Advertisement
ವಿಜಯಪುರ ಜಿಲ್ಲಾ ಕೇಂದ್ರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿರುವ ಹಣ್ಣು-ತರಕಾರಿ ಪ್ರತ್ಯೇಕ ಮಾರುಕಟ್ಟೆಯಲ್ಲಿ 3-4 ದಿನಗಳಿಂದ ಹಣ್ಣು-ತರಕಾರಿ ಆವಕ ಆಗುತ್ತಿದೆ. ಆದರೆ, ತರಕಾರಿ, ಹಣ್ಣುಗಳ ಮೂಲ ಬಳಕೆ ಕೇಂದ್ರಗಳಾದ ಹೊಟೇಲ್, ಹಣ್ಣಿನ ಅಂಗಡಿ, ಜ್ಯೂಸ್ ಅಂಗಡಿಗಳು ಮದುವೆ, ಉತ್ಸವಗಳಂಥ ಎಲ್ಲ ವ್ಯವಸ್ಥೆಯೂ ಸ್ತಬ್ಧಗೊಂಡಿವೆ. ಹಣ್ಣು-ತರಕಾರಿ ಬೆಳೆ ಮಾರಾಟಕ್ಕೆ ಸಾಧ್ಯವಾಗದೆ ಅನ್ನದಾತ ಆರ್ಥಿಕ ನಷ್ಟಕ್ಕೆ ಸಿಲುಕಿದ್ದಾರೆ.
Related Articles
Advertisement
ಇನ್ನು ತರಕಾರಿಗಳ ಮಾರುಕಟ್ಟೆ ಕಥೆಯೂ ಹೊರತಾಗಿಲ್ಲ. ಲಾಕ್‌ಡೌನ್‌ನಿಂದ ಮದುವೆ, ಜಾತ್ರೆ, ಉತ್ಸವ, ದಿಬ್ಬಣಗಳಂಥ ಎಲ್ಲ ಕಾರ್ಯಕ್ರಮಗಳಿಗೂ ಸರ್ಕಾರ ನಿರ್ಬಂಧ ಹೆರಿದ್ದು, ಹಸಿ ಮೆಣಸಿನಕಾಯಿ, ಕ್ಯಾಪ್ಸಿಕಮ್, ಟೋಮ್ಯಾಟೋ, ಬದನೆಕಾಯಿ, ಈರುಳ್ಳಿ ಬೆಳೆದ ರೈತರು ಸಂಕಷ್ಟಕ್ಕಿಡಾಗಿದ್ದಾರೆ. ಮಾರಾಟಕ್ಕೆ ಅವಕಾಶ ಇದೆ ಎಂದು ಮಾರುಕಟ್ಟೆಗೆ ತಂದರೂ ಕೊಳ್ಳುವವರಿಲ್ಲದೇ ತರಕಾರಿಯನ್ನು ತಿಪ್ಪೆಗೆ ಸುರಿದು ಹೋಗುತ್ತಿರುವ ದೃಶ್ಯ ಮನ ಕಲುಕುವಂತಿದೆ. ಊರಿಗೆ ಮರಳಲೂ ಹಣ ಇಲ್ಲದ ರೈತರಿಗೆ ಮಧ್ಯವರ್ತಿ ವ್ಯಾಪಾರಿಗಳೇ ಹಣ ನೀಡಿ ಮನೆಗೆ ಕಳಿಸುತ್ತಿದ್ದಾರೆ. ಮತ್ತೆ ಕೆಲವು ರೈತರು ತಮ್ಮ ಹಣ್ಣು-ತರಕಾರಿಗೆ ನಾಳೆ, ನಾಡಿದ್ದು ಬೆಲೆ ಸಿಗುವ ವಿಶ್ವಾಸದಲ್ಲಿ ಮಧ್ಯವರ್ತಿಗಳ ಬಳಿಯೇ ಇರಿಸಿದ್ದ ಹಣ್ಣು-ತರಕಾರಿ ಕೊಳೆಯಲು ಆರಂಭಿಸಿದೆ.
ದುರ್ವಾಸನೆ ಹರಡಿಕೊಂಡಿದ್ದರಿಂದ ರೈತರ ಒಪ್ಪಿಗೆ ಪಡೆದು ತಿಪ್ಪೆಗೆ ಸುರಿಯುತ್ತಿದ್ದು, ಹಂದಿ, ಬಿಡಾಡಿ ದನಗಳ ಪಾಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಪ್ರಕೃತಿ ನಿರ್ಮಿತ ಅನಿರೀಕ್ಷಿತ ಈ ವಿಚಿತ್ರ ಸಂದರ್ಭದಲ್ಲಿ ಸರ್ಕಾರವನ್ನೂ ಹಳಿಯುವಂತಿಲ್ಲ, ಆಡಳಿತಗಾರರನ್ನು ದೂರುವಂತಿಲ್ಲ ಎನ್ನುವಂಥ ಸಂದಿಗ್ಧ ಸ್ಥಿತಿ ನಿರ್ಮಾವಾಗಿದೆ.
ಜಿ.ಎಸ್.ಕಮತರ