ಮೈಸೂರು: ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನಗೊಂಡು ಬಿಜೆಪಿ ತೊರೆದಿದ್ದ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಜ.19ರಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ಶುಕ್ರವಾರ ನಗರದ ಟಿ.ಕೆ.ಲೇ ಔಟ್‌ನಲ್ಲಿರುವ ಸಿಎಂ ಸಿದ್ದರಾಮಯ್ಯನವರ ನಿವಾಸಕ್ಕೆ ಆಗಮಿಸಿದ ಅವರು, ಕಾಂಗ್ರೆಸ್ ಸೇರ್ಪಡೆ ಕುರಿತು ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯಶಂಕರ್, ಯಾವುದೇ ಷರತ್ತಿಲ್ಲದೆ ಜ.19ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದೇನೆ. ಅಂದೇ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿಯ ರಾಜ್ಯ ನಾಯಕರ ಬಂಡವಾಳ ಬಯಲು ಮಾಡುತ್ತೇನೆ ಎಂದರು. ಯಾರ್ಯಾರ ಬಂಡವಾಳ ಬಯಲು ಮಾಡುತ್ತೇನೆ ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದ ಅವರು, ಎಲ್ಲವನ್ನೂ ಕಾಂಗ್ರೆಸ್ ಸೇರ್ಪಡೆ ನಂತರ ಬಯಲು ಮಾಡಲಿದ್ದೇನೆ, ಅಲ್ಲಿಯವರೆಗೆ ಕಾದು ನೋಡಿ ಎಂದರು.
ತಿ.ನರಸೀಪುರಕ್ಕೆ ಬೋಸ್, ವರುಣಕ್ಕೆ ಯತೀಂದ್ರ?
ತಿ.ನರಸೀಪುರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಸುನೀಲ್ ಬೋಸ್ ಹಾಗೂ ವರುಣ ವಿಧಾನಭಾ ಕ್ಷೇತ್ರಕ್ಕೆ ಡಾ.ಯತೀಂದ್ರ ಅವರೇ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಗಳು ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಘೋಷಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಮಾತನಾಡಿ, “ತಿ.ನರಸೀಪುರ ಕ್ಷೇತ್ರದಲ್ಲಿ ಸಚಿವ ಮಹದೇವಪ್ಪ ಸ್ಪರ್ಧಿಸುತ್ತಾನೋ ಇಲ್ಲವೊ
ಗೊತ್ತಿಲ್ಲ. ನಾನೂ ಕೂಡ ವರುಣದಲ್ಲಿ ನಿಲ್ಲುವ ಖಾತರಿಯಿಲ್ಲ’ ಎನ್ನುವ ಮೂಲಕ ಪರೋಕ್ಷವಾಗಿ ಸುನೀಲ್ ಬೋಸ್ ಹಾಗೂ ಡಾ.ಯತೀಂದ್ರ ಅವರಿಬ್ಬರೂ ಕೈ ಅಭ್ಯರ್ಥಿಗಳಾಗಿ ಕಣಕ್ಕಿಳಿ ಯುವ ಮುಸ್ಸೂಚನೆ ನೀಡಿದರು.