Advertisement

ಸಾಮಾಜಿಕ ಅಂತರಕ್ಕೆ ಆಟೋ ದರ ದುಪ್ಪಟ್ಟು

04:45 PM May 21, 2020 | Naveen |

ವಿಜಯಪುರ: ಲಾಕ್‌ಡೌನ್‌ ನಾಲ್ಕನೇ ಹಂತದ ನಿರ್ಬಂಧ ಹೇರಿಕೆ ಸಂದರ್ಭದಲ್ಲಿ ಸರ್ಕಾರ ಷರತ್ತಿನೊಂದಿಗೆ ಸಾರಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಇದರಿಂದ ಮಂಗಳವಾರದಿಂದ ಜಿಲ್ಲೆಯಲ್ಲಿ ಜನರ ಸಾರಿಗೆ ಆರಂಭಗೊಂಡರೂ ಪ್ರಯಾಣಿಕರೇ ಇಲ್ಲದಿದ್ದರೂ ಸಾರಿಗೆ ದರದಲ್ಲಿ ಭಾರಿ ಏರಿಕೆ ಕಂಡಿದೆ.

Advertisement

ಸಾರಿಗೆ ಸಂಸ್ಥೆಯ ನಗರ ಸಾರಿಗೆ ಹಿಂದೆ ತಾನು ಘೋಷಿಸಿದ್ದ 3 ರೂ. ರಿಯಾಯ್ತಿ ಪ್ರಯಾಣ ದರವನ್ನು ಸದ್ದಿಲ್ಲದೇ ರದ್ದು ಮಾಡಿದ್ದು, ಪ್ರಯಾಣಿಕರು ಹೆಚ್ಚಿನ ಹೊರೆ ಬರಿಸಬೇಕಿದೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕಚೇರಿ ಆದೇಶದಿಂದಾಗಿ ರಿಯಾಯ್ತಿ ರದ್ದು ಮಾಡಿದ್ದಾಗಿ ಸಂಸ್ಥೆಯ ವಿಜಯಪುರ ಅಧಿ ಕಾರಿಗಳು ಸಮಜಾಯಿಸಿ ನೀಡುತ್ತಿದ್ದಾರೆ. ಆದರೆ, ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೇ ದರ ಏರಿಕೆ ಮಾಡಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

ಇತ್ತ ಬುಧವಾರದಿಂದ ನಗರದಲ್ಲಿ ಆಟೋ ಸಂಚಾರವೂ ಜೋರಾಗಿದ್ದು, ಕೋವಿಡ್‌ ನಿಯಮ ಪಾಲನೆ ಪರಿಣಾಮ ಮೂಲ ಪ್ರಯಾಣ ದರವನ್ನು ದ್ವಿಗುಣ ಮಾಡಿವೆ. ಮಹಾತ್ಮಾ ಗಾಂಧೀಜಿ ವೃತ್ತದಿಂದ ಯಾವುದೇ ಸ್ಥಳಕ್ಕೆ ಆಟೋದಲ್ಲಿ ಪ್ರಯಾಣ ಬೆಳೆಸಿದ್ದರೂ ಈ ಹಿಂದೆ 10 ರೂ. ದರ ಇತ್ತು. 3 ಜನ ಪ್ರಯಾಣಿಸಲು ಅವಕಾಶ ಇದ್ದರೂ 4-5 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದರು. ಆದರೆ, ಕೋವಿಡ್‌ ನಿಯಮದಿಂದಾಗಿ ಸಾಮಾಜಿಕ ಅಂತರ್‌ ಕಡ್ಡಾಯ ಪಾಲನೆಗಾಗಿ ಆಟೋದಲ್ಲಿ ಕೇವಲ ಇಬ್ಬರಿಗೆ ಪ್ರಯಾಣಿಸಲು ಆದೇಶಿಸಲಾಗಿದೆ. ಹೀಗಾಗಿ ಲಾಕ್‌ಡೌನ್‌ ಬಳಿಕ ಸತತ ಎರಡು ತಿಂಗಳ ಕಾಲ ಉದ್ಯೋಗ ಇಲ್ಲದೇ ಕಂಗಲಾಗಿರುವ ಆಟೋ ಚಾಲಕರು, ಹೊಸ ನಿಯಮದಿಂದ 10 ದರದಲ್ಲಿ ಇಬ್ಬರು ಪ್ರಯಾಣಿಕರನ್ನು ಕರೆದೊಯ್ಯಲು ಸಾಧ್ಯವಿಲ್ಲ. ಹೀಗಾಗಿ ಆಟೋ ಚಾಲಕರು ಬುಧವಾರ ಬೆಳಗ್ಗೆಯಿಂದ 20 ರೂ. ದರ ಎಂದು ಕೂಗಿ, ಪ್ರಯಾಣಿಕರ ಮನವೊಲಿಸುವುದು ಸಾಮಾನ್ಯವಾಗಿದೆ.

ರಸ್ತೆಗಳಲ್ಲಿ ಜನರೇ ಕಂಡು ಬಾರದ ಈ ಹಂತದಲ್ಲಿ ಬಾಡಿಗೆ ಆಟೋ ಓಡಿಸುವ ಚಾಲಕರು ನಿತ್ಯ 300 ರೂ. ಬಾಡಿಗೆ ನೀಡಬೇಕು. ಸಾಲ ಮಾಡಿ ಆಟೋ ಕೊಂಡವರು ಬ್ಯಾಂಕ್‌ ಸಾಲಕ್ಕಾಗಿ ಮಾಸಿಕ ಕನಿಷ್ಟ 5 ಸಾವಿರ ರೂ. ಹೊಂದಿಸಬೇಕು. ಇಂಥ ಸ್ಥಿತಿಯಲ್ಲಿ ಆಟೋ ಓಡಿಸುವುದು ದುಸ್ತರವಾಗಿದ್ದು, ಆಟೋ ಚಾಲಕರು ಈ ದುಡಿಮೆಗೆ ಶರಣು ಹೊಡೆಯಲು ಚಿಂತಿಸುತ್ತಿದ್ದಾರೆ. ದಿನಪೂರ್ತಿ ದುಡಿದರೂ 100 ರೂ. ಕೂಲಿಯೂ ದೊರೆಯದ ಕಾರಣ ಬಹುತೇಕ ಆಟೋ
ಚಾಲಕರು ಮಧ್ಯಾಹ್ನದ ಬಳಿಕ ಮನೆಗೆ ತೆರಳುತ್ತಿದ್ದಾರೆ. ಒಂದೇಡೆ ಸಾರಿಗೆ ಸಂಸ್ಥೆ ಸಾರ್ವಜನಿಕರಿಗೆ ಮಾಹಿತಿ ನೀಡದೇ ನಗರ ಸಾರಿಗೆ ಪ್ರಯಾಣ ದರವನ್ನು ಸದ್ದಿಲ್ಲದೇ ಹೆಚ್ಚಿಗೆ ಮಾಡಿದ್ದರೆ, ಮತ್ತೂಂದೆಡೆ ಆಟೋ ಚಾಲಕರು ತಮ್ಮ ಬಾಡಿಗೆ ದರವನ್ನು ದ್ವಿಗುಣ ಮಾಡಿದ್ದು, ಬಡ-ಮಧ್ಯಮ ವರ್ಗದ ಪ್ರಯಾಣಿಕರಿಗೆ ಹೊರೆಯಾಗಿ ಪರಿಣಮಿಸಿದೆ.

ಕಡಿಮೆ ಜನ ಸಂದಣಿ ಇರುವ ಪ್ರದೇಶದಲ್ಲಿ ನಗರ ಸಾರಿಗೆ ಪ್ರಯಾಣಿಕರನ್ನು ಆಕರ್ಷಿಸಲು ಅಂತಿಮ ಹಂತದ ಪ್ರಯಾಣದಲ್ಲಿ 3 ರೂ. ರಿಯಾಯ್ತಿ ನೀಡಲಾಗಿತ್ತು. ಕೇಂದ್ರ ಕಚೇರಿ ಆದೇಶದಂತೆ ಲಾಕ್‌ಡೌನ್‌ ನಿರ್ಬಂಧ ತೆರವಿನ ಬಳಿಕ ನಗರ ಸಾರಿಗೆಯಲ್ಲಿ ರಿಯಾಯ್ತಿ ದರ ರದ್ದು ಮಾಡಲಾಗಿದೆ.
ಗಂಗಾಧರ,ವಿಭಾಗೀಯ ನಿಯಂತ್ರಣಾಧಿಕಾರಿ
ಈ.ಕ.ರ.ಸಾರಿಗೆ ಸಂಸ್ಥೆ,
ವಿಜಯಪುರ

Advertisement

ನಷ್ಟ ಸರ್ಕಾರ ಭರಿಸಲಿ ಲಾಕ್‌ಡೌನ್‌ ಕಾರಣ ಎರಡು ತಿಂಗಳ ಕೆಲಸ ಇಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಡ ಪ್ರಯಾಣಿಕರಿಗೆ ಹೊರೆಯಾಗುವ ನಗರ ಸಾರಿಗೆ ದರ ಏರಿಕೆ ರದ್ದು ಮಾಡಬೇಕು. ಆಟೋ ಚಾಲಕರಿಗೆ ಆರ್ಥಿಕ ನಷ್ಟವಾಗುತ್ತಿದ್ದರೆ ಸರ್ಕಾರ ಭರಿಸಿಕೊಡಬೇಕೇ ಹೊರತು ಬಡವರೇ ಪ್ರಯಾಣಿಸುವ ಆಟೋಗಳ ದ್ವಿಗುಣ ದರ ಹೊರೆ ತಪ್ಪಿಸಬೇಕು.
ಆಶಾ ಚವ್ಹಾಣ,
ಬಂಜಾರಾ ಕ್ರಾಸ್‌ ನಿವಾಸಿ

ಲಾಕ್‌ಡೌನ್‌ ನಿರ್ಬಂಧದ ದುಸ್ತರ ಜೀವನ ನಡೆಸಿದ ನಮಗೆ ಇದೀಗ ಇಬ್ಬರು ಪ್ರಯಾಣಿಕರ ಕಡ್ಡಾಯ ನಿಮಯ ನಷ್ಟಕ್ಕೆ ಕಾರಣವಾಗುತ್ತಿದೆ. ಬಾಡಿಗೆ ಆಟೋ ಓಡಿಸುವವರಿಗೆ 20 ರೂ. ದರ ಪಡೆದರೂ ನಿತ್ಯ 200 ರೂ. ಕೂಡ ಆದಾಯ ಹೊಂದಿಸಿವುದು ಕಷ್ಟವಾಗಿದೆ. ಸ್ವಂತ ಆಟೋ ಇದ್ದರೂ ಬ್ಯಾಂಕ್‌ಗಳಿಗೆ 3 ತಿಂಗಳ ಕಂತನ್ನು ಬಡ್ಡಿ ಸಮೇತ ಕಟ್ಟಬೇಕಿರುವುದರಿಂದ ಈಗಿನ ನಿಯಮ ನಮ್ಮ ಬದುಕನ್ನು ಹೈರಾಣಾಗಿಸಿದೆ.
ಸಂಜಯ ಬುಚ್ಚಮ್‌

ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next