Advertisement

ಯುಡಿಐಡಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಕಾರ್ಯಾಗಾರ

01:02 PM Jul 20, 2019 | Naveen |

ವಿಜಯಪುರ: ವಿಕಲಚೇತನ ವ್ಯಕ್ತಿಗಳಿಗೆ ದೇಶಾದ್ಯಂತ ಬಳಕೆ ಮಾಡಬುದಾದ ವಿಶಿಷ್ಟ ಮಾಹಿತಿ ಒದಗಿಸುವ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ಯೋಜನೆ ಜಾರಿಗೆ ತರಲಾಗುತ್ತಿದೆ. ಸದರಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆಗಸ್ಟ್‌ ಮೊದಲ ವಾರ ಕಾರ್ಯಾಗಾರ ಹಮ್ಮಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಕಲಚೇತನರಿಗೆ ವಿಶಿಷ್ಟ ಗುರುತಿನ ಚೀಟಿ ಯೋಜನೆ ಕುರಿತು ತಮ್ಮ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಕ್ಷೇತ್ರ ಮಟ್ಟದ ಸಿಬ್ಬಂದಿ ವಿಆರ್‌ಡಬ್ಲೂ, ಎಂ.ಆರ್‌.ಡಬ್ಲೂಗಳಿಗೆ ಹಾಗೂ ಅಧಿಕಾರಿಗಳಿಗೆ ಈ ಸೂಚನೆ ನೀಡಿದ ಅವರು, ಸದರಿ ಯೋಜನೆ ಅನುಷ್ಠಾನದ ವಿಷಯವನ್ನು ಗಂಭೕರವಾರಿ ಪರಿಗಣಿಸಬೇಕು. ಈ ವಿಷಯದಲ್ಲಿ ಅಧಿಕಾರಿಗಳು ಯಾವುದೇ ನಿರ್ಲಕ್ಷಕ್ಕೆ ಅವಕಾಶ ಇಲ್ಲದಂತೆ ಕರ್ತವ್ಯ ನಿರ್ವಹಿಸಬೇಕು. ಒಂದೊಮ್ಮೆ ಕರ್ತವ್ಯದಲ್ಲಿ ಲೋಪ ಕಂಡು ಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ರಾಜ್ಯದಲ್ಲಿ ಈಗಾಗಲೇ ಸದರಿ ಯೋಜನೆ ಅನುಷ್ಠಾನಕ್ಕೆ ಬರುತ್ತಿದೆ. ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು, ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ಅಧೀಕ್ಷಕರು ಹಾಗೂ ಅಂಗವಿಕಲರ ಕಲ್ಯಾಣಾಧಿಕಾರಿಗಳು ಸಹಯೋಗದೊಂದಿಗೆ ಈ ಕಾರ್ಯಾಗಾರ ಆಯೋಜಿಸಿ, ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದ ವಿಆರ್‌ಡಬ್ಲೂ-ಎಂಆರ್‌ಡಬ್ಲೂ, ಸಿಡಿಪಿಒಗಳಿಗೆ ತರಬೇತಿ ನೀಡಬೇಕು ಎಂದು ಸೂಚಿಸಿದರು.

ಯಾವುದೇ ಅಂಗವಿಕಲ ವ್ಯಕ್ತಿ ಹೊಸ ಯುಡಿಐಡಿ ಕಾರ್ಡ್‌ ಕೋರಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ, ಸಲ್ಲಿಸಿದ ಎಲ್ಲ ಮಾಹಿತಿ ಸರಿ ಇದ್ದಲ್ಲಿ ತಕ್ಷಣ ವೈದ್ಯಕೀಯ ಪ್ರಾಧಿಕಾರಗಳು ಆನ್‌ಲೈನ್‌ ಪೋರ್ಟ್‌ಲ್ನಲ್ಲಿ ವಿವರ ದಾಖಲಿಸಿ ವೇರಿಫೈಡ್‌ ಎಂದು ಅನುಮೋದಿಸಬೇಕು. ಲೋಪ ಕಂಡು ಬಂದಲ್ಲಿ ಅರ್ಜಿದಾರನಿಗೆ ಮಾಹಿತಿ ಕೋರಿ ಇಮೇಲ್ ಮೂಲಕ ಮರಳಿ ಕಳುಹಿಸಿ, ಈ ಬಗ್ಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಿಗೆ ಇಮೇಲ್ ಮೂಲಕ ಗಮನಕ್ಕೆ ತರಬೇಕು. ಅಂತಹ ವ್ಯಕ್ತಿಗಳನ್ನು ವೈದ್ಯಕೀಯ ಪ್ರಾಧಿಕಾರಗಳ ಮುಂದೆ ಹಾಜರಾಗಲು ದಿನಾಂಕ ನಿಗದಿಪಡಿಸಿ, ವಿಕಲಚೇತನ ವ್ಯಕ್ತಿಯ ತಪಾಸಣೆ ನಡೆಸಿ ವಿಶಿಷ್ಟ ಗುರುತಿನ ಚೀಟಿ ನೀಡುವ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಲೋಪ ಕಂಡು ಬಂದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಇಮೇಲ್ ಸ್ವೀಕೃತವಾದ ತಕ್ಷಣ ಎಂಆರ್‌ಡಬ್ಲೂ, ವಿಆರ್‌ಡಬ್ಲೂ ಮೂಲಕ ಅಂಗವಿಕಲ ವ್ಯಕ್ತಿಗಳನ್ನು ಖುದ್ದು ಸ‌ಂಪರ್ಕಿಸಿ ದಾಖಲೆ ಪಡೆದು, ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಿಸಬೇಕು. ಅಂಗವಿಕಲ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಅಂಗವಿಕಲರ ಸಹಾಯವಾಣಿಯಲ್ಲಿ ಅಂತಹ ಪ್ರಕರಣಗಳನ್ನು ಪ್ರತ್ಯೇಕ ವಹಿಯಲ್ಲಿ ದಾಖಲಿಸಬೇಕು ಎಂದು ಸೂಚಿಸಿದರು.

Advertisement

ಆಗಸ್ಟ್‌ ಮೊದಲ ವಾರದಲ್ಲಿ ಸಿಡಿಪಿಒಗಳು, ಪ್ರತಿ ತಾಲೂಕಿನ 10ರಂತೆ ವಿಆರ್‌ಡಬ್ಲೂ ಹಾಗೂ ಎಂಆರ್‌ಡಬ್ಲೂ ಗಳಿಗೆ ಕಾರ್ಯಾಗಾರ ಆಯೋಜಿಸಿ, ಮಾಹಿತಿ ಹಾಗೂ ತರಬೇತಿ ನೀಡಬೇಕು. ಇದರೊಂದಿಗೆ ವಿಕಲಚೇತನ ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸೌಲಭ್ಯಗಳ ಲಾಭ ದೊರೆಯಬೇಕು. ಅನರ್ಹರು ಈ ಯೋಜನೆಗಳ ಲಾಭ ಪಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ವಿಶೇಷ ಗುರುತಿನ ಚೀಟಿ ಯೋಜನೆಗೆ ಸಂಬಂಧಪಟ್ಟಂತೆ ಏರ್ಪಡಿಸಲಾಗುವ ಕಾರ್ಯಾಗಾರದಲ್ಲಿ ನುರಿತ ತಜ್ಞರನ್ನು ಆಹ್ವಾನಿಸುವಂತೆ ಸೂಚಿಸಿದರು.

ಜಿಲ್ಲೆಯ 616ಕ್ಕೂ ಹೆಚ್ಚು ಗ್ರಾಮಗಳ ಹಾಗೂ 400 ಜನವಸತಿ ಇರುವ ಪ್ರತಿಯೊಬ್ಬ ಅರ್ಹ ವಿಕಲಚೇತನ ಫಲಾನುಭವಿಗಳಿಗೆ ಅವಕಾಶ ವಂಚಿತರಿಗೆ ಸರ್ಕಾರದ ಯೋಜನೆ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಬೇಕು. ಸರ್ಕಾರದ ಯೋಜನೆಗಳು ಪ್ರತಿ ವರ್ಷ ಒಬ್ಬೊಬ್ಬರಿಗೆ ದೊರೆಯುವಂತೆ ಆದ್ಯತೆ ಕಲ್ಪಿಸಬೇಕು. ವಿವಿಧ ಸೌಲಭ್ಯಗಳಿಂದ ವಂಚಿತರಾಗಿರುವ ಫಲಾನುಭವಿಗಳನ್ನು ಗುರುತಿಸಬೇಕು.

ಸಭೆಯಲ್ಲಿ ಅಪರ್‌ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ, ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಕಟ್ಟಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ| ಸಂಪತ್‌ ಗುಣಾರಿ, ಡಿಡಿಆರ್‌ಸಿ ನೋಡಲ್ ಅಧಿಕಾರಿ ಡಾ| ಎಂ.ಸಿ. ಯಡವಣ್ಣವರ, ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಕಲ್ಯಾಣಾಧಿಕಾರಿ ವಿ.ಜಿ. ಉಪಾಧ್ಯೆ, ಎಪಿಡಿ ಗುರುಶಾಂತ ಹಿರೇಮಠ ಹಾಗೂ ಜಿಲ್ಲೆಯ ಐದು ತಾಲೂಕಿನ ಎಂಆರ್‌ಡಬ್ಲೂಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next