Advertisement

ಅನ್ನದಾತನಿಗೆ ಆಲಿಕಲ್ಲು ಮಳೆ ಹೊಡೆತ

11:48 AM Apr 19, 2020 | Naveen |

ವಿಜಯಪುರ: ಜಿಲ್ಲೆಯ ಕೋವಿಡ್‌-19 ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರೈತರು ಅದರಲ್ಲೂ ತೋಟಗಾರಿಕೆ ಬೆಳೆಗಾರರು ಕಂಗೆಟ್ಟು ಹೋಗಿದ್ದಾರೆ. ಇದರ ಮಧ್ಯೆ ಇದೀಗ ಬಿರುಗಾಳಿ, ಆಲಿಕಲ್ಲು ಮಳೆ ಅನ್ನದಾತನನ್ನು ಹೈರಾಣು ಮಾಡುತ್ತಿದೆ. ಜಿಲ್ಲೆಯಲ್ಲಿ ಕಳೆದ 3-4 ದಿನಗಳಿಂದ ಮುದ್ದೇಬಿಹಾಳ, ತಾಳಿಕೋಟೆ, ಬಸವನಬಾಗೇವಾಡಿ, ವಿಜಯಪುರ, ದೇವರ ವಿವಿಧೆಡೆ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆಯೂ ಸುರಿಯಲು ಆರಂಭಿಸಿದೆ. ಇದರಿಂದ ಕೊಯ್ಲಿಗೆ ಬಂದಿರುವ ವಿವಿಧ ಹಣ್ಣುಗಳ ತೋಟಗಾರಿಕೆ ಬೆಳೆಗಳಿ ಭಾರಿ ಹಾನಿ ಸಂಭವಿಸಿ ರೈತರು ನಷ್ಟಕ್ಕೆ ಸಿಲುಕಿದ್ದಾರೆ.

Advertisement

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನಂದ್ಯಾಳ ಪಿಯು ಗ್ರಾಮದ ರೈತ ಶ್ರೀಶೈಲ ಮಲ್ಲಪ್ಪ ಹಂಡಿ ಇವರ 12 ಎಕರೆ ಬಾಳೆ, ಮುದ್ದೇಬಿಹಾಳ ತಾಲೂಕಿನ ಮುರಾಳ ಗ್ರಾಮದ ವಿರುಪಾಕ್ಷ ಮುದ್ನಾಳ ಇವರ ತೋಟದಲ್ಲಿನ 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ, ತಾಳಿಕೋಟೆ ತಾಲೂಕಿನ ತಮದಡ್ಡಿ ಗ್ರಾಮದ ಬಸವರಾಜ ಮಲಕೇಂದ್ರಗೌಡ ಸಾಸನೂರ ಅವರ ಜಮೀನು ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಬಾಳೆಬೆಳೆ ನೆಲಕಚ್ಚಿದೆ. ಇದರಿಂದ ಒಂದೆಡೆ ಕೋವಿಡ್‌-19 ಲಾಕ್‌ಡೌನ್‌ ಪರಿಣಾಮ ಕೊಯ್ಲಿಗೆ ಬಂದಿದ್ದರೂ ಮಾರುಕಟ್ಟೆ ಇಲ್ಲದೇ ಕಟಾವು ಮಾಡದೇ ಬಿಟಿxದ್ದ ರೈತರಿಗೆ ಬಿರುಗಾಳಿ, ಆಲಿಕಲ್ಲು ಮಳೆ ಬಾಳೆಯನ್ನು ಹಾಳು ಮಾಡಿ ಕಣ್ಣೀರು ತರಿಸಿದೆ.

ಜಿಲ್ಲೆಯಲ್ಲಿ 510 ಹೆಕ್ಟೇರ್‌ ಬಾಳೆ ಬೆಳೆ ಬೆಳೆಯಲಾಗಿದ್ದು, ಮೇ 31ರವರೆಗೆ ಕೊಯ್ಲಿಗೆ ಬರುವ ಸುಮಾರು 210 ಹೆಕ್ಟೇರ್‌ ಬಾಳೆ ಉಳಿದುಕೊಂಡಿದೆ. ಇದೀಗ ಅಕಾಲಿಕ ಮಳೆಯ ಬಿರುಗಾಳಿ, ಆಲಿಕಲ್ಲು ಮಳೆಗೆ ಸಿಲುಕುತ್ತಿದ್ದು ಅನ್ನದಾತ ಕಂಗಾಲಾಗಿದ್ದಾನೆ. ಹಲವೆಡೆ ಹೂ ಹಾಗೂ ಕಾಯಿ ಕಟ್ಟುವ ಹಂತದಲ್ಲಿರುವ ದಾಳಿಂಬೆ ಬೆಳೆ ಕೂಡ ಬಿರುಗಾಳಿ ಹಾಗೂ ಆಲಿಕಲ್ಲು ಮಳೆ ಹೊಡೆತಕ್ಕ ಹೂ-ಹಣ್ಣು ಉದುರಿ ಬೀಳುತ್ತಿದ್ದು ರೈತರನ್ನು ನಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಮತ್ತೊಂದೆಡೆ ಕೋವಿಡ್‌-19 ಲಾಕ್‌ಡೌನ್‌ ಪರಿಣಾಮ ದೇಶ-ವಿದೇಶಕ್ಕೆ ಕಳಿಸಲಾಗುತ್ತಿದ್ದ ಜಿಲ್ಲೆಯ ಬಹುತೇಕ ತೋಟಗಾರಿಕೆಯ ಎಲ್ಲ ಬೆಳೆಗಳು ಇದೀಗ ಬಿರುಗಾಳಿ, ಆಲಿಕಲ್ಲಿನ ಅಕಾಲಿಕ ಪ್ರಕೃತಿ ವಿಕೋಪಕ್ಕೆ ಸಿಲುಕುತ್ತಿದೆ. ಜಿಲ್ಲೆಯಲ್ಲಿ ಹಸಿದ್ರಾಕ್ಷಿ ಮಾರಾಟದ 80 ಹೆಕ್ಟೇರ್‌ ಬೆಳೆ ಇದ್ದು ಪರಿಸ್ಥಿತಿಯ ಪರಿಣಾಮ ರೈತರು ಒಣ ದ್ರಾಕ್ಷಿ ಮಾಡಲು ಮುಂದಾಗಿದ್ದು ಆಲಿಕಲ್ಲು ಮಳೆ ಹೈರಾಣು ಮಾಡುತ್ತಿದೆ. ಶನಿವಾರ ತಿಕೋಟಾ ತಾಲೂಕಿನ ಬಾಬಾನಗರ, ಬಿಜ್ಜರಗಿ ಭಾಗದಲ್ಲಿ ಆಲಿಕಲ್ಲು ಮಳೆಯಾಗಿದ್ದು, ಹಸಿ ದ್ರಾಕ್ಷಿ ಹಾಗೂ ಒಣದ್ರಾಕ್ಷಿ ಘಟಕದಲ್ಲಿರುವ ದ್ರಾಕ್ಷಿಗೆ ಹಾನಿಯಾಗುವ ಭೀತಿ ಎದುರಾಗಿದೆ.

ಈ ಮಧ್ಯೆ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಾರರ ಸಮಸ್ಯೆ ಸಂಕಷ್ಟ ಅರಿಯಲು ತೋಟಗಾರಿಕೆ ಇಲಾಖೆಗೆ ಅ ಧಿಕಾರಿಗಳು ಜಿಲ್ಲೆಯ ವಿವಿಧ ತಾಲೂಕಗಳ ತೋಟಗಾರಿಕೆ ಬೆಳೆಗಾರರ ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿದ್ದಾರೆ. ಸದರಿ ಗ್ರೂಪ್‌ನಲ್ಲಿ ರೈತರು ತಮ್ಮ ಬೆಳೆ ಹಾನಿ ಮಾತ್ರವಲ್ಲ ಯಾವುದೇ ಸಮಸ್ಯೆ ಕುರಿತು ಹೇಳಿಕೊಂಡರೂ ತಕ್ಷಣ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ.

Advertisement

ಇದೀಗ ಕಳೆದ ಕೆಲ ದಿನಗಳಿಂದ ಪ್ರಕೃತಿ ವಿಕೋಪಕ್ಕೆ ಗುರಿಯಾಗುತ್ತಿರುವ ತೋಟಗಾರಿಕೆ ಬೆಳೆಗಾರರು ಬಿರುಗಾಳಿ, ಆಲಿಕಲ್ಲು ಮಳೆಗೆ ತಮ್ಮ ಬೆಳೆ ಹಾನಿ ಕುರಿತು ಸಚಿತ್ರ ಹಾಗೂ ವಿಡಿಯೋ ಮಾಡಿ ಪ್ರತ್ಯಕ್ಷ ವರದಿಯನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಅಪ್‌ಲೋಡ್‌ ಮಾಡುತ್ತಿದ್ದಾರೆ. ರೈತರು ಬೆಳೆ ಹಾನಿ ಕುರಿತು ಸಚಿತ್ರ ಮಾಹಿತಿ ನೀಡುತ್ತಲೇ ತಕ್ಷಣ ಪ್ರತಿಕ್ರಿಯಿಸುವ ಅಧಿಕಾರಿಗಳು, ಹಾನಿಗೀಡಾದ ರೈತರ ತೋಟಕ್ಕೆ ತಾವು ಭೇಟಿ ನೀಡುವ ದಿನ, ಸಮಯದ ಕುರಿತು ಮಾಹಿತಿ ಹಂಚಿಕೊಂಡು ಸ್ಪಂದನೆ ನೀಡುತ್ತಿದ್ದಾರೆ.

ಎನ್‌ಡಿಆರ್‌ಎಫ್‌ ಹಾಗೂ ಎಸ್‌ಸಿಆರ್‌ಎಫ್‌ ಮಾರ್ಗದರ್ಶಿ ಸೂತ್ರದ ಪ್ರಕಾರ ಕಂದಾಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜಂಟಿ ಸಮೀಕ್ಷೆ ನಡೆಸಬೇಕು. ಭೇಟಿ ವೇಳೆ ಸ್ಥಳದಲ್ಲಿ ಶೇ. 30ಕ್ಕಿಂತ ಬೆಳೆ ಹಾನಿಯಾಗಿದ್ದ ಪಕ್ಷದಲ್ಲಿ ಮಾತ್ರ ಕಂದಾಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.

ಕೋವಿಡ್‌ 19 ಜೊತೆಗೆ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ತೋಟಗಾರಿಕೆ ಬೆಳೆಗಳ ತುರ್ತು ಸಮೀಕ್ಷೆ ನಡೆಸಿ ಕನಿಷ್ಠ ಮಟ್ಟದ ಪರಿಹಾರ ನೀಡಬೇಕು. ರೈತರು ಕೂಡ ಜಗತ್ತಿಗೆ ಬಂದಿರುವ ಗಂಡಾಂತರದ ಈ ಸಂದರ್ಭದಲ್ಲಿ ಆತ್ಮಸ್ಥೈರ್ಯ ಕಳೆದುಕೊಳ್ಳದೇ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಧೈರ್ಯ ತಂದುಕೊಳ್ಳಬೇಕು.
ವಿರೂಪಾಕ್ಷ ಮುದ್ನಾಳ
ಬಾಳೆ ಬೆಳೆಹಾನಿಗೀಡಾದ ರೈತ ಮುರಾಳ, ತಾ| ಮುದ್ದೇಬಿಹಾಳ

ಮೇಲಧಿಕಾರಿಗಳ ಸೂಚನೆಯಂತೆ ಅಕಾಲಿಕ ಮಳೆಯಿಂದ ಬೆಳೆ ಹಾನಿಯಾದ ತೋಟಗಳಿಗೆ ತಕ್ಷಣ ಭೇಟಿ ನೀಡುವ ಕೆಲಸ ಮಾಡುತ್ತಿದ್ದೇವೆ. ರೈತರು ಕೂಡ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದಲ್ಲಿ ಕೂಡಲೇ ತಮ್ಮ ಗಮನಕ್ಕೆ ತರುವಂತೆ ಮನವಿ ಮಾಡುತ್ತೇನೆ.
ಶಫೀಕ್‌ ಬಾವೂರ ಎಎಚ್‌ಒ,
ತೋಟಗಾರಿಕೆ ಇಲಾಖೆ, ಮುದ್ದೇಬಿಹಾಳ

ಜಿಲ್ಲೆಯಲ್ಲಿ ಬೆಳೆಯಲಾಗಿದ್ದ ಬಾಳೆಯಲ್ಲಿ ಈಗಾಗಲೇ ಅರ್ಧಕ್ಕಿಂತ ಹೆಚ್ಚು ಬಾಳೆ ಕಟಾವಾಗಿದೆ. ಈಗ ಕೇವಲ 210 ಹೆಕ್ಟೇರ್‌ ಬಾಳೆ ಮಾತ್ರ ಉಳಿದಿದ್ದು ಪ್ರಕೃತಿ ವಿಕೋಪಕ್ಕೆ ಬಾಳೆ ಹಾನಿಯಾದಲ್ಲಿ ತಕ್ಷಣ ಸಮೀಕ್ಷೆ ಮಾಡುವಂತೆ ನಮ್ಮ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸಂತೋಷ ಇನಾಮದಾರ
ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ,
ವಿಜಯಪುರ

ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next