Advertisement

Vijayapura; ರೈತರಿಗೆ ಭೂಸ್ವಾಧೀನ ಪರಿಹಾರ ನೀಡದ ಸಣ್ಣ ನೀರಾವರಿ ಕಚೇರಿ ಜಪ್ತಿ

12:51 PM Aug 30, 2024 | keerthan |

ವಿಜಯಪುರ: ಸರ್ಕಾರದ ಯೋಜನೆಗೆ ರೈತರಿಂದ ಭೂಮಿ ಸ್ವಾಧೀನ ಮಾಡಿಕೊಂಡರೂ ಸಂತ್ರಸ್ತರಿಗೆ ಪರಿಹಾರ ನೀಡದ ಕಾರಣಕ್ಕೆ ನ್ಯಾಯಾಲಯದ ಆದೇಶದಂತೆ ಸಣ್ಣ ನೀರಾವರಿ ಕಚೇರಿ ಜಪ್ತಿ ಮಾಡಲಾಗಿದೆ.

Advertisement

ಇಂಡಿ ಪಟ್ಟಣದ ವಸಂತ ನಗರದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 2004 ರಲ್ಲಿ 14 ರೈತರಿಂದ 16 ಎಕರೆ ಜಮೀನು ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು.

ಪ್ರತಿ ಎಕರೆಗೆ 4.16 ಲಕ್ಷ ರೂ. ಗಳಂತೆ ಪರಿಹಾರ ನಿಗದಿ ಮಾಡಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಪರಿಹಾರ ಧನ ಕಡಿಮೆ ಆಯಿತೆಂದು ರೈತರು 2016 ರಲ್ಲಿ ಕಲಬುರಗಿ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರತಿ ಎಕರೆಗೆ 19.66 ಲಕ್ಷ ರೂ. ಗಳಂತೆ ಬಾಧಿತ ರೈತರಿಗೆ ಪರಿಹಾರ ನೀಡುವಂತೆ 2022 ರಲ್ಲಿ ಹೈಕೋರ್ಟ್ ಆದೇಶಿಸಿತ್ತು.

ಹೈಕೋರ್ಟ್ ಆದೇಶ ನೀಡಿ ಎರಡು ವರ್ಷ ಗತಿಸಿದರೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸಂತ್ರಸ್ತ ರೈತರಿಗೆ ಪರಿಹಾರ ನೀಡಿರಲಿಲ್ಲ. ಇದರಿಂದ ಭೂಮಿ ಕಳೆದುಕೊಂಡ ರೈತರು ತಮ್ಮ ಬದುಕಿಗೆ ಆಸರೆಯಾಗಿದ್ದ ಭೂಮಿಯೂ ಹೋಯಿತು, ಪರಿಹಾರ ಧನವೂ ಕೈ ಸೇರದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.

Advertisement

ಈ ಮಧ್ಯೆ ತಮಗೆ ಪರಿಹಾರ ಧನ ಹಾಗೂ ಬಡ್ಡಿ ಸೇರಿ 9.50 ಕೋಟಿ ರೂ. ಬರಬೇಕಿರುವ ಭೂಸ್ವಾಧೀನ ಪರಿಹಾರದ ಮೊತ್ತಕ್ಕಾಗಿ ಆಗ್ರಹಿಸಿ, ನ್ಯಾಯಾಲಯದ ಮೊರೆ ಹೋಗಿದ್ದರು.

ತಮಗೆ ಪರಿಹಾರ ನೀಡದ ಸರಕಾರದ ಸಣ್ಣ ನೀರಾವರಿ ಇಲಾಖೆಯ ಕಛೇರಿ ಜಪ್ತಿಗೆ ಇದೀಗ ನ್ಯಾಯಾಲಯದ ಆದೇಶದಂತೆ ವಕೀಲರ ಮೂಲಕ ಕಛೇರಿಗೆ ಆಗಮಿಸಿದ ರೈತರು 16 ಕಂಪ್ಯೂಟರ್ ಗಳನ್ನು ಮಾತ್ರ ಜಪ್ತಿ ಮಾಡಿ, ಇಂಡಿ ನ್ಯಾಯಾಲಯಕ್ಕೆ ಹಾಜರು ಮಾಡಿದ್ದಾರೆ.

ಈಗಲಾದರೂ ಬಾಧಿತ ರೈತರ ಸಂಕಷ್ಟ ಅರಿತು ಸರ್ಕಾರ ಹಾಗೂ ಅಧಿಕಾರಿಗಳು ತಮಗೆ ಪರಿಹಾರ ನೀಡುವಂತೆ ಸಂತ್ರಸ್ತರ ರೈತರು ಗೋಗರೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next