Advertisement

ಗುಣಮಟ್ಟದಲ್ಲಿರಲಿ ಜಿ+2 ಮಾದರಿ ಮನೆ

10:37 AM Jul 04, 2019 | Team Udayavani |

ವಿಜಯಪುರ: ವಿಜಯಪುರ ಪೌರ ಕಾರ್ಮಿಕರಿಗೆ ನಿರ್ಮಿಸುತ್ತಿರುವ ಮನೆಗಳಿಗೆ ಬಳಸುವ ಸಾಮಗ್ರಿಗಳು ಗುಣಮಟ್ಟದಿಂದ ಕೂಡಿರಬೇಕು. ಮನೆಗಳಿಗೆ ಬೇಕಾದ ಪೂರಕ ಕಾಮಗಾರಿಗಳನ್ನು ವ್ಯವಸ್ಥಿತವಾಗಿ ಮಾಡಬೇಕು. ಮನೆಗಳಲ್ಲಿ ಅಳವಡಿಸಲಾಗುವ ವೈರಿಂಗ್‌ ವ್ಯವಸ್ಥೆ, ನಳದ ತೋಟಿ ಸೇರಿದಂತೆ ಇತರೆ ವಸ್ತುಗಳನ್ನು ಗುಣಮಟ್ಟ ಖಾತ್ರಿ ನಂತರವೇ ಖರೀದಿಸಬೇಕು ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಬುಧವಾರ ವಿಜಯಪುರ ನಗರಕ್ಕೆ ಆಗಮಿಸಿದ್ದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಅವರೊಂದಿಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ವಿವಿಧ ಯೋಜನೆಗಳ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮಹಾನಗರ ಪಾಲಿಕೆ ಪೌರ ಕಾರ್ಮಿಕಗೆ ಸರ್ಕಾರ ನಗರದ ಹೊರ ವಲಯದಲ್ಲಿರುವ ಬರಟಗಿ ತಾಂಡಾದಲ್ಲಿ ನಿರ್ಮಿಸುತ್ತಿರುವ ಜಿ+2 ಮಾದರಿ ಮನೆ ನಿರ್ಮಾಣ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆಗಳ ನಿರ್ಮಾಣಕ್ಕೆ ಬಳಸಲಾಗುತ್ತಿರುವ ಸಿಮೆಂಟ್, ಕಬ್ಬಿಣ, ಕಂಕರ್‌, ಇಟ್ಟಿಗೆ ಸೇರಿದಂತೆ ವಿವಿಧ ವಸ್ತುಗಳ ಕುರಿತು ಮಾಹಿತಿ ಪಡೆದು, ಪರಿಶೀಲನೆ ನಡೆಸಿ ಗುಣಮಟ್ಟದ ಖಾತ್ರಿ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಕಾರ್ಮಿಕರಿಗೆ ನಿರ್ಮಿಸುತ್ತಿರುವ ಮನೆಗಳು ಅತ್ಯಂತ ಗುಣಮಟ್ಟದಿಂದ ಕೂಡಿರಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಐದು ವಿಭಾಗಗಳಲ್ಲಿ ಜಿ-ಪ್ಲಸ್‌ ಮನೆಗಳ ನಿರ್ಮಾಣಗೊಳ್ಳುತ್ತಿದ್ದು, ಒಂದೊಂದು ವಿಭಾಗದ ನಡುವೆ ಖಾಲಿ ಉಳಿದಿರುವ ಜಾಗವನ್ನು ವ್ಯರ್ಥ ಮಾಡದೇ ಮಕ್ಕಳಿಗೆ ಆಟದ ಮೈದಾನ ನಿರ್ಮಿಸಬೇಕು. ಅಲ್ಲಿ ಮಕ್ಕಳು ಕುಳಿತು ಆಟವಾಡುವ ರೀತಿಯಲ್ಲಿ ಆ ಜಾಗೆಯನ್ನು ಬಳಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಂತರ ನಗರದ ಐಶ್ವರ್ಯ ನಗರದ ಬಳಿ ಇರುವ ಟೀಚರ್ ಕಾಲೋನಿಯಲ್ಲಿ ಅಮೃತ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ಉದ್ಯಾನವನಕ್ಕೆ ಭೇಟಿ ನೀಡಿದರು. ಪಾಲಿಕೆ ಸದಸ್ಯ ರವೀಂದ್ರ ಲೋಣಿ ಸಚಿವ ಖಾದರ್‌ ಅವರಿಗೆ ಉದ್ಯಾನವನ ಕುರಿತು ಮಾಹಿತಿ ನೀಡಿದರು.

ಉದ್ಯಾನವನಗಳಲ್ಲಿ ಜಿಮ್‌ಗೆ ಅಳವಡಿಸಿರುವ ಪರಿಕರಗಳನ್ನು ಅಳವಡಿಸಿರುವುದು ಸಾರ್ವ ಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಉದ್ಯಾನವನದಲ್ಲಿ ಸುಸಜ್ಜಿತವಾದ ಫುಡ್‌ ಕೋರ್ಟ್‌ ನಿರ್ಮಿಸಬೇಕು. ಇದರಿಂದಾಗಿ ಈ ಬಡಾವಣೆ ಹಾಗೂ ಸಾರ್ವಜನಿಕರಿಗೆ ಸಮಯ ಕಳೆಯಲು ಇಲ್ಲಿಗೆ ಬರಲು ನೆರವಾಗುತ್ತದೆ. ಪಾಲಿಕೆಗೂ ಆದಾಯ ಬರುತ್ತದೆ ಎಂದ‌ರು.

Advertisement

ನಂತರ ಉದ್ಯಾನವನದಲ್ಲಿನ ಜಿಮ್‌ಗಳಲ್ಲಿ ಸ್ವಯಂ ವ್ಯಾಯಾಮ ಮಾಡಿದರು. ಇದರಿಂದ ಸ್ಫೂರ್ತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಅವರು ತಮ್ಮ ಇಳಿವಯಸ್ಸನ್ನೂ ಮರೆತು ಜಿಮ್‌ ಮಾಡಲು ಯತ್ನಿಸಿದ್ದು ಗಮನ ಸೆಳೆಯಿತು. ನಾಗಠಾಣ ಶಾಸಕ ಡಾ| ದೇವಾನಂದ ಚವ್ಹಾಣ, ಮೇಯರ್‌ ಶ್ರೀದೇವಿ ಲೋಗಾವಿ, ಉಪ ಮೇಯರ್‌ ಗೋಪಾಲ ಘಟಕಾಂಬಳೆ, ರಾಜಶೇಖರ ಮಗೀಮಠ, ಶಂಕರ ಕುಂಬಾರ, ಪಾಲಿಕೆ ಆಯುಕ್ತ ಡಾ| ಔದ್ರಾಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next