Advertisement

Vijayapura: ಕಾಣೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆ

04:54 PM May 13, 2024 | Vishnudas Patil |

ವಿಜಯಪುರ : ಭಾನುವಾರ ಮನೆಯಿಂದ ಕಾಣೆಯಾಗಿದ್ದ ಮೂವರು ಮಕ್ಕಳು ಸೋಮವಾರ ಶವವಾಗಿ ಪತ್ತೆಯಾಗಿರುವ ದುರಂತ ಘಟನೆ ಜರುಗಿದೆ.

Advertisement

ವಿಜಯಪುರ ನಗರ ಇಂಡಿ ರಸ್ತೆ ಪ್ರದೇಶದ ಒಳಚರಂಡಿ ತ್ಯಾಗ ನೀರು ಸಂಸ್ಕರಣಾ ಘಟಕದ ನೀರಿನಲ್ಲಿ ಮೂರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ.

ಮೃತ ಮಕ್ಕಳನ್ನು ಗದಗ ಮೂಲದ 9 ವರ್ಷದ ಅನುಷ್ಕಾ ಅನಿಲ ದಹಿಂದೆ, 7 ವರ್ಷದ ವಿಜಯ ಅನಿಲ ದಹಿಂದೆ ಹಾಗೂ ವಿಜಯಪುರದ ಮಹೀರ ಶ್ರೀಕಾಂತ ಜಾನಮೌಳಿ ಎಂದು ಗುರುತಿಸಲಾಗಿದೆ.

ಅನುಷ್ಕಾ ಹಾಗೂ ವಿಜಯ ಬೇಸಗೆ ರಜೆಗಾಗಿ ವಿಜಯಪುರದ ಮಾವನ ಮನೆಗೆ ಬಂದಿದ್ದರು. ಭಾನುವಾರ ಬೆಳಗ್ಗೆ ಮನೆ ಮುಂದೆ ಬಂದಿದ್ದ ಒಂಟೆ ಸವಾರಿ ಮಾಡಿದ್ದ ಮಕ್ಕಳು, ನಂತರ ಒಂಟೆಗಳನ್ನು ಹುಡುಕಿಕೊಂಡು ಮನೆ ಜನರು ಹತ್ತಿರದ ಚಾಬುಕಸಾಬ್ ದರ್ಗಾ ಬಳಿ ಹೋಗಿದ್ದರು. ಅಲ್ಲಿ ಒಂಟೆಗಳು ಕಾಣದಿದ್ದಾಗ ಮನೆಗೆ ಬಾರದೇ ಮೂರೂ ಮಕ್ಕಳು ಕಾಣೆಯಾಗಿದ್ದವು.

ಮಕ್ಕಳು ಬಹಳ ಹೊತ್ತಾದರೂ ಮನೆಗೆ ಬಾರದ ಕಾರಣ ಆತಂಕಗೊಂಡ ಪೋಷಕರು ಅಕ್ಕಪಕ್ಕದ ಸಿಸಿ ಕೆಮರಾ ಪರಿಶೀಲನೆ ನಡೆಸಿದ್ದಾರೆ. ಬಳಿಕ ನಗರದ ಎಪಿಎಂಸಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

Advertisement

ಕುಟುಂಬಸ್ಥರು ಹಾಗೂ ಪೊಲೀಸರು ಮಕ್ಕಳಿಗಾಗಿ ಹುಡುಕಾಟ ನಡೆಸಿದಾಗ ಸೋಮವಾರ ಒಳಚರಂಡಿ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕದ ನೀರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಪೋಷಕರ ಪ್ರತಿಭಟನೆ : ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣೆಯಂಥ ಅಪಾಯಕಾರಿ ಘಟಕ ಇದ್ದರೂ ವಿಜಯಪುರ ಮಹಾನಗರ ಪಾಲಿಕೆ ಸೂಕ್ತ ಸುರಕ್ಷಿತ ಕ್ರಮ ಕೈಗೊಂಡಿಲ್ಲ ಎಂದು ಮೃತ ಮಕ್ಕಳ ಪೋಷಕರು, ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಘಟಕದ ಸುತ್ತಲೂ ತಂತಿಬೇಲಿ ಅಳವಡಿಕೆ, ತಡೆಗೋಡೆ ನಿರ್ಮಾಣ, ಸ್ಥಳದಲ್ಲಿ ಕಾವಲುಗಾರರ ವ್ಯವಸ್ಥೆ ಸೇರಿದಂತೆ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಹೀಗಾಗಿ ತಮ್ಮ ಮಕ್ಕಳ ಸಾವು ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪೋಷಕರು ಮಕ್ಕಳ ಶವಗಳನ್ನು ಹೊರ ತೆಗೆಯಲು ಆಕ್ಷೇಪ ವ್ಯಕ್ತಪಡಿಸಿ, ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ, ಮೃತ ಮಕ್ಕಳ ಶವ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next