Advertisement

ಬಸವನಾಡಿನೊಂದಿಗೆ ಸುಷ್ಮಾ ನಂಟು

10:29 AM Aug 08, 2019 | Naveen |

ವಿಜಯಪುರ: ವಿದೇಶಾಂಗ ಸಚಿವೆಯಾಗಿ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ವಿಶಿಷ್ಟ ಹೆಸರು ತಂದುಕೊಟ್ಟಿದ್ದ ಸುಷ್ಮಾ ಸ್ವರಾಜ್‌ ಇನ್ನಿಲ್ಲ ಎಂಬ ಸುದ್ದಿ ಕೇಳಿ ಬಸವನಾಡು ಆಘಾತಗೊಂಡಿದೆ. ಬಿಜೆಪಿಯನ್ನು ದೇಶದೆಲ್ಲೆಡೆ ಬಲಿಷ್ಠವಾಗಿ ಕಟ್ಟುವ ಕಾರ್ಯದ ಸಂದರ್ಭದಲ್ಲಿ ದಶಕದಳಿದ ವಿಜಯಪುರ ಜಿಲ್ಲೆಗೂ ಎರಡು ಬಾರಿ ಬಂದಿದ್ದರು. ಜಿಲ್ಲೆಯ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಒಡನಾಟ ಹೊಂದಿದ್ದನ್ನು ಜಿಲ್ಲೆಯ ಜನರು ಸ್ಮರಿಸುವಂತಾಗಿದೆ.

Advertisement

ವಿಜಯಪುರ ಮಹಾನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್‌ ಅವರ ವ್ರತ್ತ ಉದ್ಘಾಟನೆಗಾಗಿ 2002ರ ಅಕ್ಟೋಬರ್‌ 2ರಂದು ಬೃಹತ್‌ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸದರಿ ಸಮಾರಂಭಕ್ಕೆ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರೊಂದಿಗೆ ಸುಷ್ಮಾ ಸ್ವರಾಜ್‌ ಕೂಡ ಬಂದಿದ್ದರು. ಅನಂತಕುಮಾರ ಕೂಡ ಜೊತೆಗಿದ್ದರು. ಶಿವಾಜಿ ಮಹಾರಾಜರ ವೃತ್ತ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ್ದ ಸುಷ್ಮಾ ಸ್ವರಾಜ್‌, ಹಿಂದೂ ಧರ್ಮ ಸಂರಕ್ಷಣೆಯಲ್ಲಿ ಛತ್ರಪತಿ ಶಿವಾಜಿ ಅವರು ತೋರಿದ ಅದ್ವಿತೀಯ ಧೈರ್ಯ, ಸಾಹಸಗಳನ್ನು ಬಣ್ಣಿಸಿದ್ದರು.

ಅಂದಿನ ಸಮಾರಂಭಕ್ಕೆ ದೇಶದ ಬಿಜೆಪಿ ಘಟಾನುಘಟಿ ನಾಯಕರ ದಂಡಿನೊಂದಿಗೆ ಬಂದಿದ್ದರೂ ಸುಷ್ಮಾ ಸ್ವರಾಜ್‌ ಅವರ ವಿದ್ವತ್‌ ಪೂರ್ಣ ಭಾಷಣ ನೆರೆದವರಲ್ಲಿ ಮೈರೋಮಾಂಚನ ಮೂಡಿಸುವಂತಿತ್ತು. ಓರ್ವ ಮಹಿಳೆಯಾಗಿ ರಾಜಕೀಯದಲ್ಲೂ ಸಭ್ಯತೆ ಹಾಗೂ ವಿಶಿಷ್ಟ ಗೌರ ಸಂಪಾದಿಸಿದ್ದ ಅವರು ನಮ್ಮೊಂದಿಗೆ ಕೆಲ ಕ್ಷಣ ಕಳೆದಿದ್ದರು ಎಂಬುದು ನಮ್ಮ ಪುಣ್ಯ ಎಂದು ಶಿವಾಜಿ ವೃತ್ತ ಸ್ಥಾಪನೆ ಕಾರ್ಯಕ್ರಮ ಸಂಘಟಕರಲ್ಲಿ ಪ್ರಮುಖರಾಗಿದ್ದ ವಿಜಯಕುಮಾರ ಚವ್ಹಾಣ ಸ್ಮರಿಸುತ್ತಾರೆ. ಇದಾದ ಬಳಿಕ 2013 ರಲ್ಲಿ ಜರುಗಿದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ಅಪ್ಪು ಪಟ್ಟಣಶೆ‌ಟ್ಟಿ ಅವರ ಚುನಾವಣೆ ಪ್ರಚಾರ ಸಭೆಗೆ ಬಂದಿದ್ದರು. ನಗರದ ದರ್ಬಾರ್‌ ಹೈಸ್ಕೂಲ್ನಲ್ಲಿ ಜರುಗಿದ ಚುನಾವಣೆ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಜನತೆಗೆ ಮನವಿ ಮಾಡಿದ್ದರು. ವೇದಿಕೆ ಬರುತ್ತಲೇ ಮುಜೇ ತೋಡಾ ಗರಮ್‌ ಪಾನಿ ಮಿಲೆಗಾ ಎಂದು ಕಾರ್ಯಕರ್ತದಲ್ಲಿ ವಿನಯದಿಂದಲೇ ಕೇಳಿದ್ದರು. ಕೂಡಲೇ ಅಂದು ಬಿಜೆಪಿ ನಗರ ಘಟಕದ ಅಧ್ಯಕ್ಷರಾಗಿದ್ದ ಶಿವರುದ್ರ ಬಾಗಲಕೋಟ ತಾವು ಪಕ್ಕದಲ್ಲಿದ್ದ ಮನೆಗೆ ತೆರಳಿ ಸುಷ್ಮಾ ಅವರಿಗಾಗಿ ಕುಡಿಯಲು ಬಿಸಿ ನೀರು ತಂದುಕೊಟ್ಟಿದ್ದನ್ನು ಸ್ಮರಿಸುತ್ತಾರೆ.

ನಂತರ ಭಾಷಣ ಮಾಡಲು ವೇದಿಕೆ ಬಂದ ಸುಷ್ಮಾ ಅವರು, ತಮ್ಮ ಮುಂದಿನ ಡಯಾಸ್‌ ಎತ್ತರವಾಗಿದ್ದು, ಮೈಕ್‌ ಅದಕ್ಕಿಂತ ಎತ್ತರವಾಗಿತ್ತು. ಡಯಾಸ್‌ ಹಾಗೂ ಮೈಕ್‌ ತಮಗಿಂತ ಎತ್ತರ ಇದ್ದ ಕಾರಣ ಮೈಕ್‌ ಮುಜಸೆ ಭೀ ಬಡಾ ಹೈ ಎಂದು ತಮ್ಮ ಕುಬ್ಜ ದೇಹದ ಕುರಿತು ತಮಗೆ ತಾವೇ ಹಾಸ್ಯ ಮಾಡಿಕೊಂಡಿದ್ದರು. ಐತಿಹಾಸಿಕ ವಿಜಯಪುರ ಮಹಾನಗರ ನನ್ನ ಅಣ್ಣತಮ್ಮಂದಿರಿಗೆ ನನ್ನ ನಮಸ್ಕಾರ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ್ದರಿಂದ ನೆರದ ಜನರು, ಬಿಜೆಪಿ ಕಾರ್ಯಕರ್ತರು ಚಪ್ಪಾಳೆಯ ಸುರಿಮಳೆ ಗೈದಿದ್ದರು.

ಸುಷ್ಮಾ ಸ್ವರಾಜ್‌ ಅವರ ನಿಧನ ನನ್ನ ಮನಸ್ಸನ್ನು ಘಾಷಿಗೊಳಿಸಿದೆ. ದೆಹಲಿ ಮುಖ್ಯಮಂತ್ರಿಯಾಗಿ, ವಾಜಪೇಯಿ ಹಾಗೂ ಮೋದಿ ಅವರ ಸರ್ಕಾರದಲ್ಲಿ ಸಚಿವೆಯಾಗಿ ಸಮರ್ಥವಾಗಿ ತಮ್ಮ ಕೆಲಸ ನಿರ್ವಹಿಸಿದ್ದರು. 1999ರ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ನಾನು ಕೂಡ ಆವರೊಂದಿಗೆ ಪ್ರಚಾರದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತ್ತು ಎಂಬುದು ನನ್ನ ಪಾಲಿನ ಅತಿದೊಡ್ಡ ಸೌಭಾಗ್ಯ ಎಂದು ಮೇಲ್ಮನೆ ಸದಸ್ಯ ಅರುಣ ಶಹಾಪುರ ಕಂಬನಿ ಮಿಡಿದಿದ್ದಾರೆ. ಸಂಸದ ರಮೇಶ ಜಿಗಜಿಣಗಿ ಅವರು ಸಂಸತ್‌ನಲ್ಲಿ ಸುಷ್ಮಾ ಸ್ವರಾಜ್‌ ಅವರ ನಡೆ, ದಿಟ್ಟತನ, ವಿರೋಧಿ ಪಾಳೆಯದಲ್ಲಿದ್ದಾಗ ಆಡಳಿತ ಸರ್ಕಾರವನ್ನು ಪೇಚಿಗೆ ಸಿಲುಕಿಸುವ ಜಾಣ್ಮೆಯ ಮಾತುಗಾರಿಕೆ, ಅಧಿಕಾರದಲ್ಲಿದ್ದಾಗ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದ ಪರಿ ನಿಜಕ್ಕೂ ಅಚ್ಚರಿ ಮೂಡಿಸುತ್ತಿತ್ತು ಎಂದು ಬಣ್ಣಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next