ವಿಜಯಪುರ: ಕಳೆದ ಒಂದು ದಶಕದಿಂದ ಉತ್ತರ ಕರ್ನಾಟಕದಲ್ಲಿ ಪ್ರಾದೇಶಿಕ ಅಸಮಾನತೆ ಕೂಗು ಎದ್ದಿದ್ದು, ಪ್ರತ್ಯೇಕ ರಾಜ್ಯಕ್ಕೆ ಕೂಗು ಹಾಕುವ ಮಟ್ಟಕ್ಕೆ ಬೆಳೆದು ನಿಂತಿದೆ. ಪ್ರತ್ಯೇಕ ಧ್ವನಿ ಮೊಳಗಿದಾಗೊಮ್ಮೆ ಆಳುವ ಸರ್ಕಾರಗಳು ಸಬೂಬು ಹೇಳುವ ಮೂಲಕ ತೇಪೆ ಹಾಕುವ ಕೆಸಲ ಮಾಡುತ್ತವೆ. ಇಂಥ ಸ್ಥಿತಿಯಲ್ಲಿ ಜಾಗತಿಕ ಮಟ್ಟದಲ್ಲಿ ನಿಬ್ಬೆರಗು ಮೂಡಿರುವ ಸ್ಮಾರಕಗಳು ಸೇರಿದಂತೆ ಪ್ರವಾಸಿಯೋಗ್ಯ ನೂರಾರು ತಾಣಗಳಿಂದಾಗಿ ಪ್ರವಾಸಿಗರ ಸ್ವರ್ಗ ಎನಿಸಿರುವ ವಿಜಯಪುರ ಜಿಲ್ಲೆ ಪ್ರವಾಸೋದ್ಯಮ ಸೊರಗಿ ನಿಂತಿದೆ.
Advertisement
ಸೌಲಭ್ಯಗಳ ಮಾತಿರಲಿ ಕನಿಷ್ಠ ಪ್ರವಾಸೋದ್ಯಮ ಖಾತೆ ವಹಿಸಿಕೊಳ್ಳುವ ಸಚಿವರು ಕೂಡ ವಿಜಯಪುರ ಜಿಲ್ಲೆಗೆ ಭೇಟಿ ನೀಡುವಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ಬಸವನಾಡಿನ ಕುರಿತು ಇರುವ ತಾತ್ಸಾರಕ್ಕೆ ಸಾಕ್ಷಿ ನೀಡುತ್ತದೆ.
Related Articles
Advertisement
ಆಗೊಮ್ಮೆ ಈಗೊಮ್ಮೆ ಪ್ರವಾಸೋದ್ಯಮ ಸಚಿವರಾದವರು ಅನ್ಯ ಕೆಲಸದ ನಿಮಿತ್ಯ ಬಂದರೂ ವಿಶೇಷ ಪ್ರವಾಸಿಗರಂತೆ ಬಂದು ಹೋಗುವ ಕಾರಣ ನಿರ್ಲಕ್ಷ್ಯದ ಕುರಿತು ಅಸಹನೆ ವ್ಯಕ್ತವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ನೂರಾರು ವರ್ಷಗಳಿಂದ ನೂರಾರು ಸ್ಮಾರಕಗಳು ತಮ್ಮ ಚರಿತ್ರೆ ಸಾರುತ್ತಿದ್ದು, ತಮ್ಮ ಕುರಿತು ನಿರ್ಲಕ್ಷ್ಯದ ಕಣ್ಣೀರ ಕಥೆಯನ್ನೂ ಹೇಳುತ್ತವೆ.
ಈ ಹಂತದಲ್ಲಿ ಯಡಿಯೂರಪ್ಪ ಸರ್ಕಾರದಲ್ಲಿ ಒಲ್ಲದ ಮನಸ್ಸಿನಲ್ಲಿ ಪ್ರವಾಸೋದ್ಯಮ ಸಚಿವರಾಗಿರುವ ಸಿ.ಟಿ. ರವಿ ಅವರು ಜಿಲ್ಲೆಗೆ ಈ ಇಲಾಖೆ ಸಚಿವರಾಗಿ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ. ಇತರೆ ಸಚಿವರಂತೆ ಜಿಲ್ಲೆಯ ಪ್ರವಾಸೋದ್ಯಮವನ್ನು ವಿಶೇಷ ಪ್ರವಾಸಿಯಂತೆ ಸರ್ಕಾರಿ ಹಣದಲ್ಲಿ ಪ್ರವಾಸ ಮಾಡಿ ಹೋಗದೇ ಜಿಲ್ಲೆಯ ಪ್ರವಾಸೋದ್ಯಮ ಅನುಭವಿಸುತ್ತಿರುವ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.
ಇಲಾಖೆಯೇ ಮೊದಲ ಸಮಸ್ಯೆ: ಪ್ರವಾಸಿಗರ ಸ್ವರ್ಗ ಎನಿಸಿದ್ದರೂ ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಗೆ ಕಳೆದ 16 ವರ್ಷಗಳಿಂದ ಇಲಾಖೆಯ ಮೂಲ ಅಧಿಕಾರಿ ಇಲ್ಲದೇ ಪ್ರಭಾರಿಗಳಲ್ಲೇ ಪ್ರವಾಸೋದ್ಯಮ ಇಲಾಖೆ ಕಂಗೆಟ್ಟಡಿದೆ. 16 ವರ್ಷಗಳಿಂದ ಶಿಕ್ಷಣ, ಪಶು ಸಂಗೋಪನೆ, ಅರಣ್ಯ, ಸಾಂಖೀಕ ಸೇರಿದಂತೆ ಅನ್ಯ 8 ಇಲಾಖೆಗಳ ಅಧಿಕಾರಿಗಳ ಪ್ರಭಾರ ನಡೆಸಿದ್ದುಇಂದಿಗೂ ಪ್ರಭಾರಿ ಅಧಿಕಾರಿಯೇ ಇದ್ದಾರೆ. ಹೀಗಾಗಿ ಇಲಾಖೆಯೇ ಸಮಸ್ಯೆಯ ಆಗರವಾಗಿದೆ. ಪ್ರಚಾರ ಫಲಕಗಳೇ ಇಲ್ಲ: ಇನ್ನು ಜಿಲ್ಲೆಯಲ್ಲಿ ನೂರಾರು ಸ್ಮಾರಕಗಳಿದ್ದರೂ ಪ್ರಚಾರದ ಕೊರತೆ ಎದುರಿಸುತ್ತಿದೆ. ಸ್ಮಾರಕಗಳ ಹಿರಿಮೆ ಸಾರಲು ಫಲಕಗಳೇ ಇಲ್ಲ, ರೈಲ್ವೇ ನಿಲ್ದಾಣದ ಮೂತ್ರಾಲಯ ಪಕ್ಕದಲ್ಲಿ ಮರೆಯಾಗಿರುವ ಪ್ರಚಾರ ಫಲಕ, ಜಿಲ್ಲಾಧಿಕಾರಿ ನಿವಾಸದ ಆವರಣದ ಪ್ರವಾಸಿ ಸ್ವಾಗತ ಫ್ಲೆಕ್ಸ್ ಮರೆಯಲ್ಲಿ ಕುಳಿತಿದೆ. ಏನೆಲ್ಲ ಪ್ರಚಾರದ ಕೊರತೆ ಮಧ್ಯೆಯೂ ಕಳೆದ 10 ವರ್ಷಗಳಲ್ಲಿ 1.12 ಕೋಟಿ ಪ್ರವಾಸಿಗರಿಂದ ಗೋಲಗುಮ್ಮಟ ವೀಕ್ಷಿಸಿದ್ದು, 7-8 ಕೋಟಿ ರೂ. ಆದಾಯ ಬಂದಿದೆ. 5 ವರ್ಷದಲ್ಲಿ ಅಲಮಟ್ಟಿಗೆ 53.82 ಲಕ್ಷ ಜನರು ಭೇಟಿ ನೀಡಿದ್ದಾರೆ . ಈ ಕೊರತೆ ಮಧ್ಯೆಯೂ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಎಡಿಸಿ ಪ್ರಸನ್ನ ಅವರ ವಿಶೇಷ ಕಾಳಜಿ ಕಾರಣ ವಿಜಯಪುರ ಪ್ರವಾಸೋದ್ಯಮಕ್ಕೆ ಪ್ರತ್ಯೇಕ ವೆಬ್‌ಸೈಟ್, ಅಪ್ ಭಾಗ್ಯ ದಕ್ಕಿದ್ದು, ದೇಶ-ವಿದೇಶಿ ಪ್ರವಾಸಿಗರನ್ನು ಸೆಳೆಯುವಲ್ಲಿ ಕೊಂಚ ಮಟ್ಟಿಗೆ ಸಹಾಯವಾಗಿದೆ. ವಿದೇಶಿ ಪ್ರವಾಸಿಗರಿಂದಲೂ ಟೀಕೆ: ಈಚೆಗೆ ಸರ್ಕಾರ ವಿಶ್ವ ಮಟ್ಟದಲ್ಲಿ ರಾಜ್ಯದ ಪ್ರವಾಸೋದ್ಯಮದ ಮೇಲೆ ಬೆಳಕು ಚೆಲ್ಲುವುದಕ್ಕೆ ಆಯೋಜಿಸಿದ್ದ ಟೂರಿಸಂ ಹಬ್ ಪ್ರಯುಕ್ತ ಜಿಲ್ಲೆಗೆ ಭೇಟಿ ನೀಡಿದ್ದ ವಿದೇಶಿ ಪ್ರವಾಸಿ ತಜ್ಞರು, ಆದಿಲ್ ಶಾಹಿ ಅರಸರ ವಾಸ್ತು ವಿನ್ಯಾಸಕ್ಕೆ ಮೂಕವಿಸ್ಮಿತರಾಗಿದ್ದಾರೆ. ಆದರೆ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ, ಶೌಚಾಲಯ, ಪ್ರಚಾರದ ಕೊರತೆ, ಅತಿರೇಕದ ಪ್ಲಾಸ್ಟಿಕ್ ಬಳಕೆಗೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಸ್ಮಾರಕಗಳ ಒತ್ತುವರಿ, ಬೀದಿನಾಯಿ-ಬಿಡಾಡಿ ದನಗಳನ್ನು ಕಂಡು ಕನಿಕರ ಪಟ್ಟಿದ್ದಾರೆ. ಪ್ರವಾಸಿಗರಿಗೆ ಮಾಹಿತಿ ನೀಡಲು ಇಂಗ್ಲಿಷ್ ಸೇರಿ ಪ್ರಮುಖ ಭಾಷೆಯಲ್ಲಿ ಪ್ರಚಾರ ಫಲಕಗಳಿಲ್ಲ. ಪಾಶ್ಚಾತ್ಯ ಶೈಲಿ ಶೌಚಾಲಯ, ಉತ್ತಮ ರಸ್ತೆ, ಪಾದಚಾರಿ ಮಾರ್ಗದಂಥ ಸೌಲಭ್ಯಗಳಿಲ್ಲ. ವಿಶ್ವದ ಮೊದಲ ಪ್ರಜಾಪ್ರಭುತ್ವವಾದಿ ಬಸವಣ್ಣ ಜಗತ್ತಿಗೆ ಪರಿಚಯ ಮಾಡಿಕೊಡುವ ಕೆಲಸವೇ ಆಗುತಿಲ್ಲ ಎಂದು ಸರ್ಕಾರವೇ ಅಧ್ಯಯನಕ್ಕೆ ಕಳಿಸಿದ್ದ ವಿದೇಶಿಗರೇ ಅಭಿಪ್ರಾಯಪಟ್ಟಿದ್ದಾರೆ. ಸ್ಮಾರಕ, ಪ್ರವಾಸೋದ್ಯಮ ಕಚೇರಿ ಅತಿಕ್ರಮಣ: ಐತಿಹಾಸಿಕ ಸ್ಮಾರಕಗಳನ್ನು ಸರ್ಕಾರಿ ಕಚೇರಿಗಳೇ ಅತಿಕ್ರಮಿಸಿದ್ದು, ಜಿಲ್ಲಾಧಿಕಾರಿ ಕಚೇರಿ ಜಿಲ್ಲಾ ಕೇಂದ್ರದಲ್ಲಿರುವ ಬಹುತೇಕ ಕಚೇರಿಗಳು, ಅಧಿಕಾರಿಗಳ ನಿವಾಸಗಳು ಸ್ಮಾರಕಗಳಲ್ಲೇ ಇವೆ. ಇನ್ನು ಪ್ರವಾಸಿಗರ ಹೆಸರಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿಯಾದ ಅರಸ ಮಹಲ್ ಅಪರ ಜಿಲ್ಲಾಧಿಕಾರಿ ಮನೆಯಾಗಿದೆ. 1.50 ಕೋಟಿ ರೂ. ವೆಚ್ಚದಲ್ಲಿ ದುರಸ್ತಿಯಾದ ಪ್ರವಾಸಿ ಪ್ಲಾಜಾ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಾಗಿದ್ದು, ಪ್ರವಾಸಿ ಪ್ಲಾಜಾ ಬ್ಲಾಕ್-2ರಲ್ಲಿ ಇಗ್ನೋ ಕೇಂದ್ರಕ್ಕೆ ನೀಡಲಾಗಿದೆ. ಮತ್ತೂಂದು ಕಟ್ಟಡವನ್ನು ಬಿಜೆಪಿ ಮೇಲ್ಮನೆ ಸದಸ್ಯ ಅರುಣ ಶಹಪೂರ ನನಗೆ ಕೊಡಿ ಎಂದು ಬೇಡಿಕೆ ಇರಿಸಿದ್ದಾರೆ. ಸಭ್ಯರು ಬಾರದ ಮಯೂರ ಹೋಟೆಲ್: ಇನ್ನು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ನಡೆಯುತ್ತಿರುವ ಮಯೂರ ಆದಿಲ್ ಶಾಹಿ ಹೋಟೆಲ್ ಮದ್ಯ ವ್ಯಸನಿಗಳ
ಕೇಂದ್ರವಾಗುತ್ತಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ದಂಡ ವಿಧಿಸುವ ಮಟ್ಟಕ್ಕೆ ಬಂದು ನಿಂತಿದೆ. ಪರಿಣಾಮ ಸರ್ಕಾರಿ ಒಡೆತನದ ರೆಸ್ಟೋರೆಂಟ್-ಲಾಡ್ಜಿಂಗ್ ವ್ಯವಸ್ಥೆ ಇರುವ ಈ ಹೋಟೆಲ್ ಗೆ ಮಹಿಳೆಯರು, ಮಕ್ಕಳಿರುವ ಪ್ರವಾಸಿಗರು ವಾಸ ಮಾಡಲು ಮುಜುಗುರ ಪಡುವಂತಹ ಸ್ಥಿತಿ ಇದೆ. ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕೆ ಸರ್ಕಾರ ನೀಡಿರುವ ಪ್ರವಾಸಿ ವಾಹನವನ್ನು ಸ್ಥಳೀಯ ಲಾಬಿಯಿಂದಾಗಿ ನಿಗಮದ ಹೋಟೆಲ್ ಅಧಿಕಾರಿಗಳು ಬೆಂಗಳೂರಿಗೆ ತಳ್ಳಿದ್ದಾರೆ. ಇದರಿಂದ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಹೆಚ್ಚಿನ ವೆಚ್ಚದ ಖಾಸಗಿ ಸೇವೆ ಗತಿಯಾಗಿದೆ. ಹೀಗೇಕೆ ಎಂದು ಪ್ರಶ್ನಿಸುವ ಸಾರ್ವಜನಿಕರನ್ನು ವಾಹನ ತರಿಸುವಂತೆ ಪತ್ರ ಬರೆದುಕೊಡಿ. ಜೊತೆಗೆ ನೀವೆ ವಾಹನ ಉಸ್ತುವಾರಿ ನೋಡಿಕೊಳ್ಳಿ ಎಂದು ಅಧಿಕಾರಿಗಳು ಹೊಣೆಗೇಡಿ ಹೇಳಿಕೆ ನೀಡುವ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದ್ದಾರೆ. ಎಎಸ್‌ಐ ಕಚೇರಿ ಬೇಕು: ಇನ್ನು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪುರಾತತ್ವ-ಪ್ರವಾಸೋದ್ಯಮ ಸಮನ್ವಯ ಕೊರತೆ ಪ್ರಮುಖವಾಗಿ ತೊಡಕಾಗಿದ್ದು, ಪುರಾತ್ವ ಇಲಾಖೆ ತಕರಾರಿನಿಂದ ಜಿಲ್ಲೆಯ ಅಭಿವೃದ್ಧಿಗೆ ಬಿಡುಗಡೆಯಾದ ಹಣ ಸರ್ಕಾರಕ್ಕೆ ಮರಳುತ್ತಿದೆ. ನಗರದಲ್ಲಿ ನೂರಾರು ಸ್ಮಾರಕಗಳಿದ್ದರೂ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ವೃತ್ತ ಕಚೇರಿ ಧಾರವಾಡದಲ್ಲಿದೆ. ಹಂಪಿಯಲ್ಲಿ ಇರುವಂತೆ ಎಎಸ್‌ಐ, ಎಎಸ್‌ಕೆ ಉಪ ವಲಯ ಕಚೇರಿಗಳು ವಿಜಯಪುರ ಜಿಲ್ಲೆಗೆ ಬೇಕು ಎಂಬ ಬೇಡಿಕೆ ಗಟ್ಟಿಧ್ವನಿಯಾಗುವತ್ತ ಸಾಗಿದೆ. ವಿಶ್ವಪರಂಪರೆ ಪಟ್ಟಿ ಸೇರಬೇಕು: ಇನ್ನು ರಾಜ್ಯದಲ್ಲಿ 1986ರಲ್ಲಿ ಹಂಪಿ, 1987ರಲ್ಲಿ ಪಟ್ಟದಕಲ್ಲು ಸ್ಮಾರಕಗಳು ವಿಶ್ವ ಪರಂಪರೆ ಪಟ್ಟಿ ಸೇರಿದ್ದು, ವಿಶ್ವವಿಖ್ಯಾತ ಗೋಲಗುಮ್ಮಟಕ್ಕೆ ಈ ಭಾಗ್ಯ ಸಿಕ್ಕಿಲ್ಲ. ಯುನೆಸ್ಕೋ ಮಾನದಂಡ ಹೊಂದಿದ್ದರೂ ಸೂಕ್ತ ಪ್ರಸ್ತಾವನೆ ಸಲ್ಲಿಸುವಲ್ಲಿ ವಿಫಲವಾಗಿದೆ. ಕಾರಣ ಕೇವಲ ಯುನೆಸ್ಕೋ ಪ್ರವಾಸಿ ಪಟ್ಟಿಯಲ್ಲಿ ಮಾತ್ರ ಸ್ಥಾನ ಪಡೆದಿದೆ. ಈ ಕುರಿತು ಸಮಗ್ರ ಯೋಜನಾ ವರದಿ ಸಲ್ಲಿಕೆಗೆ ಬೇಕು ಕನಿಷ್ಠ 15 ಲಕ್ಷ ರೂ. ಬೇಕಿದ್ದು, ಅನುದಾನ ಹೊಂದಿಸುವವರಿಲ್ಲ. ವರದಿ ಸಿದ್ಧವಾದ ಬಳಿಕ ರಾಜ್ಯ ಮುಖ್ಯ ಕಾರ್ಯದರ್ಶಿ ಮೂಲಕ ಕೇಂದ್ರಕ್ಕೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಬೇಕು. ಕೇಂದ್ರದ ಮೇಲೆ ಒತ್ತಡ ಹೇರಬೇಕಿದೆ. ರಾಜ್ಯದ ಕೇಂದ್ರ ಸಚಿವರು-ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ವಿದ್ಯುತ್ ಬಿಲ್ಲ ಕಟ್ಟದ ದುಸ್ಥಿತಿ: ಇನ್ನು ವಿಶ್ವವಿಖ್ಯಾತ ಗೋಲಗುಮ್ಮಟ ಸ್ಮಾರಕಕ್ಕೆ ರಾತ್ರಿವೇಳೇ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಆದರೆ ಅದರ ವಿದ್ಯುತ್ ಬಿಲ್ ಕಟ್ಟದೇ ಗೋಲಗುಮ್ಮಟ ಕತ್ತಲಲ್ಲಿ ಕಾಲಕಳೆಯುವಂತಾಗಿದೆ. ವಿದ್ಯುತ್ ಬಿಲ್ ಕಟ್ಟಲು ಪುರಾತತ್ವ-ಪ್ರವಾಸೋಸದ್ಯಮ ಇಲಾಖೆ ಕೈ ಚಲ್ಲಿದ್ದರಿಂದ ನಗರ ಪಾಲಿಕೆ 30 ಸಾವಿರ್ ವಿದ್ಯುತ್ ಬಾಕಿ ಕಟ್ಟಿದ್ದರೂ ಗುಮ್ಮಟಕ್ಕೆ ಬೆಳಕಿನ ವ್ಯವಸ್ಥೆ ಆಗಿಲ್ಲ. ಯಾತ್ರಿ ನಿವಾಸಗಳಿಲ್ಲ: ಪ್ರವಾಸಿಗರ ಸ್ವರ್ಗದಲ್ಲಿ ಯಾತ್ರಿ ನಿವಾಸಗಳೇ ಇಲ್ಲ. ಲಾಡ್ಜ್ಗಳಲ್ಲಿ ಉಳಿದುಕೊಳ್ಳಲಾಗದ ಬಡ ಪ್ರವಾಸಿಗರಿಗೆ ವರವಾಗಿರುವ ಯಾತ್ರಿ ನಿವಾಸ ಜಿಲ್ಲೆಯಲ್ಲಿ ಒಂದೇ ಒಂದು ಕಡೆ ಇದ್ದು, ಸ್ವಾತಂತ್ರ್ಯ ಪಡೆದ 72 ವರ್ಷಗಳಲ್ಲಿ ವಿಜಯಪುರ ನಗರದಲ್ಲಿ ಯಾತ್ರಿ ನಿವಾಸಗಳಿಲ್ಲ. ಗೈಡ್‌ಗಳಿಗೆ ಭದ್ರತೆ ಬೇಕಿದೆ: ಪ್ರವಾಸಿ ರಾಯಭಾರಿಗಳು ಎಂದು ಕರೆಸಿಕೊಳ್ಳುವ ಗೈಡ್‌ಗಳು ಬಟ್ಟೆಯಲ್ಲಿ ಶಿಸ್ತು ಹೊಂದಿದ್ದರೂ ಸೂಕ್ತ ಪ್ರವಾಸಿಗರಿಲ್ಲದೇ ಹೊಟ್ಟೆಗಿಲ್ಲದೇ ದೈನೇಸಿ ಬದುಕು ಸವೆಸುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ 70ಕ್ಕೂ ಹೆಚ್ಚು ತರಬೇತಿ ಪಡೆದ ಗೈಡ್‌ಗಳಿದ್ದರೂ 8 ಗೈಡ್ ಗಳು ಮಾತ್ರ ಸೇವೆ ಮಾಡುತ್ತಿದ್ದಾರೆ. ಸೇವಾ ಭದ್ರತೆ ಇಲ್ಲದ ಗೈಡ್‌ಗಳಿಗೆ ಸರ್ಕಾರಿ ಅನುದಾನ ಪಡೆದ ಪ್ರತಿ ಹೋಟೆಲ್‌ನಲ್ಲಿ ಗೈಡ್ ನೇಮಕ ಕಡ್ಡಾಯ ಮಾಡಿದಲ್ಲಿ ಇಬ್ಬರಿಗೂ ಅನುಕೂಲವಾಗಲಿದೆ. ಸ್ವರ್ಣರಥ ದರ್ಶನವಾಗಲಿ: ಇನ್ನು ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸರ್ಕಾರ ಕೆಎಸ್‌ಟಿಡಿಸಿ ಮೂಲಕ ಆರಂಭಿಸಿರುವ ಸ್ವರ್ಣರಥ ಸೇವೆ ಹಂಪಿ, ಬಾದಾಮಿಗೆ ಬಂದರೂ ಗುಮ್ಮಟ ದರ್ಶಿಸದೇ ಸ್ಥಗಿತಗೊಂಡಿದೆ. ಮಹಾರಾಷ್ಟ್ರದ ಡೆಕ್ಕನ್-ಓಡಿಸಿ ರೈಲು ವಿಜಯಪುರಕ್ಕೆ ಬರುತ್ತಿದ್ದು, ಇದೀಗ ಮತ್ತೆ ಆರಂಭಗೊಳ್ಳುತ್ತಿರುವ ಗೋಲ್ಡನ್ ಚಾರಿಯೇಟ್ ಗುಮ್ಮಟ ನಗರಿಗೆ ಬರುವಂತಾಗಬೇಕಿದೆ. ಕಾರು ಕೊಂಡವ ಸಾಲಗಾರ: ಸರ್ಕಾರ ಪ್ರವಾಸೋದ್ಯಮ ಹಾಗೂ ಪ್ರವಾಸಿಗರಿಗೆ ಸಾರಿಗೆ ಸೌಲಭ್ಯ ಕಲ್ಪಿಸುವ ಹಾಗೂ ನಿರುದ್ಯೋಗಿಗಳಿಗೆ ತಲಾ 3 ಲಕ್ಷ ರೂ. ರಿಯಾಯ್ತಿ ಕೊಟ್ಟು ಸುಮಾರು 400-500 ಕಾರು ಕೊಡಿಸಿದ್ದು, ಪ್ರವಾಸಿಗರಿಗೆ ಒಂದೂ ಲಭ್ಯವಿಲ್ಲ. ಕಾರು ಕೊಂಡವರೂ ನೆಮ್ಮದಿಯ ಜೀವನ ನಡೆಸುವ ಬದಲು ಸಾಲಗಾರರಾಗಿ ಕಂಗೆಟ್ಟಿದ್ದಾರೆ. ಟಾಂಗಾ ಸಮಸ್ಯೆ: ಇನ್ನು ರಾಜ್ಯದ ಪ್ರವಾಸಿ ತಾಣಗಳಲ್ಲೇ ಪಾರಂಪರಿಕ ಜಟಕಾ ಸಾರಿಗೆ ಹೊಂದಿರುವ ನಗರ ಎನಿಸಿರುವ ವಿಜಯಪುರದಲ್ಲಿ ಟಾಂಗಾ ಮಾಲೀಕರು ಪ್ರವಾಸಿಗರಿಲ್ಲದೇ ಕಂಗೆಟ್ಟಿದ್ದಾರೆ. ಸರ್ಕಾರ ಕುದುರೆ-ಜಟಕಾ ಸೇರಿ 4 ಲಕ್ಷ ರೂ. ಬಂಡವಾಳ ಹಾಕಿದರೂ ಗಂಜಿಗೆ ಗತಿ ಇಲ್ಲದ ಸ್ಥಿತಿ ಇದೆ. ಹೀಗಾಗಿ ಟಾಂಗಾ ಮಾಲೀಕರಿಗೆ ಕುದುರೆಗೆ ಮೇವು, ಕಣಿಕೆ ಹೊಂದಿಸಲಾಗದ ಬಡ ಟಾಂಗಾ ಮಾಲೀಕರಿಗೆ ಪರಂಪರೆ ಸಾರಿಗೆ ಉಳಿಸಲು ಸರ್ಕಾರ ನೆರವಾಗಬೇಕಿದೆ.