ವಿಜಯಪುರ: ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸ್ಥಾನಕ್ಕೆ ಮಂಗಳವಾರ ನಡೆಯುತ್ತಿರುವ ಚುನಾವಣೆಯಲ್ಲಿ ಬೆ. 10 ಗಂಟೆಯಿಂದ 11ರವರೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಸೇರಿ ತಲಾ ಒಬ್ಬರು ಸೇರಿದಂತೆ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಹಿಂದುಳಿದ ಅ ವರ್ಗಕ್ಕೆ ಮೀಸಲಿರುವ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನ ಬಬಲೇಶ್ವರ ತಾಲೂಕಿನ ಸಾರವಾಡ ಜಿ.ಪಂ ಸದಸ್ಯೆ ಕಳ್ಳಿಮನಿ ಸುಜಾತಾ ಸೋಮನಾಥ ಹಾಗೂ ಇಂಡಿ ತಾಲೂಕು ನಿವರಗಿ ಜಿ.ಪಂ. ಕ್ಷೇತ್ರದ ಬಿಜೆಪಿ ಸದಸ್ಯ ಭೀಮಾಶಂಕರ್ ಮಹಾದೇವಪ್ಪ ಬಿರಾದಾರ ನಾಮಪತ್ರ ಸಲ್ಲಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಎರಡೂ ಪಕ್ಷಗಳಿಗೆ ಪೂರ್ಣ ಸಂಖ್ಯಾಬಲ ಇಲ್ಲ. 44 ಸದಸ್ಯ ಬಲದ ಜಿ.ಪಂ. ಅಧಿಕಾರದ ಗದ್ದುಗೆ ಏರಲು ಬೇಕಿರುವ ಮ್ಯಾಜಿಕ್ ಸಂಖ್ಯೆ 22.
18 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಬಿಜೆಪಿ ಪಾಳೆಯದ ಮೂವರನ್ನು ಆಪರೇಷನ್ ಮಾಡಿದೆ. ಇತ್ತ 20 ಸದಸ್ಯರನ್ನು ಹೊಂದಿರುವ ಬಿಜೆಪಿ ಪಕ್ಷ ಸೊಮವಾರ ಸಂಜೆ ಕಾಂಗ್ರೆಸ್ ಓರ್ವ ಸದಸ್ಯನಿಂದ ರಾಜೀನಾಮೆ ಕೊಡಿಸಿದೆ. ಇಷ್ಟಲ್ಲದೆ ಕಾಂಗ್ರೆಸ್ ಪಕ್ಷದ ಇನ್ನೂ ಮೂವರು ಸದಸ್ಯರು ತಮ್ಮ ಸಂಪರ್ಕದಲ್ಲಿ ಇರುವುದಾಗಿ ಹೇಳಿಕೊಂಡಿದೆ. ಜೆ
ಡಿಎಸ್ ಪಕ್ಷದ 3 ಸದಸ್ಯರಲ್ಲಿ ಓರ್ವ ಸದಸ್ಯ ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಹತ್ತಿರದ ಸಂಬಂಧಿ. ಹೀಗಾಗಿ ಜೆಡಿಎಸ್ ಪಕ್ಷದ ಓರ್ವ ಸದಸ್ಯ ಬಹಿರಂಗವಾಗಿ ಬಿಜೆಪಿ ಜೊತೆ ಗುರುತಿಸಿ ಕೊಂಡಿದ್ದಾರೆ. ಇರುವ ಏಕೈಕ ಪಕ್ಷೇತರ ಸದಸ್ಯ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಟ್ಟಾ ಬೆಂಬಲಿಗ.
ಹೀಗಾಗಿ ವಿಜಯಪುರ ಜಿ.ಪಂ. ಅಧ್ಯಕ್ಷ ಸ್ಥಾನದ ಚುನಾವಣೆಗಾಗಿ ನಡೆಯುತ್ತಿರುವ ರಾಜಕೀಯ ನಾಟಕ ರಂಜನೀಯತೆ ಪಡೆದು ಕೊಂಡಿದೆ. ಮಧ್ಯಾಹ್ನ 3 ಗಂಟೆಗೆ ನಡೆಯುವ ಮತದಾನ ತೀವ್ರ ಕುತೂಹಲ ಕೆರಳಿಸಿದೆ.