ವಿಜಯಪುರ: ತಾವು ನಿತ್ಯವೂ ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜಿಗೆ ತೆರಳಲು ತಮ್ಮ ಗ್ರಾಮಕ್ಕೆ ಅಗತ್ಯ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ಗ್ರಾಮದ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಸೋಮದೇವರಹಟ್ಟಿ ಗ್ರಾಮದಿಂದ ನಿತ್ಯವೂ ತಿಕೋಟಾ, ವಿಜಯಪುರಕ್ಕೆ ಪ್ರೌಢಶಾಲೆ, ಕಾಲೇಜು ಶಿಕ್ಷಣ ಪಡೆಯಲು ನೂರಾರು ವಿದ್ಯಾರ್ಥಿಗಳು ಬಸ್ ಅಗತ್ಯವಿದೆ. ನಿತ್ಯವೂ ನಾವು ಶಾಲೆ-ಕಾಲೇಜುಗಳಿಗೆ ತೆರಳಲು ಸೂಕ್ತ ಬಸ್ ಸಂಚಾರ ಇಲ್ಲ. ಈ ಕುರಿತು ಹಲವು ಬಾರಿ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗದ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ದೂರಿದರು.
ವಿಜಯಪುರ ನಗರದಿಂದ ಬೆ.9ಗಂಟೆಗೆ ತಿಕೋಟಾ ಮಾರ್ಗವಾಗಿ ಸೋಮದೇವರಹಟ್ಟಿಗೆ ಒಂದು ಬಸ್ ಮಾತ್ರ ಬರುತ್ತದೆ. ಬೆಳಗ್ಗೆ 8 ಗಂಟೆಗೆ ಶಾಲಾ-ಕಾಲೇಜುಗಳು ಪ್ರಾರಂಭವಾಗುವ ಕಾರಣ ವಿದ್ಯಾರ್ಥಿಗಳಿಗೆ ಪಾಠಕ್ಕೆ ಸರಿಯಾಗಿ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಸೋಮದೇವರಹಟ್ಟಿ ಗ್ರಾಮದಲ್ಲಿ 35ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿತ್ಯವೂ ವಿಜಯಪುರ-ತಿಕೋಟ ಪಟ್ಟಣಕ್ಕೆ ಶಿಕ್ಷಣಕ್ಕಾಗಿ ಸೂಕ್ತ ಬಸ್ ಸೌಲಭ್ಯ ಇಲ್ಲದ ಕಾರಣ, ಖಾಸಗಿ ವಾಹನ ಟಂಟಂ, ಜೀಪ್ ಸೇರಿದಂತೆ ನಿತ್ಯವೂ ನೂರಾರು ರೂ. ಖರ್ಚು ಮಾಡಿ ಶಿಕ್ಷಣ ಪಡೆಯುವಂತಾಗಿದೆ. ಇದಲ್ಲದೇ ಖಾಸಗಿ ವಾಹನಗಳು ಹಣದ ಆಸೆಗೆ ಮಿತಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವ ಕಾರಣ ಅಪಾಯಕರ ಸ್ಥಿತಿ ಇರುತ್ತದೆ. ಇದಲ್ಲದೇ ಖಾಸಗಿ ವಾಹನಗಳು ಸಮಯಕ್ಕೆ ಸರಿಯಾಗಿ ಸಂಚಾರ ನಡೆಸದ ಕಾರಣ ವಿದ್ಯಾರ್ಥಿಗಳಿಗೆ ಹಣ ಕೊಟ್ಟರೂ ಸೂಕ್ತ ಸಾರಿಗೆ ಸೌಲಭ್ಯ ಇಲ್ಲವಾಗಿದೆ ಎಂದು ದೂರಿದರು.
ಹೀಗಾಗಿ ಬೆಳಗ್ಗೆ 6:30 ಸೋಮದೇವರಹಟ್ಟಿ ಗ್ರಾಮದಿಂದ ತಿಕೋಟ ಮಾರ್ಗವಾಗಿ ವಿಜಯಪುರ ಮಹಾನಗರಕ್ಕೆ ಬಸ್ ಸಂಚಾರ ಸೌಲಭ್ಯ ಕಲ್ಪಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ಇದಲ್ಲದೇ ಬಹುತೇಕ ಶಾಲಾ-ಕಾಲೆಜುಗಳು ಮಧ್ಯಾಹ್ನ 1:30ಗಂಟೆಗೆ ಬಿಡಲಿವೆ. 2 ಗಂಟೆಗೆ ವಿಜಯಪುರ, ತಿಕೋಟಾ ಪಟ್ಟಣಗಳಿಂದ ಸೋಮದೇವರಹಟ್ಟಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.