ವಿಜಯಪುರ: ಕೊಳವೆ ಬಾವಿಗೆ ಬಿದ್ದು ಸುರಕ್ಷಿತವಾಗಿ ರಕ್ಷಿಸಲ್ಪಟ್ಟ ಸಾತ್ವಿಕನಿಗಾಗಿ ಹರಕೆ ಹೊತ್ತಿದ್ದ ಸ್ವಾಮೀಜಿಯೊಬ್ಬರು ಹರಕೆ ತೀರಿಸಿದ್ದಾರೆ.
ಏ.3 ರಂದು ಸಂಜೆ ವೇಳೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಸಾತ್ವಿಕ್ ಮುಜಗೊಂಡ 14 ತಿಂಗಳ ಮಗು ಜಮೀನಿನಲ್ಲಿ ಕೊರೆಸಿದ್ದ ಕೊಳವೆ ಬಾವಿಗೆ ಬಿದ್ದಿದ್ದ. ಈ ಸಂದರ್ಭದಲ್ಲಿ ಹಲವರು ಸಾತ್ವಿಕ ಸುರಕ್ಷಿತವಾಗಿ ಕೊಳವೆ ಬಾವಿಯಿಂದ ಹೊರಬರಲಿ ಎಂದು ವಿವಿಧ ದೈವಗಳಿಗೆ ಹರಕೆ ಹೊತ್ತಿದ್ದರು.
ಅದೇ ರೀತಿ ಕೊಲ್ಹಾರ ಪಟ್ಟಣದ ದಿಗಂಬರೇಶ್ವರ ಮಠದ ಪೀಠಾಧಿಪತಿ ಕಲ್ಲಿನಾಥ ಶ್ರೀಗಳು ಸಾತ್ವಿಕ ಸುರಕ್ಷಿತವಾಗಿ ಹೊರಬಂದರೆ ತಮ್ಮ ಮಠದಲ್ಲಿ ಲಚ್ಯಾಣ ಸಿದ್ಧಲಿಂಗ ಮಹಾರಾಜರ ಪುರಾಣ ಆರಂಭಿಸುವುದಾಗಿ ಹರಕೆ ಹೊತ್ತಿದ್ದರು.
ಕೇವಲ 21 ಗಂಟೆಯಲ್ಲೇ ವಿವಿಧ ರಕ್ಷಣಾ ತಂಡಗಳು ಸಾತ್ವಿಕ್ ನನ್ನು ಸುರಕ್ಷಿತವಾಗಿ ಹೊರ ತೆಗೆದಿದ್ದವು.
ಹೀಗಾಗಿ ಕೊಲ್ಹಾರ ದಿಗಂಬರೇಶ್ವರ ಮಠಾಧೀಶ ಕಲ್ಲಿನಾಥ ಶ್ರೀಗಳು ತಮ್ಮ ಮಠದಲ್ಲಿ ಸಿದ್ಧಲಿಂಗ ಮಹಾರಾಜರ ಪುರಾಣ ಆರಂಭಿಸುವ ಮೂಲಕ ಹರಕೆ ತೀರಿಸಿದ್ದಾರೆ.
ಸಿದ್ಧಲಿಂಗ ಮಹಾರಾಜರ ಪುರಾಣದ ಸಂದರ್ಭದಲ್ಲಿ ಬಾಲ ಸಿದ್ಧಲಿಂಗನ ತೊಟ್ಟಿಲ ಶಾಸ್ತ್ರ ಸಂದರ್ಭದಲ್ಲಿ ಸಾತ್ವಿಕನ ತಾಯಿ ಪೂಜಾ ಮುಜಗೊಂಡ ಅವರಿಂದಲೇ ಸಾತ್ವಿಕನನ್ನೇ ತೊಟ್ಟಿಲಲ್ಲಿ ಹಾಕಿ ಶಾಸ್ತ್ರೋಕ್ತವಾಗಿ ಸಿದ್ಧಲಿಂಗ ಎಂದು ನಾಮಕರಣ ಮಾಡಿ ಹರಕೆ ತೀರಿಸಿದ್ದಾರೆ.
ಸಾಮಾನ್ಯವಾಗಿ ಪುರಾಣ ಕಾರ್ಯಕ್ರಮದಲ್ಲಿ ಶರಣರು, ಮಹಾತ್ಮರ ಜನನದ ಸನ್ನಿವೇಶದ ಸಂದರ್ಭದ ಬಂದಾಗ ತೊಟ್ಟಿಲಿಗೆ ಗೊಂಬೆಗಳನ್ನು ಹಾಕಿ ಶಾಸ್ತ್ರ ಮಾಡುತ್ತಾರೆ. ಆದರೆ ಕೊಲ್ಹಾರ ದಿಗಂಬರೇಶ್ವರ ಮಠಾಧೀಶರು ಮರುಜನ್ಮ ಪಡೆದ ಸಾತ್ವಿಕನನ್ನು ತಾಯಿ ಪೂಜಾ ಮೂಲಕ ತೊಟ್ಟಿಲಿಗೆ ಹಾಕಿಸಿ ಸಿದ್ಧಲಿಂಗ ಮಹಾರಾಜರ ತೊಟ್ಟಿಲ ಶಾಸ್ತ್ರ ಮಾಡಿ ಹರಕೆ ತೀರಿಸಿ ಗಮನ ಸೆಳೆದಿದ್ದಾರೆ.
ಮತ್ತೊಂದೆಡೆ ಸಾತ್ವಿಕ ಹೆತ್ತವರು ಕೂಡ ತಮ್ಮ ಮಗ ಕೊಳವೆ ಬಾವಿ ಗಂಡಾಂತರದಿಂದ ಪಾರಾಗಿ ಬಂದರೆ ಗ್ರಾಮದ ಆರಾಧ್ಯ ದೈವ ಲಚ್ಯಾಣ ಸಿದ್ಧಲಿಂಗ ಮಹಾರಾಜರ ಹೆಸರನ್ನೇ ಮರು ನಾಮಕರಣ ಮಾಡುವುದಾಗಿ ಹರಕೆ ಹೊತ್ತಿದ್ದಾರೆ.
ಏ.28 ರಂದು ಲಚ್ಯಾಣ ಸಿದ್ಧಲಿಂಗ ಮಹಾರಾಜರ ಜಾತ್ರೆ ಸಂದರ್ಭದಲ್ಲಿ ಸಾತ್ವಿಕಗೆ ಸಿದ್ಧಲಿಂಗ ಮಹಾರಾಜರ ಎಂದು ಮರು ನಾಮಕರಣ ಮಾಡುವ ಸಿದ್ಧತೆಯಲ್ಲಿದ್ದಾರೆ. ಅದಕ್ಕೂ ಮುನ್ನವೇ ಕೊಲ್ಹಾರ ದಿಗಂಬರೇಶ್ವರ ಮಠಾಧೀಶರು ಸಿದ್ಧಲಿಂಗ ಮಹಾರಾಜರ ಪುರಾಣದ ಸಂದರ್ಭದಲ್ಲಿ ಸಾತ್ವಿಕನನ್ನು ತೊಟ್ಟಿಲಿಗೆ ಹಾಕಿ ಶಾಸ್ತ್ರೋಕ್ತವಾಗಿ ಸಿದ್ಧಲಿಂಗ ಎಂದು ನಾಮಕರಣ ಮಾಡಿದ್ದಾರೆ.