Advertisement

ಮೈಸೂರು ಅರಮನೆಯಲ್ಲಿಂದು ವಿಜಯದಶಮಿ ಸಡಗರ

06:15 AM Oct 22, 2018 | Team Udayavani |

ಮೈಸೂರು: ಇಬ್ಬರು ರಾಜವಂಶಸ್ಥರ ನಿಧನ ಹಿನ್ನೆಲೆಯಲ್ಲಿ ವಿಜಯದಶಮಿ ದಿನದಂದು ಮುಂದೂಡಲಾಗಿದ್ದ ವಜ್ರಮುಷ್ಠಿ ಕಾಳಗ ಹಾಗೂ ಇನ್ನಿತರ ಧಾರ್ಮಿಕ ಪೂಜಾ ಕೈಂಕರ್ಯಗಳು ಸೋಮವಾರ ನಡೆಯಲಿವೆ.

Advertisement

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರ ತಾಯಿ ಪುಟ್ಟರತ್ನಮ್ಮಣ್ಣಿ ಹಾಗೂ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ಸಹೋದರಿ ವಿಶಾಲಾಕ್ಷಿದೇವಿ ಅವರ ನಿಧನದಿಂದ ವಿಜಯದಶಮಿಯ ಎಲ್ಲಾ ಧಾರ್ಮಿಕ ಆಚರಣೆಗಳನ್ನು ಮುಂದೂಡಲಾಗಿತ್ತು. ಈ ಎಲ್ಲಾ ಕಾರ್ಯಕ್ರಮಗಳನ್ನು ಸೋಮವಾರ ನಡೆಸಲಾಗುತ್ತಿದ್ದು, ವಜ್ರಮುಷ್ಠಿ ಕಾಳಗ, ಶಮಿಪೂಜೆ ಹಾಗೂ ವಿಜಯಯಾತ್ರೆಗಳನ್ನು ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 10-ರಿಂದ ಮಧ್ಯಾಹ್ನ 1.30ರವರೆಗೆ ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ನಾಡಿನಿಂದ ಕಾಡಿಗೆ ದಸರಾ ಗಜಪಡೆ: ಈ ಮಧ್ಯೆ, ನಾಡಹಬ್ಬಕ್ಕಾಗಿ ನಗರಕ್ಕಾಗಮಿಸಿ ಎಲ್ಲರ ಆಕರ್ಷಣೆಯಾಗಿದ್ದ ಗಜಪಡೆ ಭಾನುವಾರ ಕಾಡಿನತ್ತ ಪ್ರಯಣ ಬೆಳೆಸಿತು. ಅರಮನೆಯಲ್ಲಿ ಸೂತಕ ಇರುವ ಹಿನ್ನೆಲೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಗಜಪಡೆಯ ಒಂಭತ್ತು ಆನೆಗಳಿಗೆ ಜಿಲ್ಲಾಡಳಿತದಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ರಾಜವಂಶಸ್ಥರ ಕೋರಿಕೆ ಮೇರೆಗೆ, ಗೋಪಿ, ವಿಕ್ರಮ ಹಾಗೂ ವಿಜಯ ಆನೆಗಳು ಅರಮನೆಯಲ್ಲೇ ಉಳಿದಿವೆ.

ಎಲ್ಲಾ ಆನೆಗಳಿಗೆ ಚೆಂಡು ಹೂವಿನ ಹಾರ ತೋಡಿಸಿ, ಪೂಜೆ ಸಲ್ಲಿಸಿ, ತಿನ್ನಲು ಕಬ್ಬು, ಬೆಲ್ಲ, ಹಣ್ಣುಗಳನ್ನು ನೀಡಲಾಯಿತು. ಆನೆಗಳ ಮಾವುತರು, ಕಾವಾಡಿಗಳು ಮತ್ತು ಕುಟುಂಬದವರಿಗೆ ಬೆಳಗಿನ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ, ಅರಮನೆ ಆಡಳಿತ ಮಂಡಳಿಯಿಂದ ಆನೆ ಮಾವುತರು, ಕಾವಾಡಿಗಳು ಮತ್ತು ಸಹಾಯಕರಿಗೆ ನೀಡಲಾದ ತಲಾ 8,500 ರೂ.ಗಳ ಗೌರವಧನವನ್ನು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್‌ ವಿತರಿಸಿದರು.

ದಸರಾ ಸಂಬಂಧ ಶಾಸಕ ತನ್ವೀರ್‌ ಸೇಠ್ ನೀಡಿರುವ ಹೇಳಿಕೆ ಹಾಗೂ ಅವರು ದಸರೆಯಲ್ಲಿ ಭಾಗವಹಿಸದಿರುವುದು ಅವರ ವೈಯಕ್ತಿಕ ವಿಚಾರ. ಕಾಂಗ್ರೆಸ್‌ನ ಹಲವು ಸಚಿವರು ಮತ್ತು ಮುಖಂಡರು ದಸರಾದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
– ಸಾ.ರಾ.ಮಹೇಶ್‌,ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next