ವಿಜಯಪುರ: ಪತ್ನಿಯ ಶೀಲ ಶಂಕಿಸಿ ಹತ್ಯೆ ಮಾಡಿದ ಆರೋಪಿ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಿಜಯಪುರ ನ್ಯಾಯಾಲಯದ ನ್ಯಾಯಾಧೀಶರು ಶುಕ್ರವಾರ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ನಗರದ ಕಾಸಗೇರಿ ನಿವಾಸಿಯಾದ ಮಲ್ಲಿಕಾರ್ಜುನ ಪವಾರ ಪತ್ನಿಯ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ. ಮಲ್ಲಿಕಾರ್ಜುನನ ಪತ್ನಿ ಸೋನಾಬಾಯಿ ತಮ್ಮ ಸಂಬಂಧಿ ಚಂದ್ರಶೇಖರ ರಾಠೋಡ ಜೊತೆ ಮಾತನಾಡುವುದನ್ನು ಅನೈತಿಕ ಸಂಬಂಧ ಎಂದು ಶಂಕಿಸಿ 2019 ರ ಮಾರ್ಚ 5 ರಂದು ಮನೆಯಲ್ಲಿ ಮಲಗಿದ್ದ ಪತ್ನಿ ಮೇಲೆ ನಸುಕಿನಲ್ಲಿ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದ.
ಮೃತ ಸೋನಾಬಾಯಿ ಸಹೋದರ ಸಂತೋಷ ರಾಠೋಡ್ ಈ ಕುರಿತು ಗಾಂಧಿಚೌಕ್ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಸಿಪಿಐ ಕಪಿಲದೇವ ಗಡದ ಹಾಗೂ ಪಿಎಸ್‍ಐ ಆರೀಫ್ ಮುಶಾಪುರಿ ಅವರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ವಿಜಯಪುರ ಮೂರನೇ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುಭಾಶ ಸಂಕದ, ಅಭಿಯೋಗ ಸಲ್ಲಿಸಿದ ಸಾಕ್ಷಿ-ಪುರಾವೆಗನ್ನು ಪರಿಗಣಿಸಿ, ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಇದಲ್ಲದೇ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆಯ ಜೊತೆಗೆ 25 ಸಾವಿರ ರೂ. ದಂಡವನ್ನೂ ವಿಧಿಸಿದ್ದು, ಮೃತಳ ಮಕ್ಕಳಿಗೆ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಪರಿಹಾರ ನೀಡುವಂತೆ ಆದೇಶಿಸಿದೆ.ಸರ್ಕಾರದ ಪರವಾಗಿ ಮೂರನೇ ಅಧಿಕ ಸರ್ಕಾರಿ ಅಭಿಯೋಜಕರಾದ ಬಿ.ಡಿ.ಬಾಗವಾನ ವಾದ ಮಂಡಿಸಿದ್ದರು.