Advertisement

Karkala: ಯಕ್ಷಗಾನ ಪ್ರದರ್ಶನ ನಿಲ್ಲಿಸಲು ಮುಂದಾದ ಪೊಲೀಸರು… ಆಕ್ರೋಶ, ಎಸ್ಪಿ ಸ್ಪಷ್ಟನೆ

05:09 PM Jan 15, 2025 | Team Udayavani |

ಕಾರ್ಕಳ: ತಾಲೂಕಿನ ಶಿರ್ಲಾಲಿನ ಜಾರ್ಕಳ ಮುಂಡ್ಲಿಯಲ್ಲಿ ನಡೆದ ಯಕ್ಷಗಾನ ಪ್ರದರ್ಶನವನ್ನು ಪೊಲೀಸರು ನಿಲ್ಲಿಸಲು ಮುಂದಾದ ಘಟನೆ ಮಂಗಳವಾರದ ರಾತ್ರಿ ಸಂಭವಿಸಿದೆ. ಧ್ವನಿವರ್ಧಕಕ್ಕೆ ಅನುಮತಿ ಇಲ್ಲದ ಕಾರಣ ಪ್ರದರ್ಶನವನ್ನು ನಿಲ್ಲಿಸುವಂತೆ ಪೊಲೀಸರು ಸೂಚಿಸಿದ್ದು, ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

Advertisement

ಈ ಘಟನೆ ಬಗ್ಗೆ ಮಾತನಾಡಿದ ಗ್ರಾಮಸ್ಥರು, “ನಾವು ಪ್ರತಿ ವರ್ಷ ಈ ರೀತಿಯ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸುತ್ತೇವೆ. ಈ ಬಾರಿ ಮಾತ್ರ ಪೊಲೀಸರು ಅನಗತ್ಯ ತೊಂದರೆ ಕೊಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ಅಲ್ಲದೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಅವರು ಸಕಾಲಿಕವಾಗಿ ಅನುಮತಿ ನೀಡದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.

ಪೊಲೀಸರು ಮಾತನಾಡಿ, “ನಾವು ಕೇವಲ ನಿಯಮ ಪಾಲನೆ ಮಾಡುತ್ತಿದ್ದೇವೆ. ಧ್ವನಿವರ್ಧಕಕ್ಕೆ ಅನುಮತಿ ಇಲ್ಲದ ಕಾರಣ ಪ್ರದರ್ಶನವನ್ನು ನಿಲ್ಲಿಸುವಂತೆ ಸೂಚಿಸಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಈ ಘಟನೆಯಿಂದ ಗ್ರಾಮದಲ್ಲಿ ತೀವ್ರ ಕೋಲಾಹಲ ಸೃಷ್ಟಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯ ವೈರಲ್ ಆಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಹಲವರು ಈ ಘಟನೆಯನ್ನು ಖಂಡಿಸಿದ್ದಾರೆ.

ಎಸ್ಪಿ ಸ್ಪಷ್ಟನೆ:
ನಿನ್ನೆ(ಮಂಗಳವಾರ) ರಾತ್ರಿ ಅಜೆಕಾರ್ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾತ್ರಿ ವೇಳೆ ಧ್ವನಿವರ್ಧಕ ಬಳಸುವುದರಿಂದ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರಿಂದ ಕರೆ ಬಂದಿದೆ. ಪೊಲೀಸರು ಹೋಗಿ ವಿಚಾರಿಸಿದಾಗ ಕಾರ್ಯಕ್ರಮ ಆಯೋಜಿಸಲು ಅನುಮತಿ ಪಡೆಯದಿರುವುದು, ಧ್ವನಿವರ್ಧಕ ಬಳಸಲು ಕೂಡ ಅನುಮತಿ ಪಡೆಯದೆ ಇರುವುದು ಕಂಡುಬಂದಿದೆ. ರಾತ್ರಿ 11.30 ಗಂಟೆಗೆ ಪೊಲೀಸರು ಧ್ವನಿವರ್ಧಕವನ್ನು ಬಳಸದಂತೆ ತಿಳಿಸಿದರೂ ಕೂಡ, ಅದನ್ನು ನಿರಾಕರಿಸಿ ಬೆಳಿಗ್ಗೆ 4.30 ಗಂಟೆಯವರೆಗೆ ಮುಂದುವರಿಸುತ್ತಾರೆ. ಹೀಗಾಗಿ ಯಾವುದೇ ಅನುಮತಿ ಪಡೆಯದೆ ರಾತ್ರಿ ವೇಳೆ ಧ್ವನಿವರ್ಧಕ ಬಳಸಿ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಆಯೋಜಕರ ಮೇಲೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 02/25 ಕಲಂ. 292 BNS ಮತ್ತು 37 KP Act. ರಂತೆ ಪ್ರಕರಣ ದಾಖಲಿಸಲಾಗಿದೆ.

Advertisement

ಸಾರ್ವಜನಿಕ ಸ್ಥಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಮತ್ತು ಧ್ವನಿವರ್ಧಕ ಬಳಸಲು ಅನುಮತಿಯ ಅಗತ್ಯವಿದೆ ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ. ಮತ್ತು ಈ ಬಗ್ಗೆ ಸಾರ್ವಜನಿಕರಿಂದ ಯಾವುದೇ ದೂರುಗಳು ಬಂದಲ್ಲಿ, ಅದನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರಿಶೀಲಸಿ ಕ್ರಮ ಕೈಗೊಳ್ಳಲು ಪೊಲೀಸರು ಬದ್ಧರಾಗಿರುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: ODI;ಸ್ಪೋಟಕ ಶತಕ ಸಿಡಿಸಿದ ನಾಯಕಿ ಸ್ಮೃತಿ: ಟೀಮ್ ಇಂಡಿಯಾ ದಾಖಲೆ ಮೊತ್ತ

Advertisement

Udayavani is now on Telegram. Click here to join our channel and stay updated with the latest news.