Advertisement

ಯುವಶಕ್ತಿಗೆ ವಿವೇಕಾನಂದ ಸ್ಫೂರ್ತಿ

12:09 PM Jan 13, 2020 | Naveen |

ವಿಜಯಪುರ: ನವಭಾರತ ನಿರ್ಮಾತೃಗಳಲ್ಲಿ ಶ್ರೇಷ್ಠರೆನಿಸಿದವರಲ್ಲಿ ಸ್ವಾಮಿ ವಿವೇಕಾನಂದರು ಪ್ರಮುಖರು. ಭಾರತ ಕಂಡ ಶ್ರೇಷ್ಠ ಅಧ್ಯಾತ್ಮಿಕ ಚಿಂತಕರು. ಅವರ ಸಾಧನೆ ಕೇವಲ ವೈಯಕ್ತಿಕ ನೆಲೆಗಟ್ಟಿಗೆ ಸೀಮಿತವಾಗಿರದೇ ಸಮಾಜದ ಅಭ್ಯುದಯಕ್ಕೆ ದಾರಿದೀಪವಾಗಿದ್ದು ಯುವ ಶಕ್ತಿಗೆ ಸ್ಫೂರ್ತಿದಾಯಕವಾಗಿದೆ ಎಂದು ಅರಣ್ಯ ಖಾತೆ ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

Advertisement

ರವಿವಾರ ನಗರದ ಕಂದಗಲ್‌ ಹನುಮಂತರಾಯರ ರಂಗಮಂದಿರ ದಲ್ಲಿಜಿಲ್ಲಾಡಳಿತ, ಜಿಪಂ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ರಾಷ್ಟ್ರಿಯ ಯುವ ಸಪ್ತಾಹ, ಯುವ ಸಬಲೀಕರಣ ಕೇಂದ್ರ ಲೋಕಾರ್ಪಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತಾನಾಡಿದರು.

ಪರಮಹಂಸರ ಬೋಧನೆಗಳನ್ನು ಜಗತ್ತಿಗೆ ಸಾರುವ ಸಂಕಲ್ಪವನ್ನು
ವಿವೇಕಾನಂದರು ಹೊಂದಿದ್ದರು. ಅವರ ಅದ್ಬುತ ವಾಕ್ಚಾತುರ್ಯದಿಂದ ಅಪಾರ ಶಿಷ್ಯವರ್ಗ ಅವರನ್ನು ಹಿಂಬಾಲಿಸುತ್ತಿತ್ತು. ಯುವ ಜನರ ಸ್ಫೂರ್ತಿಯ ಸೆಲೆಯಾಗಿರುವ ವಿವೇಕಾನಂದರ ತತ್ವಾದರ್ಶಗಳನ್ನು ಯುವಕರು ಅಳವಡಿಸಿಕೊಂಡು ಗುರಿ ಸಾಧನೆ ಮಾಡಬೇಕು ಎಂದರು.

ಅಜ್ಞಾನ, ಮೂಢನಂಬಿಕೆಗಳನ್ನು, ಹೋಗಲಾಡಿಸಲು ಅನೇಕ ಪ್ರಯತ್ನ ಗಳು, ಸುಧಾರಣಾ ಚಳವಳಿಗಳು ಆರಂಭಗೊಂಡವು. ಅವುಗಳ ಉದ್ದೇಶ ಧರ್ಮ ಮತ್ತು ಸಮಾಜದ ಶುದ್ಧೀಕರಣ ಮಾಡುವುದಾಗಿತ್ತು. ಪುರೋಹಿತಶಾಹಿ ವರ್ಗವನ್ನು ಖಂಡಿಸಿದ ವಿವೇಕಾನಂದರು ಸ್ತ್ರೀ ಸ್ವಾತಂತ್ರ್ಯಕ್ಕೆ ಹೆಚ್ಚಿನ ಮಹತ್ವ ನೀಡಿದವರಲ್ಲಿ ಅಗ್ರಗಣ್ಯರು ಎಂದು ಹೇಳಿದರು.

ವಿಶೇಷ ಉಪನ್ಯಾ ನೀಡಿದ ತಳೆವಾಡ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸಂಗಮೇಶ ಪೂಜಾರಿ, ಜರ್ಮನಿ ದೇಶದ ನೋಬೆಲ್‌ ಪ್ರಶಸ್ತಿ ಪುರಷ್ಕೃತ ರೋಮಿ ರೋಲಾ ಭಾರತವನ್ನು
ನೋಡಬೇಕು ಎಂಬ ತಮ್ಮ ಇಚ್ಛೆಯನ್ನು ರವೀಂದ್ರನಾಥ ಟ್ಯಾಗೋರ್‌ ಅವರನ್ನು ಕೇಳಿದಾಗ ಟ್ಯಾಗೋರರು, ನೀವು ಭಾರತವನ್ನು ನೋಡಲು ಯಾವ ಪ್ರದೇಶಗಳಿಗೂ ಸುತ್ತಬೇಕಿಲ್ಲ.
ಭಾರತದ ಪುಟ್ಟ ಪ್ರತಿರೂಪವೇ ಸ್ವಾಮಿ ವಿವೇಕಾನಂದರು.

Advertisement

ಅವರನ್ನು ಕಂಡರೆ ಸಾಕು ಭಾರತ ದೇಶವನ್ನೇ ನೋಡಿದಂತೆ ಎಂದು ಸಲಹೆ ನೀಡಿದ್ದರು. ಅಷ್ಟರ ಮಟ್ಟಿಗೆ ವಿವೇಕಾನಂದರು ದೇಶಪ್ರೇಮ ಹಾಗೂ ದೇಶೀಯತೆ ವಿಷಯದಲ್ಲಿ ತಮ್ಮ ಛಾಪು ಮೂಡಿಸಿದ್ದರು. ಹೀಗಾಗಿ ಇಂದಿನ ಯುವಶಕ್ತಿಗೆ ವಿವೇಕಾಂದರ ಜೀವನನ ಸ್ಫೂರ್ತಿ ಚೇತೋಹಾರಿಯಾಗಲಿ ಎಂದು ಆಶಿಸಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ನರೇಶಾನಂದ ಸ್ವಾಮಿ ಮಾತನಾಡಿ, ಸ್ವಾಮಿ ವಿವೇಕಾನಂದರ ಸೇವೆ ಮತ್ತು ತ್ಯಾಗವನ್ನು ಜೀವನದ ತತ್ವಾದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೋಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ರಸ್ತೆ ಸುರಕ್ಷಾ ಸಪ್ತಾಹ ಅಂಗವಾಗಿ ಸಾರ್ವಜನಿಕರು ಸಂಚಾರಿ ನಿಯಮ ಪಾಲಿಸುವ ಕುರಿತು ಪೊಲೀಸ್‌ ಇಲಾಖೆ ಭಿತ್ತಿ ಪತ್ರಗಳನ್ನು ಸಚಿವರು ಬಿಡುಗಡೆ ಮಾಡಿದರು. ಸ್ವಾಮಿ ವಿವೇಕಾನಂದರ ಜೀವನ ಆಧಾರಿತ ರಾಷ್ಟ್ರ ಕೃತಿಯನ್ನು ಜಿಲ್ಲಾ ಧಿಕಾರಿ ವೈ.ಎಸ್‌. ಪಾಟೀಲ ವಿದ್ಯಾರ್ಥಿಗಳಿಗೆ ಕಾಣಿಕೆಯಾಗಿ ನೀಡಿದರು. ಸರಕಾರಿ ಪ್ರಥಮ ದರ್ಜೆಯ ಕಾಲೇಜಿನ 10 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಿಸಲಾಯಿತು.

ವಿವಿಧ ಕ್ರೀಡೆಗಳಲ್ಲಿ ಸಾಧಕರನ್ನು ಹಾಗೂ ವಿವೇಕಾಂದರ ವೇಷಧಾರಿಗಳನ್ನು ಸನ್ಮಾನಿಸಲಾಯಿತು. ಎಸ್ಪಿ ಪ್ರಕಾಶ ನಿಕ್ಕಂ, ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಎಸ್‌.ಎಸ್‌. ರಾಜಮಾನ್ಯ, ಪಪೂ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜೆ.ಎಸ್‌. ಪೂಜಾರಿ ಇದ್ದರು.

ಇದಕ್ಕೂ ಮೊದಲು ನಗರದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ
ಅಂಗವಾಗಿ ಸಿದ್ದೇಶ್ವರ ದೇವಸ್ಥಾನದ ಬಳಿ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅವರು ವಿವೇಕಾನಂದರ ಭಾವಚಿತ್ರ ಹಾಗೂ ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಿದರು. ಆನಂದ ಕುಲಕರ್ಣಿ ನೇತೃತ್ವದ ವಂದೇ ಮಾತರಂ ತಂಡದವರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರ ಅಧಿಕಾರಿ ಮಹೇಶ ಪೋತದಾರ ಸ್ವಾಗತಿಸಿದರು. ಹುಮಾಯೂನ್‌ ಮಮದಾಪುರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next