತ್ನಾಳ್, ಸುನಿಲ್ ಕುಮಾರ್ ಸಮಾರಂಭಕ್ಕೆ ಗೈರುಹಾಜರಾಗಿದ್ದಾರೆ.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಕಣ್ಣೀರು ಹಾಕಿಸಿ ಇಳಿಸಿದ್ದು ಯಾಕೆ ಎಂಬುದು ಇನ್ನೂ ಯಾರಿಗೂ ಗೊತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖಾ ಸಚಿವ ಪ್ರಿಯಾಂಕ್ ಖರ್ಗೆ ವಿಶ್ಲೇಷಿಸಿದರು.
ಮಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ವೇಳೆಗೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷ ಖಾಲಿ ಆಗಲಿದ್ದು, ಆಗ ಕಾರ್ಯಕರ್ತರ ರಕ್ಷಣೆಗೆ ನಾಯಕರು ಇರುವುದಿಲ್ಲ. ಕಾಂಗ್ರೆಸ್ ತಣ್ತೀ, ಸಿದ್ಧಾಂತ ಒಪ್ಪಿಕೊಂಡು ಯಾರು ಬೇಕಾದರೂ ಕಾಂಗ್ರೆಸ್ ಸೇರ್ಪಡೆಯಾಗಬಹುದು. ಬಿಜೆಪಿಯಲ್ಲಿ ನಾಯಕರೇ ಇಲ್ಲ ಎಂದು ನಮ್ಮ ನಾಯಕತ್ವ ಹುಡುಕಿಕೊಂಡು ಪಕ್ಷಕ್ಕೆ ಬರಲಿದ್ದಾರೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದು 6 ತಿಂಗಳು ಕಳೆದಿದೆ. ಆದರೆ ಮೇಲ್ಮನೆ, ಕೆಳಮನೆಯಲ್ಲಿ ವಿಪಕ್ಷ ನಾಯಕರಿಲ್ಲ, ರಾಜ್ಯಪಾಲರ ಭಾಷಣ, ಬಜೆಟ್ ಮಂಡನೆ, ಬಜೆಟ್ ಭಾಷಣ ನಡೆದರೂ ಬಿಜೆಪಿ ನಾಯಕನ ಆಯ್ಕೆ ಆಗಿಲ್ಲ. ಇನ್ನು 15 ದಿನದಲ್ಲಿ ಬೆಳಗಾವಿ ಅಧಿವೇಶನ ಆರಂಭವಾಗುತ್ತದೆ. ವಿಪಕ್ಷದ ನಾಯಕರು ಯಾರು? ಅಂತಹ ಯಾವುದೇ ನಾಯಕ ಬಿಜೆಪಿಯಲ್ಲಿ ಇಲ್ಲ ಎಂದರು.
ಕಾಂಗ್ರೆಸ್‌ನ ಗ್ಯಾರಂಟಿಗಳ ಬಗ್ಗೆ ಕುಮಾರಸ್ವಾಮಿ ಟೀಕೆ ಮಾಡಿದ್ದರು. ಎಲ್ಲರನ್ನೂ ಕತ್ತಲಲ್ಲಿ ಇರಿಸುತ್ತೀರಿ ಎಂದು ಹೇಳಿದ ಅವರೇ ಹೆಚ್ಚು ಬೆಳಕು ತೆಗೆದುಕೊಂಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ ಅವರು ಜೆಡಿಎಸ್ ಕಚೇರಿ ಗೋಡೆ ಮೇಲೆ ಪೋಸ್ಟರ್ ಹಾಕಿದ್ದಕ್ಕೂ ಕಾಂಗ್ರೆಸ್‌ಗೆ ಸಂಬಂಧ ಇಲ್ಲ. ನಮಗೆ ಬೇರೆ ಕೆಲಸ ಇಲ್ವಾ? ಎಂದರು.
ಯೋಜನೆ ರಾಜ್ಯದ್ದು; ಪ್ರಚಾರ ಕೇಂದ್ರಕ್ಕೆ !
ಅನ್ನಭಾಗ್ಯ ಯೋಜನೆ, ಉದ್ಯೋಗ ಖಾತರಿ ಯೋಜನೆಯಲ್ಲಿ 720 ಕೋ.ರೂ. ಮೊತ್ತ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿದೆ. ಖಾತರಿ ಫಲಾನುಭವಿಗಳಿಗೆ ಕೂಲಿ ಮೊತ್ತ ಇನ್ನೂ ಸಿಕ್ಕಿಲ್ಲ. 18 ಕೋ.ರೂ. ಗುರಿ ನೀಡುವಂತೆ ಕೇಳಿದರೂ ನೀಡಿಲ್ಲ. ಜಲಜೀವನ್ ಮಿಷನ್, ಸಬರ್ಬನ್ ರೈಲು, ಆಯುಷ್ಮಾನ್ ಭಾರತ್, ಅನ್ನಭಾಗ್ಯ ಯೋಜನೆಗಳಲ್ಲಿ ಸುಮಾರು ಶೇ. 50ರಷ್ಟು ಪಾಲು ರಾಜ್ಯ ಸರಕಾರದ್ದು ಇದ್ದರೂ ಪ್ರಚಾರ ಪಡೆಯುವುದು ಮಾತ್ರ ಕೇಂದ್ರ ಸರಕಾರ. ರಾಜ್ಯದ ಯೋಜನೆಗೆ ಕೇಂದ್ರದ ಪ್ರಚಾರ ಪಡೆಯುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿಸ್ಸೀಮರು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.