ವಿಜಯಪುರ : ಜಿಲ್ಲೆಗೆ ನಿಮ್ಮಂಥ ಕೆಲವೇ ಕೆಲವರಿಂದ ಕೆಟ್ಟ ಹೆಸರು ಬಂದಿದ್ದು, ಭವಿಷ್ಯದಲ್ಲಿ ಯಾವುದೇ ರೀತಿಯ ಅಪರಾಧ ಕೃತ್ಯದಲ್ಲಿ ತೊಡಗ ಕೂಡದು. ಒಂದೊಮ್ಮೆ ನೀವು ಬಾಲ ಬಿಚ್ಚಿದರೆ ಅದನ್ನು ಕತ್ತಿರುವ ಪರಿ ನಮಗೂ ಗೊತ್ತಿದೆ ಎಂದು ಎಸ್ಪಿ ಎಚ್.ಡಿ.ಆನಂದಕುಮಾರ ಜಿಲ್ಲೆಯ ರೌಡಿಶೀಟರ್ ಗಳಿಗೆ ಎಚ್ಚರಿಕೆ ನೀಡಿದ ಪರಿ ಇದು.
ಶನಿವಾರ ಸಂಜೆ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ರೌಡಿ ಶೀಟರ್‍ಗಳ ಪರೇಡ್ ಸಂದಭದಲ್ಲಿ ರೌಡಿಗಳಿಗೆ ಈ ಎಚ್ಚರಿಕೆ ನೀಡಿದ ಅವರು, ಪರೇಡ್ ಸಂದರ್ಭದಲ್ಲಿ ದುರಂಹಕಾರದಿಂದ ಅಶಿಸ್ತು ಪ್ರದರ್ಶಿಸಿದ ಕೆಲವು ರೌಡಿಗಳಿಗೆ ಲಾಠಿ ರುಚಿ ನೀಡಿ, ಕೆಲವರಿಗೆ ಕಪಾಳ ಮೋಕ್ಷ ಮಾಡಿಯೇ ಎಚ್ಚರಿಕೆ ನೀಡಿದರು.
ವಿಜಯಪುರ ಉಪ ವಿಭಾಗ ಪೊಲೀಸ್ ಠಾಣೆಗಳ ರೌಡಿಶೀಟರ್ ಗಳನ್ನು ಪ್ರತ್ಯೇಕವಾಗಿ ಒಬ್ಬೊಬ್ಬರ ಜಾತಕ ಜಾಲಾಡಿದ ಎಸ್ಪಿ ಆನಂದಕುಮಾರ, ಯಾವ ಪ್ರಕರಣದಲ್ಲಿ ಭಾಗಿಯಾಗಿದ್ದೀಯ ಎಂದು ಪ್ರಶ್ನಿಸುತ್ತಲೇ ಇನ್ನು ನಿನ್ನ ಕಾನೂನು ಬಾಹಿರವಾದ ಯಾವುದೇ ಚಟುವಟಿಕೆ ನಡೆಸುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.
ಇಂದು ನೀಡಿದ ಈ ಕಟ್ಟುನಿಟ್ಟಿನ ಸೂಚನೆ ಹೊರತಾಗಿಯೂ ನಿಮ್ಮ ಚಟುವಟಿಕೆಯ ಬಾಲ ಬಿಚ್ಚಿದ್ದು ಕಂಡುಬಂದಲ್ಲಿ, ಸಮಾಜದಲ್ಲಿ ಶಾಂತಿ ಕದಡುವ ಹಾಗೂ ದೌರ್ಜನ್ಯ ಎಸಗಿದ್ದು ಕಂಡು ಬಂದಲ್ಲಿ ಜಿಲ್ಲೆಯ ಪೊಲೀಸರು ಇನ್ನು ಸುಮ್ಮನಿರುವುದಿಲ್ಲ ಎಂದು ಖಡಕ್ಕಾಗಿ ಎಚ್ಚರಿಸಿದರು.
ಕೊಲೆ, ಕೊಲೆ ಯತ್ನ ಸೇರಿದಂತೆ ಗಂಭೀರ ಪ್ರಕರಣಗಲ್ಲಿ ಭಾಗಿಯಾದ ಆರೋಪಿಗಳಿಗಂತೂ ಕೆನ್ನೆಗೆ ಬಾರಿಸಿಯೇ ಪ್ರಶ್ನಿಸಿದ ಎಸ್ಪಿ, ತಮ್ಮದೇ ಸ್ನೇಹಿತನನ್ನು ಸುಮ್ಮನೆ ಕೊಲೆ ಮಾಡಿದ್ದಾಗಿ ರೌಡಿಶೀಟರ್ ಹೇಳುತ್ತಿದ್ದಂತೆ ಕೆಂಡವಾಗಿ, ಲಾಠಿ ರುಚಿ ತೋರಿಸಿದರು.
ಅಕ್ರಮ ಶಸ್ತಾಸ್ತ್ರ ಸಂಗ್ರಹ, ಸಾಗಾಟ, ಮಾರಾಟ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ವಿಚಾರಿಸಿದ ಎಸ್ಪಿ, ಅಕ್ರಮ ಶಸ್ತ್ರಾಸ್ತ್ರಗಳನ್ನು ಎಲ್ಲಿಂದ ಗನ್ ತರುತ್ತೀರಿ, ಯಾರು ಪೂರೈಕೆದಾರ, ಈಗಲೂ ಸಕ್ರೀಯವಾಗಿದ್ದೀರೇನು ಎಂದೆಲ್ಲ ವಿಚಾರಿಸಿ, ತಕ್ಷಣದಿಂದ ನಿಮ್ಮ ಇಂಥ ಎಲ್ಲ ಅಕ್ರಮ ಹಾಗೂ ಕಾನೂನು ಬಾಹಿರ ಚಟುವಟಿಕೆ ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು.
ಪ್ರತಿಯೊಬ್ಬರು ಸದ್ಯ ಮಾಡುತ್ತಿರುವ ಉದ್ಯೋಗದ ಮಾಹಿತಿ ಪಡೆದ ಎಸ್ಪಿ ಆನಂದಕುಮಾರ, ಜಿಲ್ಲೆಗೆ ಉತ್ತಮ ಕೀರ್ತೀ ತರುವುದಕ್ಕಾಗಿ ಮೈಮುರಿದು ಸಕ್ರಮವಾಗಿ ಉದ್ಯೋಗ ಮಾಡಬೇಕು ಎಂದು ನಿರ್ದೇಶನ ನೀಡಿದರು. ಅಲ್ಲದೇ ನಿಮ್ಮ ಉತ್ತಮ ನಡೆಯಿಂದ ನಿಮ್ಮ ಕುಟುಂಬ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಶಾಂತಿ ನೆಲೆಸಲು ನಿಮ್ಮ ನಡೆಯನ್ನು ತಕ್ಷಣದಿಂದಲೇ ಬದಲಿಸಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಇದಲ್ಲದೇ ಸ್ಥಳದಲ್ಲಿ ಹಾಜರಿದ್ದ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ ಎಸ್ಪಿ, ನಿಮ್ಮ ವ್ಯಾಪ್ತಿಯಲ್ಲಿ ಶಾಂತಿ ನೆಲೆಸಲು ರೌಡಿಗಳನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಬೇಕು. ಅಲ್ಲದೇ ಸದರಿ ರೌಡಿಶೀಟರ್‍ಗಳ ವಿರುದ್ಧ ಎಲ್ಲ ಪ್ರಕರಣಗಳ ವಿವರ, ಪ್ರಸ್ತುತ ಫೋಟೋ, ಅವರ ಚಲನವಲನ-ಚಟುವಟಿಕೆಗಳ ಮೇಲೆ ನಿಗಾ ಇರಿಸಬೇಕು ಎಂದು ತಾಕೀತು ಮಾಡಿದರು.
ವಿಜಯಪುರ ಪೊಲೀಸ್ ಉಪ ವಿಭಾಗ ವ್ಯಾಪ್ತಿಯ ವಿಜಯಪುರ ಗಾಂಧಿಚೌಕ, ಗೋಲಗುಂಬಜ್, ಆದರ್ಶನಗರ, ಜಲನಗರ, ಎಪಿಎಂಸಿ, ವಿಜಯಪುರ ಗ್ರಾಮೀಣ, ಬಬಲೇಶ್ವರ, ತಿಕೋಟಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 91 ಜನ ರೌಡಿ ಶೀಟರ್‍ಗಳ ಪರೇಡ್‍ನಲ್ಲಿ ಪಾಲ್ಗೊಂಡಿದ್ದರು.ಎಎಸ್ ಪಿ ಡಾ.ಶ್ರೀರಾಮ ಅರಸಿದ್ದಿ, ಅಧಿಕಾರಿಗಳಾದ ರವೀಂದ್ರ ನಾಯ್ಕೋಡಿ, ನಚಿಕೇತ ಜನಗೌಡರ, ರಮೇಶ ಅವಜಿ, ಸಿ.ಬಿ.ಬಾಗೇವಾಡಿ ಸೇರಿದಂತೆ ಇತರೆ ಅಧಿಕಾರಿಗಳು ರೌಡಿಶೀಟರ್‍ಗಳ ಪರೇಡ್ ಸಂದರ್ಭದಲ್ಲಿ ಹಾಜರಿದ್ದು, ಸೂಕ್ತ ಮಾಹಿತಿ ನೀಡಿದರು.