Advertisement

ವಿಜಯಪುರ: ಜಿಲ್ಲೆಯ 8 ಸ್ಥಳಗಳಲ್ಲಿ ನಾಳೆ ವ್ಯಾಕ್ಸಿನೇಶನ್‌

05:27 PM Jan 15, 2021 | Nagendra Trasi |

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್‌-19 ವ್ಯಾಕ್ಸಿನ್‌ ವಿತರಣೆಗಾಗಿ ಎಲ್ಲಾ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಸೂಕ್ತ ನಿರ್ವಹಣೆಗೂ ಕ್ರಮ ಕೈಗೊಳ್ಳಲಾಗಿದೆ. ಜ. 16ರಂದು ಮೊದಲ ಹಂತದಲ್ಲಿ 8 ಕೇಂದ್ರಗಳಲ್ಲಿ ವ್ಯಾಕ್ಸಿನೇಶನ್‌ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸುನಿಲಕುಮಾರ ತಿಳಿಸಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಬಸವನಬಾಗೇವಾಡಿ ತಾಲೂಕಿನಲ್ಲಿ 1370, ವಿಜಯಪುರ ತಾಲೂಕಿನಲ್ಲಿ 10487, ಇಂಡಿ ತಾಲೂಕಿನಲ್ಲಿ 928, ಮುದ್ದೇಬಿಹಾಳ ತಾಲೂಕಿನಲ್ಲಿ 1,553, ಸಿಂದಗಿ ತಾಲೂಕಿನಲ್ಲಿ 1482 ಸೇರಿದಂತೆ 15,820 ಫಲಾನುಭವಿಗಳಿದ್ದಾರೆ.

ಒಟ್ಟು 80 ಕೋಲ್ಡ್‌ ಚೈನ್‌ ಸ್ಥಳಗಳು, ಕೇಂದ್ರಗಳು ಇವೆ. ವಿಜಯಪುರ ನಗರದ ಬಿಎಲ್‌ಡಿಇಎ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜಿನಲ್ಲಿ 1000, ಜಿಲ್ಲಾ
ಸರಕಾರಿ ಆಸ್ಪತ್ರೆಯಲ್ಲಿ 400, ಮನಗೂಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 69, ಬ.ಬಾಗೇವಾಡಿಯಲ್ಲಿ 100, ಇಂಡಿಯಲ್ಲಿ 33, ಮುದ್ದೇಬಿಹಾಳದಲ್ಲಿ
100, ಸಿಂದಗಿಯಲ್ಲಿ 139, ದರ್ಗಾ ಪ್ರದೇಶದ ಯುಪಿಎಚ್‌ಸಿ 71 ಸೇರಿ 1912 ಮಂದಿ ಪೋರ್ಟಲ್‌ನಲ್ಲಿ ಹೆಸರು ನೊಂದಾಯಿಸಿದ್ದಾರೆ ಎಂದು ವಿವರಿಸಿದ್ದಾರೆ.

ಪ್ರಥಮ ಹಂತದಲ್ಲಿ ಕೋವಿನ್‌ ತಂತ್ರಾಂಶದಲ್ಲಿ ನೋಂದಾಯಿಸಿದ 1912 ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಆರೋಗ್ಯ
ಕಾರ್ಯಕರ್ತರಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ವ್ಯಾಕ್ಸಿನೇಶನ್‌ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಂದು ಲಸಿಕಾ ಕೇಂದ್ರಗಳಲ್ಲಿ 5 ಅಧಿಕಾರಿಗಳನ್ನು ಒಳಗೊಂಡ 20 ತಂಡಕ್ಕೆ ಸೂಕ್ತ ತರಬೇತಿ ನೀಡಲಾಗಿದೆ. ಪ್ರತಿ ಲಸಿಕಾ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ 3 ಕೊಠಡಿ ಸಿದ್ಧಪಡಿಸಲಾಗಿದೆ.

ಲಸಿಕೆ ಪಡೆಯುವ ಫಲಾನುಭವಿಗಳಿಗೆ ಎಸ್‌ಎಮ್‌ಎಸ್‌ ಮೂಲಕ ಮುಂಚಿತವಾಗಿ ತಿಳಿಸಲಾಗಿದೆ. ವ್ಯಾಕ್ಸಿನ್‌ ನೀಡುವ ಕಾರ್ಯದಲ್ಲಿ  ನಿಯೋಜಿಸಲಾಗಿರುವ ವ್ಯಾಕ್ಸಿನೇಶನ್‌ ಅಧಿಕಾರಿಗಳು ತಪ್ಪದೇ ತಮಗೆ ವಹಿಸಿದ ಕಾರ್ಯವನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸಬೇಕು. ಇದಕ್ಕೆ ತಪ್ಪಿದ್ದಲ್ಲಿ ಅಂತವರ ವಿರುದ್ಧ ಸಾಂಕ್ರಾಮಿಕ ರೋಗ ಕಾಯ್ದೆ 1897 ಅನ್ವಯ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

Advertisement

ಕೋವಿಶೀಲ್ಡ್‌ ವ್ಯಾಕ್ಸಿನ್‌ ಆಗಮನ; ಕೊರೊನಾ ಸೋಂಕು ನಿಗ್ರಹಕ್ಕಾಗಿ ಮೊದಲ ಹಂತದಲ್ಲಿ ಲಸಿಕೆ ಹಾಕಲು ಕೋವಿಶೀಲ್ಡ್‌ ವ್ಯಾಕ್ಸಿನ್‌ಗಳು ಜಿಲ್ಲೆಗೆ ಗುರುವಾರ ಆಗಮಿಸಿವೆ. 9500 ಕೋವಿಶೀಲ್ಡ್‌ ವ್ಯಾಕ್ಸಿನ್‌ ಡೋಸ್‌ ಹೊತ್ತ ವಾಹನ ಶೈತ್ಯೀಕರಣ ಪೆಟ್ಟಿಗೆಗಳಲ್ಲಿ ನಗರಕ್ಕೆ ಆಗಮಿದವು.

ಬಾಗಲಕೋಟೆ ಜಿಲ್ಲೆಯಿಂದ ವಾಹನದಲ್ಲಿ ಬಂದ ಕೋವಿಶೀಲ್ಡ್‌ ಡೋಸ್‌ಗಳನ್ನು ನಗರದಲ್ಲಿರುವ ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆ ಕಚೇರಿಯಲ್ಲಿ ಡಿಎಚ್‌ಒ ಡಾ| ಮಹೇಂದ್ರ ಕಾಪಸೆ ನೇತೃತ್ವದಲ್ಲಿ ಸ್ವೀಕರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next