Advertisement

ನೀರಿಗಾಗಿ ನಾಗರಿಕರ ಪ್ರತಿಭಟನೆ

10:55 AM Jun 08, 2019 | Naveen |

ವಿಜಯಪುರ: ವಿಜಯಪುರ ನಗರದಲ್ಲಿ ನೀರು ಪೂರೈಕೆಯಲ್ಲಿ ವಿಳಂಬವಾಗುತ್ತಿರುವ ಕ್ರಮ ಖಂಡಿಸಿ ಸೋಷಿಯಲಿಸ್ಟ್‌ ಯೂನಿಟ್ ಸೆಂಟರ್‌ ಆಫ್‌ ಇಂಡಿಯಾ ಜಿಲ್ಲಾ ಘಟಕದ ನೇತೃತ್ವದಲ್ಲಿ ನಾಗರಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

Advertisement

ಶುಕ್ರವಾರ ಎಸ್‌ಯುಸಿಐ ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಭಗವಾನರೆಡ್ಡಿ ಮಾತನಾಡಿ, ಸರಕಾರ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿಕೊಳ್ಳುತ್ತಿದೆ. ಮತ್ತೂಂದೆಡೆ ವಿಜಯಪುರಕ್ಕೆ ನಿಯಮಿತವಾಗಿ ಕುಡಿಯುವ ನೀರು ಬರದ ಕಾರಣ ನಿತ್ಯದ ಬಳಕೆಗೆ ನೀರಿಲ್ಲದೇ ಜನರು ಪರದಾಡುತ್ತಿದ್ದಾರೆ. ನೀರಿನ ಸಮಸ್ಯೆ ಇರುವ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ನೀರು ಕೊಡುವುದಾಗಿ ಸರ್ಕಾರ ಹೇಳಿಕೊಳ್ಳುತ್ತಿದ್ದರೆ, ನಗರ ಪ್ರದೇಶದಲ್ಲೇ 12 ದಿನ ಕಳೆದರೂ ನೀರು ಬರುತ್ತಿಲ್ಲ. ಜನತೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸರಕಾರ, ಜನಪ್ರತಿನಿಧಿಗಳು ಉಡಾಫೆ ಉತ್ತರದ ಮೂಲಕ ಸಾರ್ವಜನಿಕರ ಸಮಸ್ಯೆ ವಿಷಯದಲ್ಲಿ ಅವರ ಜೀವನದೊಂದಿಗೆ ಚಲ್ಲಾಟ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಮಟ್ಟಿಗೆ ಅಲಮಟ್ಟಿ ಶಾಸ್ತ್ರಿ ಜಲಾಶಯದಲ್ಲಿ ಸಾಕಷ್ಟು ನೀರು ಲಭ್ಯ ಇದ್ದರೂ ನಗರದಲ್ಲಿ 15 ದಿನಕ್ಕೆ ಒಮ್ಮೆ ಹಾಗೂ ಕುಡಿಯಲು ಯೋಗ್ಯವಲ್ಲದ ಅಶುದ್ಧ ನೀರು ಪೂರೈಕೆ ಮಾಡುತ್ತಿರುವ ಉದ್ದೇಶವೇನು. ಸರ್ಕಾರ ಹಾಗೂ ಅಧಿಕಾರಿಗಳ ವರ್ತನೆಯಿಂದಾಗಿ ಜನರು ನಿತ್ಯವೂ ಕುಡಿಯುವ ನೀರಿಗಾಗಿ ಕೆಲಸ ಬಿಟ್ಟು ಅಲೆಯುವ ದುಸ್ಥಿತಿ ಎದುರಾಗಿದೆ. ನಗರದ ಹಲವು ವಾರ್ಡ್‌ಗಳಲ್ಲಿ 24×7 ನಳಗಳಲ್ಲಿ ವ್ಯವಸ್ಥೆ ಇದೆ ಎಂಧು ಹೇಳಿದ್ದರೂ ವಾರ ಕಳದರೂ ನೀರು ಬರುತ್ತಿಲ್ಲ ಎಂದು ದೂರಿದರು.

ಮಹಾನಗರ ಪಾಲಿಕೆ ಹಾಗೂ ಜಲ ಮಂಡಳಿ ಇದಕ್ಕೆ ತುರ್ತು ಗಮನ ಹರಿಸದೇ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ. ಎರಡು ಮೂರು ದಿನಗಳಲ್ಲಿ ನೀರಿನ ಸಮಸ್ಯೆ ಪರಿಹಾರವಾಗದಿದ್ದರೆ ಜಿಲ್ಲೆಯ ಜನತೆ ಉಗ್ರ ಹೊರಾಟಕ್ಕೆ ಇಳಿಯುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು.

ಎಸ್‌ಯುಸಿಐ ಮುಖಂಡ ಭರತಕುಮಾರ ಮಾತನಾಡಿ, ನಗರದ ಪುಲಕೇಶಿ ನಗರ, ನವಭಾಗ, ಗುಮಾಸ್ತ್ ಕಾಲೋನಿ, ಅಕ್ಕಿ ಕಾಲೋನಿ, ಜಯ ಕರ್ನಾಟಕ ಕಾಲೋನಿ, ಬಾಗಾಯತಗಲ್ಲಿ, ಸುಹಾಗ್‌ ಕಾಲೋನಿ, ಪಚ್ಚಾಪುರ ಪೇಟೆ, ಪೈಲ್ವಾನ್‌ ಗಲ್ಲಿ, ಅಲ್ಲಾಪುರ ಓಣಿ, ರಾಜಾಜಿನಗರ, ಖಾಸಗೇರಿ, ಇನಾಮದಾರ ಕಾಲೋನಿ, ನಿಸಾರ ಮಡ್ಡಿ, ಟಿಪ್ಪು ಸುಲ್ತಾನ್‌ ನಗರ ಹೀಗೆ ಹಲವು ಬಡಾವಣೆಗಳ ಬಳಕೆ ಮಾತಿರಲಿ ಕುಡಿಯಲು ಕೂಡ ನೀರಿಲ್ಲದಂತೆ ಪರಿಸ್ಥಿತಿ ಗಂಭೀರ ಸ್ವರೂಪಕ್ಕೆ ಹೋಗಿದೆ. ಮನುಷ್ಯನ ಕನಿಷ್ಠ ಮೂಲಭೂತ ಸೌಲಭ್ಯವನ್ನೂ ಕಲ್ಪಿಸಲು ಜಿಲ್ಲಾಡಳಿತಕ್ಕೆ ಸಾಧ್ಯಗುತ್ತಿಲ್ಲ ಎಂದರೆ ಜನರು ಜೀವಿಸುವುದಾರೂ ಹೇಗೆ? ಹೀಗಾಗಿ ಸರ್ಕಾರ ಕೂಡಲೇ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

Advertisement

ಎಸ್‌ಯುಸಿಐ ಮುಖಂಡ ಸಿದ್ದಲಿಂಗ ಬಾಗೇವಾಡಿ, ಬಾಳೂ ಜೇವೂರ, ಸುನೀಲ, ಶಿವಬಾಳಮ್ಮ ಕೊಂಡಗುಳಿ, ಶೋಭಾ ಯರಗುದ್ರಿ, ಸುರೇಖಾ ಕಡಪಟ್ಟಿ, ಮಹಾದೇವಿ, ಸಂಗೀತಾ, ರೆಣುಕಾ ಸಾಳುಂಕೆ, ಪಿರಾ ಜಮಾದಾರ, ನೂರಜಾನ್‌ ಮೂಳ್ಯಾಳ, ಎಸ್‌.ಎ.ಇನಾಮದಾರ, ಮಮತಾಜಬೇಗಂ, ಹನುಮಂತ ಕಂಠಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next