Advertisement

ವಿಜಯಪುರ ಮಾರುಕಟ್ಟೆಯಲ್ಲಿ ಕಾರ್ಮಿಕರು ಸಿಗುತ್ತಾರೆ!

10:46 PM May 12, 2019 | Lakshmi GovindaRaj |

ವಿಜಯಪುರ: ನೀವು ಕೃಷಿ ಮಾರುಕಟ್ಟೆ, ಜಾನುವಾರು ಮಾರುಕಟ್ಟೆ ಸೇರಿ ಹಲವು ಮಾರುಕಟ್ಟೆ ನೋಡಿರುತ್ತೀರಿ, ಆದರೆ ರಾಜ್ಯದಲ್ಲಿ ಕಾರ್ಮಿಕರು ದೊರೆಯುವ ಮಾರುಕಟ್ಟೆಯೂ ಇದೆ. ಹಳ್ಳಿಗಳಲ್ಲಿ ನರೇಗಾ ಉದ್ಯೋಗ ಸಿಗದೇ, ದೂರದ ಊರಿಗೆ ಗುಳೆ ಹೋಗುವ ಪರಿಸ್ಥಿತಿಯೂ ಇಲ್ಲದವರು ಇಲ್ಲಿಗೆ ಬರುತ್ತಾರೆ. ನಿತ್ಯವೂ ಕನಿಷ್ಠ ಸಾವಿರಕ್ಕೂ ಅಧಿಕ ಕಾರ್ಮಿಕರು ಉದ್ಯೋಗಕ್ಕಾಗಿ ಅಂಗಲಾಚುವ ದಯನೀಯ ಸ್ಥಿತಿ ಈ ಮಾರುಕಟ್ಟೆಯಲ್ಲಿದೆ!

Advertisement

ಇದು ವಿಜಯಪುರ ಜಿಲ್ಲಾ ಕೇಂದ್ರದಲ್ಲಿರುವ ಕಾರ್ಮಿಕರ ಮಾರುಕಟ್ಟೆ ಸ್ಥಿತಿ. ವಿಜಯಪುರ ಜಿಲ್ಲೆಯ ತಿಕೋಟಾ, ಇಂಡಿ, ಚಡಚಣ, ದೇವರಹಿಪ್ಪರಗಿ, ಬಸವನಬಾಗೇವಾಡಿ ತಾಲೂಕಗಳು ಮಾತ್ರವಲ್ಲ ನೆರೆಯ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಳ್ಳಿಗಳಿಂದಲೂ ಇಲ್ಲಿಗೆ ಕಾರ್ಮಿಕರು ಬರುತ್ತಾರೆ.

ಜಿಲ್ಲೆಯಲ್ಲಿ ಭೀಕರ ಬರ ಇರುವ ಕಾರಣ ಲಕ್ಷಾಂತರ ಜನರು ಈಗಾಗಲೇ ಗುಳೆ ಹೋಗಿದ್ದಾರೆ. ನಿತ್ಯವೂ ವಿಜಯಪುರದ ಅಥಣಿ ರಸ್ತೆಯಲ್ಲಿ ಕೆಲಸ ಅರಸಿ ಬರುವ ಬಹುತೇಕ ಕಾರ್ಮಿಕರಿಗೆ ಕೌಟುಂಬಿಕ ಹೊಣೆಗಾರಿಕೆ ಹಾಗೂ ಗುಳೆ ಹೋಗುವ ಶಕ್ತಿ ಇಲ್ಲ. ಹೀಗಾಗಿ ಅವರು ವಿಜಯಪುರಕ್ಕೆ ಕೆಲಸ ಹುಡುಕಿಕೊಂಡು ಬರುತ್ತಾರೆ.

ನಿತ್ಯವೂ ನಸುಕಿನಲ್ಲೇ ಎದ್ದು ಕೈಯಲ್ಲಿ ಬುತ್ತಿ ಚೀಲ ಹಿಡಿದು, ಗುದ್ದಲಿ-ಸಲಿಕೆ ಹೆಗಲಿಗೆ ಏರಿಸಿ 20-30 ರೂ. ಖರ್ಚು ಮಾಡಿಕೊಂಡು ಜಿಲ್ಲೆಯ ಹಳ್ಳಿಗಳ ಮೂಲೆ ಮೂಲೆಗಳಿಂದ ಬಸ್‌ ಏರಿ ನಗರಕ್ಕೆ ಬರುತ್ತಾರೆ. ಇಲ್ಲಿನ ಅಥಣಿ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ವರ್ಕ್‌ಶಾಪ್‌ ಬಳಿ ಬಂದು ಸೇರುತ್ತಾರೆ.

ಈ ಕಾರ್ಮಿಕರಿಗೆ ಕೆಲಸ ಕೊಡಿಸಲು ಕೆಲವು ಮಧ್ಯವರ್ತಿಗಳಿದ್ದು, ಅವರ ಮೂಲಕ ಕೆಲಸಕ್ಕೆ ಹೋದರೆ ಕಮಿಷನ್‌ ನೀಡಬೇಕು. ಮಧ್ಯವರ್ತಿಗಳಿಲ್ಲದೇ ನೇರವಾಗಿ ಕೆಲಸ ಹುಡುಕಿದರೆ ಸಿಗುವುದು ಖಚಿತ ಇಲ್ಲ. ಹೀಗಾಗಿ ಮಧ್ಯವರ್ತಿಗಳ ಮೂಲಕ ಕೆಲಸಕ್ಕೆ ಹೋಗುವುದು ಅನಿವಾರ್ಯ.

Advertisement

ಕೆಲಸ ಸಿಗದೇ ತಂದಿರುವ ಬುತ್ತಿ ಊಟ ಮಾಡಿ, ಸಾಲ ಮಾಡಿ ತಂಡ ಹಣವನ್ನು ಬಸ್‌ ಚಾರ್ಜ್‌ ಕೊಟ್ಟು ಬರಿಗೈಲಿ ಮನೆಗೆ ಹೋಗಬೇಕು. ಕೆಲಸ ಹುಡುಕಿಕೊಂಡು ಇಲ್ಲಿಗೆ ಬರುವ ಸುಮಾರು 1,500 ಜನರಲ್ಲಿ ಅರ್ಧ ಜನರಿಗೆ ಉದ್ಯೋಗ ದೊರೆಯುವುದೇ ಇಲ್ಲ.

ಇಂಥ ಸಂದರ್ಭದಲ್ಲಿ ನಿತ್ಯವೂ ಅಲೆದರೂ ಕೆಲಸ ಸಿಗದೇ ಕಣ್ಣೀರು ಹಾಕುತ್ತ ಮನೆಗೆ ಮರಳಿದ ಅನುಭವವನ್ನು ಇಲ್ಲಿನ ಎಲ್ಲ ಕಾರ್ಮಿಕರೂ ಹೇಳುತ್ತಾರೆ. ಹೀಗಾಗಿ ಈ ಮಾರ್ಗವಾಗಿ ಹೋಗುವ ಯಾರಾದರೂ ಬೆÂಕ್‌-ಕಾರು ನಿಲ್ಲಿಸಿದರೆ ಸಾಕು ದೈನೇಸಿ ಭಾವದಿಂದ ಇರುವೆಗಳಂತೆ ಮುತ್ತಿಕೊಳ್ಳುತ್ತ ಕೆಲಸಕ್ಕಾಗಿ ಅಂಗಲಾಚುತ್ತಾರೆ.

ಸರ್ಕಾರ, ಜಿಲ್ಲೆಯ ಸಚಿವರು, ಅಧಿಕಾರಿಗಳು ಹೇಳಿಕೊಳ್ಳುವಂತೆ ಹಳ್ಳಿಗಳಲ್ಲಿ ಬಹುತೇಕರಿಗೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಈ ಕಾರ್ಮಿಕರಿಗೆ ಗೊತ್ತಿಲ್ಲ. ಗೊತ್ತಿರುವವರಿಗೆ ನರೇಗಾ ಜಾಬ್‌ ಕಾರ್ಡ್‌ ಇಲ್ಲ. ಜಾಬ್‌ ಕಾರ್ಡ್‌ ಇರುವರಿಗೆ ಗ್ರಾಪಂ ಮಟ್ಟದಲ್ಲಿ ಉದ್ಯೋಗ ದೊರೆಯುತ್ತಿಲ್ಲ.

ನಿಯಮದ ಪ್ರಕಾರ ಉದ್ಯೋಗಕ್ಕೆ ಗ್ರಾಪಂಗೆ ಫಾರ್ಮ್ ನಂ.6ರಲ್ಲಿ ಅರ್ಜಿ ಸಲ್ಲಿಸಬೇಕು. ಅನಕ್ಷರಸ್ಥ ಕಾರ್ಮಿಕರಿಂದ ಲಿಖೀತ ಅರ್ಜಿ ಸಲ್ಲಿಸಲು ಅಸಾಧ್ಯ. ಅರ್ಜಿ ಸಲ್ಲಿಸಲು ಮುಂದಾದರೂ ಸ್ವೀಕರಿಸಲು ಪಿಡಿಒಗಳು ಕಚೇರಿಯಲ್ಲೇ ಇರುವುದಿಲ್ಲ.

ಅರ್ಜಿ ಕೊಡಲು ಪಂಚಾಯತ್‌ ಅಧಿಕಾರಿಗಳನ್ನು ಹುಡುಕಲು ಅಲೆದರೆ ತಮ್ಮ ಕುಟುಂಬದ ಹೊಟ್ಟೆ ತುಂಬಲು ಸಾಧ್ಯವಿಲ್ಲ . ಪಂಚಾಯತ್‌ ಅಧಿಕಾರಿಗಳು ಸಿಕ್ಕರೂ ಮೇಲಧಿಕಾರಿಗಳಿಂದ ನಮಗೆ ಆದೇಶ ಬಂದಿಲ್ಲ, ಅನುದಾನವಿಲ್ಲ ಎಂದು ಸಬೂಬು ಹೇಳಿ ಸಾಗಹಾಕುವ ದುರವ್ಯವಸ್ಥೆಯ ವಾಸ್ತವ ಚಿತ್ರಣ ಬಿಚ್ಚಿಡುತ್ತಾರೆ ಈ ಕಾರ್ಮಿಕರು.

ಕೈ ಬೀಸಿ ಹೋಗುವ ನಾಯಕರು!: ವಿಜಯಪುರ ಜಿಲ್ಲೆಯಲ್ಲಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ, ರಾಜ್ಯ ಸರ್ಕಾರದ ಎಂ.ಸಿ. ಮನಗೂಳಿ, ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ ಸಚಿವರು ಮಾತ್ರವಲ್ಲ ಇಬ್ಬರು ಸಂಪುಟ ದರ್ಜೆ ಸ್ಥಾನ ಪಡೆದಿರುವ ಶಾಸಕರಿದ್ದಾರೆ.

ಜಿಲ್ಲೆಗೆ ಭೇಟಿ ನೀಡುವ ಸಿಎಂ-ಪಿಎಂ ಸೇರಿದಂತೆ ಎಲ್ಲ ಗಣ್ಯರೂ ಈ ಕಾರ್ಮಿಕರು ನಿಲ್ಲುವ ರಸ್ತೆ ಮಾರ್ಗವಾಗಿಯೇ ಕ್ಯೆಬೀಸುತ್ತ ಅನತಿ ದೂರದಲ್ಲಿರುವ ಪ್ರವಾಸಿ ಮಂದಿರಕ್ಕೆ ಹೋಗುತ್ತಾರೆ. ಆದರೆ ಯಾರೊಬ್ಬರೂ ಒಂದೇ ಒಂದು ದಿನ ಕಣ್ತೆರೆದು ನೋಡಿಲ್ಲ, ನಿಂತು ಈ ಕಾರ್ಮಿಕರ ದ್ಯೆನೇಸಿ ಸ್ಥಿತಿ ಆಲಿಸಲು ಮುಂದಾಗಿಲ್ಲ.

ಇನ್ನಾದರೂ ಜಿಲ್ಲೆಯ ಸಚಿವರು, ಅಧಿಕಾರಿಗಳು ಸ್ಥಳದಲ್ಲೇ ಜಿಲ್ಲೆಯ ಎಲ್ಲ ಅಧಿಕಾರಿಗಳ ಸಭೆ ಮಾಡಿ, ಕಾರ್ಮಿಕರ ಸಮಸ್ಯೆ ಅಲಿಸಬೇಕಿದೆ. ನರೇಗಾ ಯೋಜನೆಯಲ್ಲಿ ಉದ್ಯೋಗ ಕೊಡುವುದಕ್ಕೆ ಪ್ರಾಮಾಣಿಕ ಪ್ರಯತ್ನದ ಮೂಲಕ ಉದ್ಯೋಗಕ್ಕೆ ನಗರಕ್ಕೆ ಅಲೆಯುವ ಕಾರ್ಮಿಕರ ದುಸ್ಥಿತಿಗೆ ಮುಕ್ತಿ ನೀಡುವುದು ತುರ್ತಾಗಿ ಆಗಬೇಕಿದೆ.

ಹಳ್ಳಿಗಳಿಂದ ಉದ್ಯೋಗ ಅರಸಿ ಯಾವ ಕಾರ್ಮಿಕರೂ ನಗರಕ್ಕೆ ಬರುವ ಅಗತ್ಯವಿಲ್ಲ. ಕೆಲಸಕ್ಕೆ ಅರ್ಜಿ ಸಲ್ಲಿಸಿದರೆ ಕಾರ್ಮಿಕರಿಗೆ ಕೆಲಸ ಕೊಡದಿದ್ದರೂ ನರೇಗಾ ಯೋಜನೆಯಲ್ಲಿ ಕೂಲಿ ಕೊಡಬೇಕಾಗುತ್ತದೆ. ಈ ಕುರಿತು ಪರಿಶೀಲಿಸುವಂತೆ ನಾಳೆಯೇ ತಾಪಂ ಇಒಗಳಿಗೆ ಸೂಚನೆ ನೀಡುತ್ತೇನೆ.
-ವಿಕಾಸ ಸುರಳಕರ, ಸಿಇಒ ಜಿಪಂ, ವಿಜಯಪುರ

ಪಂಚಾಯ್ತಿಗೆ ಹೋದರೆ ಪಿಡಿಒ ಇರುವುದಿಲ್ಲ. 8-10 ಬಾರಿ ಫಾರ್ಮ್ ನಂ.6 ತುಂಬಿಕೊಟ್ರೂ ಕೆಲಸ ಕೊಟ್ಟಿಲ್ಲ. ಕೆಲಸ ಕೊಡಿ ಎಂದು ಅವರನ್ನು ಹುಡುಕಿಕೊಂಡು ಓಡಾಡಿದರೆ ಕೂಲಿ ಇಲ್ಲವಾಗಿ ಮನೆಯಲ್ಲಿ ಹೆಂಡತಿ-ಮಕ್ಕಳು ಉಪವಾಸ ಬೀಳಬೇಕಾಗುತ್ತದೆ. ನಮ್ಮ ಬಗ್ಗೆ ನೈಜ ಕಾಳಜಿ ಇದ್ದರೆ ಅಧಿಕಾರಿಗಳ ತಂಡ ಇದೇ ಸ್ಥಳಕ್ಕೆ ಬಂದು ನಮ್ಮ ಸಮಸ್ಯೆ ಆಲಿಸಲಿ.
-ಪರಶುರಾಮ ತಿಪ್ಪಣ್ಣ ತಳಕೇರಿ, ಡೋಣೂರು ಗ್ರಾಮ

ಗ್ರಾಮಗಳಲ್ಲಿ ಬಡ ಕೂಲಿ ಕಾರ್ಮಿಕರ ಗೋಳು ಕೇಳುವವರು ಯಾರೂ ಇಲ್ಲ. ಅಧಿಕಾರಿಗಳಿಗೆ ನಿಜಕ್ಕೂ ನಮ್ಮಂಥವರ ಬಗ್ಗೆ ಕಾಳಜಿ ಇದ್ದಲ್ಲಿ ಇಲ್ಲಿಯೇ ಬಂದು ನಮ್ಮ ಮಾಹಿತಿ ಪಡೆದು ನರೇಗಾ ಜಾಬ್‌ ಕಾರ್ಡ್‌ ಕೊಟ್ಟು, ನೇರವಾಗಿ ಹಳ್ಳಿಗಳಲ್ಲೇ ಉದ್ಯೋಗ ಕೊಡಲಿ. ಅಧಿಕಾರಿಗಳ ಹಿಂದೆ ಆಲೆಯುವುದು ನಮ್ಮಿಂದ ಅಸಾಧ್ಯ.
-ದಸ್ತಗೀರಸಾಬ್‌ ಉಮರ್ಜಿ, ಅಹಿರಸಂಗ ಗ್ರಾಮ

ಊರಲ್ಲಿ ಕೆಲಸ ಸಿಕ್ಕಿದ್ರ ನಾವ್ಯಾಕ್ರಿ ಬುತ್ತಿ ಕಟ್ಟಿಗೊಂಡ ನಸಕನ್ಯಾಗ ಬಿಜಾಪುರಕ್‌ ಓಡಿ ಬರ್ತಿವಿ. ಅಧಿಕಾರಿಗಳಿಗೆ ಸುಳ್ಳು ಹೇಳೊದೆ ಕೆಲಸ. ಓಡಿ ಬಂದ್ರ ಇಲ್ಲೇನು ಕೆಲಸ ಸಿಗತ್ತಂತ ಗ್ಯಾರಂಟಿ ಇಲ್ಲ. ಕೆಲಸ ಸಿಗಲಿಲ್ಲಂದ್ರ ಬಸ್‌ ಚಾರ್ಜ್‌ ಮಾಡಿಕೊಂಡು ಬರಿ ಕೈಲಿ ಮನಿಗೆ ಹೋಗಬೇಕು.
-ರಾಜಕುಮಾರ ನಾಟೀಕರ, ಬಿಸನಾಳ ಗ್ರಾಮ

ನರೇಗಾ ಯೋಜನೆ ಬಗ್ಗೆ ನಮಗೆ ಏನೂ ಗೊತ್ತಿಲ್ಲ, ಜಾಬ್‌ ಕಾರ್ಡ್‌ ಇಲ್ಲ. ಮನೆಯಲ್ಲಿ ವೃದ್ಧರು, ಮಕ್ಕಳನ್ನು ಬಿಟ್ಟು ದೂರದ ಊರಿಗೆ ಗುಳೆ ಹೋಗುವ ಪರಿಸಿತಿ§ತಿಯಲ್ಲಿ ನಾವಿಲ್ಲ. ಅಧಿಕಾರಿಗಳು ಈ ಸ್ಥಳಕ್ಕೇ ಬಂದು ನಮ್ಮ ಸಮಸ್ಯೆ ಆಲಿಸಲು ಮುಂದಾಗಬೇಕು.
-ಬಸವರಾಜ ಪಡಸಲಗಿ, ಸವನಹಳ್ಳಿ ಗ್ರಾಮ

* ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next